ಕರ್ನಾಟಕ ಬ್ಯಾಂಕಿನ ಉಡುಪಿ ವಲಯ ಕಚೇರಿ ವತಿಯಿಂದ ಬ್ಯಾಂಕಿನ 102 ನೇ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಜಿಲ್ಲಾ ಆಸ್ಪತ್ರೆ ರಕ್ತ ನೀಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ ಎನ್.ಸಿ.ಡಿ ವಿಭಾಗ ಮತ್ತು ಗಾಂಧಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ, ಉಡುಪಿಯ ಅಂಬಾಗಿಲಿನ ಕರ್ನಾಟಕ ಬ್ಯಾಂಕಿನ ಉಡುಪಿ ವಲಯ ಕಚೇರಿ ಯಲ್ಲಿ ಬುಧವಾರ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಬ್ಯಾಂಕಿನ ನಿರ್ದೇಶಕ ಬಾಲಕೃಷ್ಣ ಹಲಸೆ ಮಾತನಾಡಿ, ರಕ್ತದಾನ ದಂತಹ ಮಹತ್ ಕಾರ್ಯದಲ್ಲಿ ಅರ್ಹರು ಪಾಲ್ಗೊಳ್ಳುವುದರೊಂದಿಗೆ, ರಕ್ತದ ಅವಶ್ಯಕತೆ ಇರುವವರಿಗೆ ನೆರವಾಗುವ ಸಾಮಾಜಿಕ ಕಾರ್ಯದಲ್ಲಿ ಬ್ಯಾಂಕಿನೊAದಿಗೆ ಕೈ ಜೋಡಿಸಬೇಕು ಎಂದರು.
ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಹೆಚ್ ಅಶೋಕ್ ಮಾತನಾಡಿ, ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೇಶದಲ್ಲಿ ಪ್ರತಿವರ್ಷ 41 ದಶಲಕ್ಷ ಯುನಿಟ್ ರಕ್ತದ ಕೊರತೆ ಎದುರಾಗುತ್ತಿದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದ ಗಾಯಾಳುಗಳು ಮೃತಪಡುತ್ತಿದ್ದಾರೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತಿ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಕರೆ ನೀಡಿದರು.
ಗಾಂಧಿ ಆಸ್ಪತ್ರೆಯ ಮುಖ್ಯಸ್ಥ ಡಾ.ಹರೀಶ್ ಚಂದ್ರ ಮಾತನಾಡಿ, ಜನಸಾಮಾನ್ಯರಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿದ್ದು, ಇದನ್ನು ಮೊದಲು ಹೋಗಲಾಡಿಸಬೇಕು. ಹೆಚ್ಚು ಜನರು ಸೇರುವ ಕೇಂದ್ರಗಳಲ್ಲಿ ನಿಯಮಿತವಾಗಿ ರಕ್ತದಾನ ಶಿಬಿರ ಆಯೋಜಿಸಬೇಕು ಆ ಮೂಲಕ ಜನರಲ್ಲಿ ಅರಿವು ಮುಡಿಸಬೇಕು ಎಂದರು.
ಕರ್ನಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಛೇರಿಯ ಸಹಾಯಕ ಮಹಾ ಪ್ರಬಂಧಕ ಮತ್ತು ವಲಯ ಮುಖ್ಯಸ್ಥ ರಮೇಶ್ ವೈದ್ಯ ಮಾತನಾಡಿ, ತುರ್ತು ಪರಿಸ್ಥಿತಿಗಳಲ್ಲಿ ರಕ್ತದ ಅಗತ್ಯವಿದ್ದಾಗ ನಾವು ನಂಬುವುದು ನಮ್ಮಲ್ಲಿರುವ ಉತ್ತಮವಾದ ಬ್ಲಡ್ ಬ್ಯಾಂಕ್ ವ್ಯವಸ್ಥೆಗಳನ್ನು. ರಕ್ತದಾನ ಮಾಡುವುದರಿಂದ ನಾವು ಇನ್ನೊಬ್ಬರ ಜೀವ ಉಳಿಯಲು ಕಾರಣರಾಗುತ್ತೇವೆ. ಕರ್ನಾಟಕ ಬ್ಯಾಂಕ್ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ರಕ್ತದಾನ ಮತ್ತು ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಾ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇತಂಹ ಹಲವಾರು ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿಕೇಂದ್ರದ ಮುಖ್ಯಸ್ಥೆ ಡಾ.ವೀಣಾ ಕುಮಾರಿ ರಕ್ತದಾನ ಮಹತ್ವ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವ್ಯಾಸರಾಜ ತಂತ್ರಿ, ಕರ್ನಾಟಕ ಬ್ಯಾಂಕಿನ ಎಲ್ಲ ಅಧಿಕಾರಿ ವರ್ಗದವರು ಹಾಗು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಿಬಿರದಲ್ಲಿ ಕರ್ನಾಟಕ. ಬ್ಯಾಂಕಿನ ಗ್ರಾಹಕರು, ಸಾರ್ವಜನಿಕರು ಹಾಗೂ ಬ್ಯಾಂಕಿನ ನೌಕರರು ಈ ಉಚಿತ ತಪಾಸಣೆಯ ಸೌಲಭ್ಯವನ್ನು ಪಡೆದುಕೊಂಡರು.
ಕರ್ನಾಟಕ ಬ್ಯಾಂಕಿನ ಮುಖ್ಯ ಪ್ರಬಂದಕ ಸುಬ್ರಹ್ಮಣ್ಯ ಬಾರ್ವೆ ಸ್ವಾಗತಿಸಿ, ನಿರೂಪಿಸಿದರು. ಶಿಬಿರದಲ್ಲಿ ಸುಮಾರು 50 ಜನರು ರಕ್ತದಾನ ಮಾಡಿದರು. 56 ಮಂದಿ ಇ.ಸಿ.ಜಿ ಪರೀಕ್ಷೆ, 40 ಮಂದಿ ದಂತ ಪರೀಕ್ಷೆಗೆ, 67 ಜನರು ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆಗೆ ಒಳಗಾದರು.

0 ಕಾಮೆಂಟ್‌ಗಳು