Header Ads Widget

ರೇಡಿಯೋ ಮಣಿಪಾಲ್ “ವೃತ್ತಿ ಚಿಂತನ” – ಶಿಕ್ಷಣ ಮಾರ್ಗದರ್ಶನ ಸರಣಿ ಕಾರ್ಯಕ್ರಮದ ಉದ್ಘಾಟನೆ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್  ಸಂಸ್ಥೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್- ಮಣಿಪಾಲ ಕ್ಯಾಂಪಸ್ ನಲ್ಲಿರುವ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರ ಸಮುದಾಯದ ಧ್ವನಿಯಾಗಿ, ಶಿಕ್ಷಣ, ಅರಿವು ಮತ್ತು ಸಾಮಾಜಿಕ ಜಾಗೃತಿಗಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದು ಮತ್ತೊಂದು ವಿನೂತನ ಹೆಜ್ಜೆಗೆ ಮುಂದಾಗಿದೆ.

ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಮೂಲಕ ಪ್ರಸಾರಗೊಳ್ಳಲಿರುವ ವೃತ್ತಿ ಮಾರ್ಗದರ್ಶನ ಸರಣಿ ಕಾರ್ಯಕ್ರಮ— “ವೃತ್ತಿ ಚಿಂತನ- ಶಿಕ್ಷಣ ಮಾರ್ಗದರ್ಶನ" ಕಾರ್ಯಕ್ರಮವು ಪರ್ಕಳದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡಿತು.

ಈ ಸರಣಿ ಕಾರ್ಯಕ್ರವು ವಾರಕ್ಕೆ ಒಂದು ಬಾರಿ ಪ್ರಸಾರವಾಗಲಿದ್ದು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಸಾಮಾನ್ಯ ಜನತೆಗೆ ವೃತ್ತಿ ಆಯ್ಕೆ ಕುರಿತ ಸರಿಯಾದ ಮಾಹಿತಿ, ಸ್ಪಷ್ಟತೆ ಮತ್ತು ಪ್ರೇರಣೆಯನ್ನು ನೀಡುವ ಉದ್ದೇಶ ಹೊಂದಿದೆ.

"ವೃತ್ತಿ ಚಿಂತನ– ಶಿಕ್ಷಣ ಮಾರ್ಗದರ್ಶನ" ಸರಣಿ ಕಾರ್ಯಕ್ರಮಕ್ಕೆ

• ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ

• ಪದವಿಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ

• ಮುಖ್ಯೋಪಾಧ್ಯಾಯರ ಸಂಘ, ಉಡುಪಿ ಜಿಲ್ಲೆ

• ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ

• ಉಡುಪಿ ಜಿಲ್ಲಾ ಅನುದಾನಿತ ಮತ್ತು ಅನುದಾನರಹಿತ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ

• ಮತ್ತು ಶೆಫಿನ್ಸ್‌ ಉಡುಪಿ

ಸಹಯೋಗ ನೀಡುತ್ತಿದೆ. 

 “ವೃತ್ತಿ ಚಿಂತನ- ಶಿಕ್ಷಣ ಮಾರ್ಗದರ್ಶನ" ಸರಣಿಯ ಸಂಪನ್ಮೂಲ ವ್ಯಕ್ತಿಯಾಗಿ ವೃತ್ತಿ ಮಾರ್ಗದರ್ಶನ ಕ್ಷೇತ್ರದಲ್ಲಿ ಎರಡು ದಶಕಗಳಿಗೂ ಅಧಿಕ ಅನುಭವ ಹೊಂದಿದ್ದು

• ಡಯಟ್, ಉಡುಪಿ ಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರಿಗೆ ತರಬೇತಿ ನೀಡಿದ ಅನುಭವ ಹೊಂದಿರುವ ಮತ್ತು ಸಾವಿರಾರು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಿರುವ ತಜ್ಞರಾದ ಮನೋಜ್ ಕಡಬಾ ಮಾಹಿತಿ ನೀಡಲಿದ್ದಾರೆ.

ಈ ಮೂಲಕ, ವೃತ್ತಿ ಮಾರ್ಗದರ್ಶನವು ವೇದಿಕೆಗಳಿಗೆ ಮಾತ್ರ ಸೀಮಿತವಾಗದೆ,ರೇಡಿಯೋ ಮೂಲಕ ಜನಸಾಮಾನ್ಯರ ಮನೆಬಾಗಿಲಿಗೆ ತಲುಪಲಿದೆ.ಸಮುದಾಯ ಬಾನುಲಿಯ ಪರಿಕಲ್ಪನೆಯಂತೆ ಇದು ಸಮುದಾಯದಿಂದ ಸಮುದಾಯಕ್ಕೆ ಸಮರ್ಪಿಸಲ್ಪಡುತ್ತಿದೆ.

ಡಯಟ್ ಉಡುಪಿ ಪ್ರಾಂಶುಪಾಲರಾದ ಡಾ. ಅಶೋಕ್ ಕಾಮತ್ ಮತ್ತು ಉಡುಪಿ ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಕಿರಣ್ ಹೆಗ್ಡೆ ಕಾರ್ಯಕ್ರಮದ ಬ್ಯಾನರ್‌ ಬಿಡುಗಡೆ ಮಾಡುವ ಮೂಲಕ ಸರಣಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. 

ಈ ಸಂದರ್ಭದಲ್ಲಿ ರೋಟರಿ ಪರ್ಕಳ ಕಾರ್ಯದರ್ಶಿ ವಿಶ್ವನಾಥ ನಾಯಕ್, ಜೆ.ಸಿ.ಐ ವಲಯಾಧ್ಯಕ್ಷರಾದ ರಾಜೇಂದ್ರ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಲ್ಲಮ್ಮ, ನಾಗೇಶ್,ಉಮಾ, ಪರ್ಕಳ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಆನಂದ ನಾಯಕ್, ರೇಡಿಯೋ ಮಣಿಪಾಲ್ ನಲ್ಲಿ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರಾದ ಡಾ.ರಶ್ಮಿ ಅಮ್ಮೆಂಬಳ ಹಾಗೂ ಸಂಪನ್ಮೂಲ ವ್ಯಕ್ತಿ ಮನೋಜ್ ಕಡಬಾ ಉಪಸ್ಥಿತರಿದ್ದರು. ಶೆಬಾ ಮನೋಜ್ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು