ಸಾಮಾಜಿಕವಾಗಿ ಅರಿವಿನ ಶಿಕ್ಷಣವನ್ನೇ ನಿರಾಕರಿಸಲ್ಪಟ್ಟ ಸಮುದಾಯಕ್ಕೆ ಶಿಕ್ಷಣ ಮುಖೇನ ಅರಿವಿನ ಬೆಳಕನ್ನು ಮೂಡಿಸಿದಂತಹ ಭಾರತದ ಮೊಟ್ಟಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ. ಮಹಿಳೆಯರ, ದೀನ ದಲಿತರ ಬದುಕಿನ ಸುಧಾರಣೆಗಾಗಿ ಅವರು ನಡೆಸಿದ ಹೋರಾಟದ ಬದುಕಿನಿಂದ ಕ್ರಾಂತಿಕಾರಿ ಭಾರತದ ಸಮಾಜ ಸುಧಾರಕಿಯಾಗಿ, ಕ್ರಾಂತಿ ಜ್ಯೋತಿಯಾಗಿ ಗುರುತಿಸಿಕೊಂಡವರು. ತಮ್ಮ ಜೀವಿತದುದ್ದಕ್ಕೂ ಲಿಂಗ ರಾಜಕಾರಣ ಜಾತಿ ರಾಜಕಾರಣದ ವಿರುದ್ಧ ಹೋರಾಡಿ ಶಿಕ್ಷಣ ಮುಖೇನ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಿದ ಜ್ಯೋತಿಬಾಯಿ ಫುಲೆಯವರ ಸರಳ ಸಾತ್ವಿಕ ಬದುಕು ಎಲ್ಲರಿಗೂ ಅನುಕರಣಿಯವಾದದ್ದು ಎಂದು ಇತಿಹಾಸ ಉಪನ್ಯಾಸಕರಾದ ಡಾ. ಮಹೇಶ್ ಕುಮಾರ್ ಕೆ.ಇ ಹೇಳಿದರು.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ವಿಭಾಗದ ಆಶ್ರಯಲ್ಲಿ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಸಾವಿತ್ರಿಬಾಯಿ ಫುಲೆಯವರ ಜನ್ಮದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆಯವರ ಸಮಕಾಲೀನರಾಗಿದ್ದ ಭಾರತದ ಮೊಟ್ಟ ಮೊದಲ ಮುಸ್ಲಿಂ ಶಿಕ್ಷಕಿ ಫಾತಿಮ ಶೇಖ್ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಗೌರವಿಸಲಾಯಿತು.
ಕನ್ನಡ ವಿಭಾಗದ ವಿದ್ಯಾರ್ಥಿಗಳಾದ ಕೀರ್ತನಾ ಶೆಟ್ಟಿ, ಶಿವಾನಿ ಶೆಟ್ಟಿ, ಮಂಜು, ಪ್ರವೀಣ್ ಸಾವಿತ್ರಿಬಾಯಿ ಫುಲೆಯವರ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ವಹಿಸಿದ್ದರು.
ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ್ ಭಟ್, ಐ.ಕ್ಯೂ.ಎ.ಸಿ ಸಂಚಾಲಕ ಡಾ. ವಿಷ್ಣುಮೂರ್ತಿ ಪ್ರಭು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸಂದೇಶ್ ಎಂ.ವಿ, ಉಪನ್ಯಾಸಕರಾದ ಶರಿತಾ, ಭಾರತಿ, ಬಾಬು ಮುಂತಾದವರು ಉಪಸ್ಥಿತರಿದ್ದರು. ಅನುಷಾ ಮತ್ತು ಬಳಗ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ರತ್ನಮಾಲಾ ಸ್ವಾಗತಿಸಿ ಪ್ರಸ್ತಾವನೆಗೈದರು. ಜ್ಯೋತಿ ಎಂ. ವಂದಿಸಿದರು. ಅರ್ಚನಾ ನಿರೂಪಿಸಿದರು.

0 ಕಾಮೆಂಟ್‌ಗಳು