ಕಾಪು ಪೇಟೆಯ ರಿಕ್ಷಾ ನಿಲ್ದಾಣ ತೆರವು: ಪರ್ಯಾಯ ಜಾಗದಲ್ಲಿ ಸಾಲದ ವ್ಯವಸ್ಥೆ, ಚಾಲಕರ ಆಕ್ಷೇಪ

 

ಕಾಪು : ಹೈಕೋರ್ಟ್ ಆದೇಶದಂತೆ ಕಾಪು ಪೇಟೆಯ ಒಂದು ಬದಿಯಲ್ಲಿ ಖಾಸಗಿಯವರ ಕಟ್ಟಡದ ಮುಂಭಾಗದಲ್ಲಿದ್ದ ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸಲಾಗಿದ್ದು, ಪುರಸಭೆಯು ತಾತ್ಕಾಲಿಕವಾಗಿ ಪುರಸಭೆ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ರಿಕ್ಷಾಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿದೆ.

ಶನಿವಾರದಿಂದ ಈ ಹೊಸ ಸ್ಥಳದಲ್ಲಿ ರಿಕ್ಷಾ ನಿಲುಗಡೆಗೆ ಅವಕಾಶ ನೀಡಲಾಗಿದ್ದರೂ, ಅಲ್ಲಿ ಕೇವಲ 8–10 ರಿಕ್ಷಾಗಳಿಗೆ ಮಾತ್ರ ಸ್ಥಳ ಲಭ್ಯವಿರುವುದರಿಂದ, ಸುಮಾರು 40 ರಿಕ್ಷಾಗಳಿಗೆ ನಿಲುಗಡೆಗೆ ಸೂಕ್ತ ಜಾಗ ಇಲ್ಲವೆಂದು ರಿಕ್ಷಾ ಚಾಲಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಬಹುತೇಕ ಚಾಲಕರಿಗೆ ದಿನನಿತ್ಯದ ಜೀವನೋಪಾಯಕ್ಕೆ ತೊಂದರೆ ಉಂಟಾಗಲಿದೆ ಎಂಬುದು ಅವರ ಅಸಮಾಧಾನವಾಗಿದೆ.

ರಿಕ್ಷಾ ಚಾಲಕರ ಸಂಘದವರು ಶಾಶ್ವತವಾಗಿ 30–40 ರಿಕ್ಷಾಗಳಿಗೆ ನಿಲುಗಡೆ ಸಾಧ್ಯವಾಗುವಂತಹ ಸ್ಥಳವನ್ನು ಗುರುತಿಸಿ ವ್ಯವಸ್ಥೆ ಕಲ್ಪಿಸಬೇಕೆಂದು ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಪುರಸಭೆ ಅಧಿಕಾರಿಗಳು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದು, ಈ ಕುರಿತು ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು ಪ್ರತಿಕ್ರಿಯೆ ನೀಡಿ, ಸಮಸ್ಯೆಯ ಗಂಭೀರತೆಯನ್ನು ಗಮನಿಸಿ ಪುರಸಭೆ ಸದಸ್ಯರೊಂದಿಗೆ ಚರ್ಚೆ ನಡೆಸಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಅಂತಿಮ ತೀರ್ಮಾನವಾಗುವವರೆಗೆ ರಿಕ್ಷಾ ಚಾಲಕರು ಸಹಕಾರ ನೀಡುವಂತೆ ಅವರು ವಿನಂತಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು