ಚಿತ್ರಕಲೆಗೆ ಭಾಷೆಯ ಪರಿಧಿಯಿಲ್ಲ - ಸೋದೆ ಶ್ರೀಪಾದರು

ನೂರಾರು ವಾಕ್ಯಗಳಲ್ಲಿ ಹೇಳಬಹುದಾದುದನ್ನು ಒಂದು ಚಿಕ್ಕ ಚಿತ್ರದಲ್ಲಿ ಹೇಳ ಬಹುದು. ಭಾವಾಭಿವ್ಯಕ್ತಿಗೆ ರೇಖೆಗಳು, ಚಿತ್ರಗಳು ಅತ್ಯುತ್ತಮ ಮಾಧ್ಯಮ. ಸ್ಪರ್ಧೆಯಲ್ಲಿ ಭಾಗವಹಿಸುವದೂ ಕೂಡಾ ಬಹುಮಾನ ಪಡೆಯುವಷ್ಟೇ ಮುಖ್ಯ ಸಂಗತಿ. ಪೋಷಕರು ಮಕ್ಕಳಿಗೆ ಇಂತಹ ಅವಕಾಶ ದೊರಕಿದಾಗ ಅದರಿಂದ ವಂಚಿತರನ್ನಾಗಿ ಮಾಡಬಾರದು. ಉಳ್ಳವರು ಮಕ್ಕಳ ಹುಟ್ಟುಹಬ್ಬದಂತಹ ವಿಶೇಷ ಸಂದರ್ಭವನ್ನು ಸಮಾಜಮುಖಿಯಾಗಿ, ಕಲಾಸಂಬಂಧಿಯಾಗಿ ಹೇಗೆ ಆಚರಿಸ ಬಹುದೆಂಬುದಕ್ಕೆ ಗಂಗಾಧರ ರಾವ್ ದಂಪತಿಗಳು ಮಾದರಿಯಾಗಿದ್ದಾರೆ ಎಂದು ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು. ಉಡುಪಿ ಕನ್ನರ್ಪಾಡಿಯ ಎಂ. ಗಂಗಾಧರ ರಾವ್ - ಸರಸ್ವತಿ ಜಿ. ರಾವ್ ತಮ್ಮ ಮಗಳು ಕುಮಾರಿ ಪಾವನಿಯ ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಿದ್ದ 'ಚಿಣ್ಣರ ಬಣ್ಣದ ಹಬ್ಬ'ದ ಅಂಗವಾಗಿ ನಡೆಸಿದ ಚಿತ್ರಕಲಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿ ಹರಸಿದರು. 07. 02.2026ರಂದು ಯಕ್ಷಗಾನ ಕಲಾರಂಗದ ಐವೈಸಿ ಸಭಾ ಭವನದಲ್ಲಿ ಜರಗಿದ ಈ ಸಮಾರಂಭದಲ್ಲಿ ಅಭ್ಯಾಗತರಾಗಿದ್ದ ಕೆ. ಗಣೇಶ ರಾವ್, ಯು. ಎಸ್. ರಾಜಗೋಪಾಲ ಆಚಾರ್ಯ, ಪ್ರೊ. ಕೆ. ಸದಾಶಿವ ರಾವ್ ಕನ್ನಡ ಮಾಧ್ಯಮ ಕಲಿಕೆಯ ಮಹತ್ವ, ಚಿತ್ರಕಲೆಯು ಬೆಳೆಯುವ ಮಕ್ಕಳಲ್ಲಿ ಬೆಳೆಸುವ ಗುಣಗಳು, ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಪೋಷಕರ ಪಾತ್ರದ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಕೆ. ಸದಾಶಿವ ಭಟ್, ಕೆ. ಬಾಲಕೃಷ್ಣ, ಎಂ. ಕಾರ್ತೀಕ ರಾವ್, ಡಾ. ನಿಶ್ಚಿತಾ ಕೆ. ರಾವ್ ಉಪಸ್ಥಿತರಿದ್ದರು. ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಕಲಾವಿದ ಯು. ರಮೇಶ ರಾವ್, ಗಾಯತ್ರಿ ನಾಯಕ್, ಎ. ನಟರಾಜ ಉಪಾಧ್ಯಾಯ ಭಾಗವಹಿಸಿದ್ದರು. ಉಡುಪಿ ಜಿಲ್ಲೆಯ ಒಂದರಿಂದ ