ಉಡುಪಿ: ಮಕ್ಕಳಲ್ಲಿ ರಂಗ ಪ್ರಜ್ಞೆ ಬೆಳೆಸುವ ಮೂಲಕ ನೈತಿಕ ಮೌಲ್ಯಗಳ ತಳಹದಿಯಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ರಂಗಭೂಮಿ ಉಡುಪಿ ಅಧ್ಯಕ್ಷರು ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಸೋಮವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ಈ ವರ್ಷದ "ರಂಗಭೂಮಿ ರಂಗ ಶಿಕ್ಷಣ" ಅಭಿಯಾನದಲ್ಲಿ ಉಡುಪಿ ನಗರದ ಆಯ್ದ 11 ಪ್ರೌಢಶಾಲೆಗಳ 250 ಕ್ಕೂ ಅಧಿಕ ಮಕ್ಕಳ ಭಾಗವಹಿಸುವಿಕೆಯಲ್ಲಿ 11 ಹೆಸರಾಂತ ನಿರ್ದೇಶಕರಿಂದ ತಯಾರಾದ 11 ಕಿರು ನಾಟಕಗಳ ಪ್ರದರ್ಶನ `ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ ' ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಂಗ ಶಿಕ್ಷಣದಿಂದ ಮಕ್ಕಳಲ್ಲಿ ಮನೋವಿಕಾಸ, ಎಲ್ಲರ ಮುಂದೆ ಮಾತನಾಡುವ ಧೈರ್ಯ, ಭಾಷಾ ಜ್ಞಾನ ಜೊತೆಗೆ ಬದುಕನ್ನು ಎದುರಿಸುವ ಜೀವನ ಮೌಲ್ಯಗಳ ಪಾಠ ದೊರೆಯುತ್ತದೆ. ಮುಂದೆ ಅವರು ಕಲಾವಿದರಾಗುತ್ತಾರೋ ಬಿಡುತ್ತಾರೋ ಅವರಿಗೆ ಬಿಟ್ಟ ವಿಷಯ ಆದರೆ ಒಂದು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಅವರಿಂದ ಕೊಡುಗೆ ಖಂಡಿತ ಸಿಕ್ಕೇ ಸಿಗುತ್ತದೆ. ಈ ನಿಟ್ಟಿನಲ್ಲಿ ರಂಗಭೂಮಿ ಉಡುಪಿ ಸಂಸ್ಥೆ ಶಾಲಾ ಕಾಲೇಜು ಮಕ್ಕಳಿಗೆ ರಂಗ ಶಿಕ್ಷಣ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.
ಈ ಬಾರಿ 11 ಶಿಕ್ಷಣ ಸಂಸ್ಥೆಗಳು ರಂಗ ಶಿಕ್ಷಣ ಪಡೆಯಲು ಮುಂದಾಗಿವೆ. ಇದನ್ನು ಸುಮಾರು 25 ಶಾಲೆಗಳಿಗೆ ವಿಸ್ತರಿಸಬೇಕು ಎಂಬುದು ನಮ್ಮ ಉದ್ದೇಶ. ಯಕ್ಷ ಶಿಕ್ಷಣ ಪಡೆದ ಮಕ್ಕಳು ಹೇಗೇ ಶಿಕ್ಷಣದಲ್ಲಿ ಮುಂದೆ ಇದ್ದಾರೋ ಹಾಗೆಯೇ ರಂಗ ಶಿಕ್ಷಣ ಪಡೆದ ಮಕ್ಕಳು ಕೂಡಾ ಉತ್ತಮ ಅಂಕಗಳಿಸಿ ಶೈಕ್ಷಣಿಕ ಸಾಧನೆ ಮಾಡುತ್ತಾರೆ. ಈ ಬಗ್ಗೆ ಸಂಶಯ ಬೇಡ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಣಿಪಾಲ HPR ಸಂಸ್ಥೆಯ ಮುಖ್ಯಸ್ಥ ಹರಿಪ್ರಸಾದ್ ರೈ, ಮಕ್ಕಳ ಮನಸ್ಸು ಅತೀ ಸೂಕ್ಷ್ಮ ಹಾಗೂ ಅಷ್ಟೇ ಚುರುಕಾಗಿದೆ. ಕೇವಲ ಅಂಕ ಗಳಿಸುವುದೇ ಮೂಲ ಉದ್ದೇಶ ಹೊಂದಿರುವ ಈಗಿನ ಶಿಕ್ಷಣ ವ್ಯವಸ್ಥೆ ಯಲ್ಲಿ ಇಂತಹ ಪಠ್ಯೇತರ ಚಟುವಟಿಕೆಗಳನ್ನು ಉತ್ತೇಜಿಸುವ ಅಗತ್ಯವಿದೆ. ರಂಗ ಶಿಕ್ಷಣ ಮೂಲಕ ಮಕ್ಕಳಲ್ಲಿ ಜೀವನ ಪಾಠ ಕಲಿಸಲು ಮುಂದಾಗಿರುವ ರಂಗಭೂಮೀ ಉಡುಪಿ ಸಂಸ್ಥೆ ಅಭಿನಂದನಾರ್ಹ ಎಂದು ಅವರು ತಿಳಿಸಿದರು.
ಎಂಜಿಎಂ ಕಾಲೇಜಿನ ಉಪ ಪ್ರಾಂಶುಪಾಲ ವಿಶ್ವನಾಥ್ ಪೈ ಮಾತನಾಡಿ, ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳನ್ನು ನಾಟಕದತ್ತ ಸೆಳೆಯುವ ರಂಗ ಭೂಮಿ ಉಡುಪಿ ಸಂಸ್ಥೆಯ ಕಾರ್ಯ ಶ್ಲಾಘನೀಯ.ಮಕ್ಕಳ ಸೃಜನಶೀಲತೆ ಹೊರಬರಲು ನಾಟಕ ಒಂದು ವೇದಿಕೆಯಾಗಿದೆ. ಈ ಶಿಕ್ಷಣ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನಾಂದಿಯಾಗಲಿದೆ ಎಂದರು.
ರಂಗಶಿಕ್ಷಣ ಸಂಚಾಲಕ ವಿದ್ಯಾವಂತ ಆಚಾರ್ಯ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ರಂಗಭೂಮಿ ಉಡುಪಿಯ ಉಪಾಧ್ಯಕ್ಷರುಗಳಾದ ರಾಜಗೋಪಾಲ್ ಬಲ್ಲಾಳ್ ಹಾಗೂ ಭಾಸ್ಕರ್ ರಾವ್ ಕಿದಿಯೂರು, ಖಜಾಂಚಿ ಭೋಜ, ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ ಉಪಸ್ತಿತರಿದ್ದರು.
ರವಿರಾಜ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಅಮಿತಾಂಜಲಿ ಕಿರಣ್ ವಂದಿಸಿದರು.
ಈ ಸಂದರ್ಭದಲ್ಲಿ ರಂಗ ಶಿಕ್ಷಣ ಪಡೆದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಗೌರವಾರ್ಪಣೆ ನಡೆಯಿತು.
ಸಭಾ ಕಾರ್ಯಕ್ರಮದ ಬಳಿಕ ಕುಂಜಿಬೆಟ್ಟು ಶಾರದಾ ರೆಸಿಡೆನ್ಶಿಯಲ್ ಸ್ಕೂಲಿನ ಮಕ್ಕಳಿಂದ `ಪುಷ್ಪರಾಣಿ', ಕಲ್ಯಾಣಪುರ ಮಿಲಾಗ್ರಿಸ್ ಪ್ರೌಢಶಾಲೆಯ ಮಕ್ಕಳಿಂದ `ಕಾಡಿನ ಪಕ್ಷಿ ಪ್ಯಾಟೆಗೆ ಬಂತು ', ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲಿನ ಮಕ್ಕಳಿಂದ `ಅಳಿಲು ಮರಿಯ ಹೊರಳು ಸೇವೆ ', ಆದಿ ಉಡುಪಿ ಪ್ರೌಢಶಾಲೆಯ ಮಕ್ಕಳಿಂದ ಲಂಬಕರ್ಣನ ಉಷ್ಣೇಶ, ಉಡುಪಿ ಬೋರ್ಡ್ ಹೈಸ್ಕೂಲ್ ಮಕ್ಕಳಿಂದ `ಕಾವ್ಯ ಕಥಾನಾಟಕ' ಹಾಗೂ ಮಣಿಪಾಲ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ಮಕ್ಕಳಿಂದ `ಕಾಮನ್‌ಸೆನ್ಸ್ ' ನಾಟಕ ಪ್ರದರ್ಶನಗೊಳ್ಳಲಿವೆ.
