ಕೃಷ್ಣಮಠದಲ್ಲಿ ಮಕರಸಂಕ್ರಾಂತಿ ಉತ್ಸವ

ಉಡುಪಿ: ಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಮಧ್ವಾಚಾರ್ಯರು ಕೃಷ್ಣ ದೇವರನ್ನು ಪ್ರತಿಷ್ಠಾ ದಿನದ ಅಂಗವಾಗಿ ಮಕರಸಂಕ್ರಾಂತಿ ಮೂರು ತೇರಿನ ಉತ್ಸವ ನಡೆಯಿತು.

ಸಾಯಂಕಾಲ ಶ್ರೀಕೃಷ್ಣ, ಮುಖ್ಯ ಪ್ರಾಣ ದೇವರಿಗೆ ಮಧ್ವ ಸರೋವರದಲ್ಲಿ ವೈಭವದ ತೆಪ್ಪೋತ್ಸವ ನಡೆಯಿತು. 

ಬಳಿಕ ರಥಬೀದಿಯಲ್ಲಿ ಬ್ರಹ್ಮರಥದಲ್ಲಿ ಕೃಷ್ಣನ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಸಣ್ಣರಥದಲ್ಲಿ ಮುಖ್ಯಪ್ರಾಣ ದೇವರು, ಗರುಡರಥದಲ್ಲಿ ಅನಂತೇಶ್ವರ ಮತ್ತು ಚಂದ್ರೇಶ್ವರ ದೇವರ ಮೂರ್ತಿಗಳನ್ನಿಟ್ಟು ಆಕರ್ಷಕ ಸುಡುಮದ್ದುಗಳ ಪ್ರದರ್ಶನದೊಂದಿಗೆ ರಥೋತ್ಸವ ನೆರವೇರಿತು. ಈ ಸಂದರ್ಭದಲ್ಲಿ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಅದಮಾರು ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಭಕ್ತಿ ಬೃಂಗ ಶ್ರೀ ಗೋವಿಂದ ಸ್ವಾಮಿ ಮಹಾರಾಜ್ ಉಪಸ್ಥಿತರಿದ್ದರು. ಚೂಣೋರ್ತ್ಸವ

ಜ.15ರಂದು ಹಗಲು ರಥೋತ್ಸವ (ಚೂಣೋರ್ತ್ಸವ) ನಡೆಯಲಿದ್ದು, ಬೆಳಗ್ಗೆ ಮಹಾ ಪೂಜೆ ಬಳಿಕ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಬ್ರಹ್ಮರಥದಲ್ಲಿರಿಸಿ ಪರ್ಯಾಯ ಶ್ರೀಪಾದರು ಮಂಗಳಾರತಿ ಬೆಳಗಲಿದ್ದಾರೆ. ಬ್ರಹ್ಮ ರಥೋತ್ಸವ ಬಳಿಕ ವಸಂತ ಮಂಟಪದಲ್ಲಿ ಓಕುಳಿ ಪೂಜೆ, ಮಧ್ವ ಸರೋವರದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣದೇವರ ಅವಭೃತಥೋತ್ಸವದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು