ಪರ್ಯಾಯ ಮಹೋತ್ಸವದ ಮೆರವಣಿಗೆಗೆ ಕೇಸರಿ ಧ್ವಜದ ಮೂಲಕ ಚಾಲನೆ ನೀಡಿದ್ದಾರೆ ಎಂಬ ಏಕೈಕ ಕಾರಣಕ್ಕೆ ಉಡುಪಿ ಜಿಲ್ಲೆ ಕಂಡ ಓರ್ವ ದಕ್ಷ ಮಹಿಳಾ ಜಿಲ್ಲಾಧಿಕಾರಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ, ರಾಜಕೀಯ ಒತ್ತಡ ಹೇರಿ ಜಿಲ್ಲಾಧಿಕಾರಿಗಳ ಮಾನಸಿಕ ಸ್ಥೈರ್ಯ ಕುಗ್ಗಿಸಲು ಮುಂದಾಗಿರುವ ಕಾಂಗ್ರೆಸ್ ಪಕ್ಷದ ನಡೆ ಖಂಡನೀಯ ಎಂದು ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರೇ ಉಸ್ತುವಾರಿಯಾಗಿರುವ ಉಡುಪಿ ಜಿಲ್ಲೆಯ ಮಹಿಳಾ ಜಿಲ್ಲಾಧಿಕಾರಿಗಳಿಗೆ ಕಾಂಗ್ರೆಸ್ ಪಕ್ಷ ಈ ರೀತಿ ಮಾನಸಿಕ ಸ್ಥೈರ್ಯ ಕುಗ್ಗಿಸಲು ಮುಂದಾದರೆ ಇತರ ಜಿಲ್ಲೆಗಳ ಮಹಿಳಾ ಅಧಿಕಾರಿಗಳ ಅಸಹಾಯಕತೆ ಎಷ್ಟಿರಬಹುದು ಎಂಬ ಬಗ್ಗೆ ಕನಿಕರ ಮೂಡುತ್ತಿದೆ.
ಉಡುಪಿ ಜಿಲ್ಲೆಯ ಜವಾಬ್ದಾರಿ ವಹಿಸಿಕೊಂಡ ಕೇವಲ 6 ತಿಂಗಳಲ್ಲಿ ಅತ್ಯಂತ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿ, ಪಾರದರ್ಶಕ ಆಡಳಿತ ನೀಡುತ್ತಿರುವ ಜೊತೆಗೆ ಲಕ್ಷಾಂತರ ಮಂದಿ ಭಾಗವಹಿಸಿದ ಕರಾವಳಿ ಕರ್ನಾಟಕದ ನಾಡಹಬ್ಬ ಎಂದೇ ಬಿಂಬತವಾಗಿರುವ ಪರ್ಯಾಯ ಮಹೋತ್ಸವದ ಸಿದ್ಧತೆಗೆ ಸಮರೋಪಾದಿಯಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಿದ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸುವ ಮೂಲಕ ಕಾಂಗ್ರೆಸ್ ಪಕ್ಷ ತಮ್ಮ ರಾಜಕೀಯ ದಿವಾಳಿತನವನ್ನು ಮೆರೆದಿದೆ.
ಉಡುಪಿ ಪರ್ಯಾಯೋತ್ಸವದ ಹಿನ್ನಲೆಯಲ್ಲಿ ನಗರದ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಕಳೆದ ಎರಡು ಪರ್ಯಾಯ ಮಹೋತ್ಸವದ ಅವಧಿಯಲ್ಲೂ ಬಿಡಿಗಾಸು ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರ, ತಮ್ಮ ವೈಫಲ್ಯವನ್ನು ಮರೆಮಾಚಲು ಕೇಸರಿ ಧ್ವಜ ವಿವಾದವನ್ನು ಸೃಷ್ಟಿಸಿ ಜಿಲ್ಲಾಧಿಕಾರಿಗಳನ್ನು ಟಾರ್ಗೆಟ್ ಮಾಡಲು ಮುಂದಾಗಿರುವುದು ನಾಚಿಕೆಗೇಡು.
ಬಿಜೆಪಿ ಉಡುಪಿ ಮಹಿಳಾ ಮೋರ್ಚಾ ಜಿಲ್ಲೆಯ ಮಹಿಳಾ ಜಿಲ್ಲಾಧಿಕಾರಿಗಳ ಬೆಂಬಲಕ್ಕೆ ಸದಾ ಜೊತೆ ನಿಲ್ಲಲಿದೆ. ಬಿಟ್ಟಿ ಭಾಗ್ಯಗಳ ಮೂಲಕ ದಿವಾಳಿ ಹಂತಕ್ಕೆ ತಲುಪಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹಿಳಾ ವಿರೋಧಿ ನೀತಿಯನ್ನು ಬಿಜೆಪಿ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸುವುದಾಗಿ ನೀತಾ ಪ್ರಭು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 ಕಾಮೆಂಟ್‌ಗಳು