ನಾಟಕೋತ್ಸವದ ಸಾಮಾರೋಪ ಡಿ.30ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದ್ದು, ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸುವರು.ಅದಾನಿ ಗ್ರೂಪ್ಸ್ನ ಅಧ್ಯಕ್ಷ ಕಿಶೋರ್ ಆಳ್ವ ಸಮಾರೋಪ ಭಾಷಣ ಮಾಡಲಿದ್ದಾರೆ. ಉದ್ಯಮಿಗಳಾದ ಜಮಾಲುದ್ದೀನ್ ಅಬ್ಬಾಸ್, ಅಲಯನ್ಸ್ ಜಿಲ್ಲೆ 275ಎಸ್‌ರ ಜಿಲ್ಲಾ ಗವರ್ನರ್ ಅಲೈ ಸುನೀಲ್ ಸಾಲ್ಯಾನ್, ಉದ್ಯಮಿ ಪೆರಣಂಕಿಲ ಶ್ರೀಶ ನಾಯಕ್, ಎಂಜಿಎA ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ ಹಾಗೂ ರಂಗಶಿಕ್ಷಣ ಸಂಚಾಲಕ ವಿದ್ಯಾವಂತ ಆಚಾರ್ಯ ಉಪಸ್ಥಿತರಿರುವರು.
ಅಂದು ಬೆಳಗ್ಗೆ 9.30ಕ್ಕೆ ಉಡುಪಿ ಬೈಲಕೆರೆ ಶ್ರೀ ಅನಂತೇಶ್ವರ ಪ್ರೌಢಶಾಲೆಯ ಮಕ್ಕಳಿಂದ `ಒಮ್ಮೆ ಸಿಕ್ಕರೆ ' ನಾಟಕ, 11 ಗಂಟೆಗೆ ನಿಟ್ಟೂರು ಪ್ರೌಢಶಾಲಾ ಮಕ್ಕಳಿಂದ `ಕತ್ತಲೆ ನಗರ ತಲೆಕೆಟ್ಟ ರಾಜ ', ಮಧ್ಯಾಹ್ನ 2 ಗಂಟೆಗೆ ಕುಂಜಿಬೆಟ್ಟು ಟಿಎ ಪೈ ಆಂಗ್ಲ ಮಾಧ್ಯಮ ಶಾಲೆಯಿಂದ `ತಾರೆ ', ಅಪರಾಹ್ನ 3 ಗಂಟೆಗೆ ಸೈಂಟ್ ಸಿಸಿಲೀಸ್ ಪ್ರೌಢಶಾಲೆ ಮಕ್ಕಳಿಂದ `ಅಳಿಲು ರಾಮಾಯಣ ' ಹಾಗೂ ಸಂಜೆ 4 ಗಂಟೆಗೆ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಂದ ` ಎಂಡ್ ಇಲ್ಲದ ಬಂಡ್ ಅವತಾರ ' ನಾಟಕಗಳು ಪ್ರದರ್ಶನಗೊಳ್ಳಲಿವೆ.
ಡಿ.29ರಂದು 6 ಮತ್ತು ಡಿ.30ರಂದು 5 ಶಿಕ್ಷಣ ಸಂಸ್ಥೆಗಳ ಮಕ್ಕಳಿಂದ ನಾಟಕ ಪ್ರದರ್ಶನಗಳು ನಡೆಯಲಿವೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

0 ಕಾಮೆಂಟ್‌ಗಳು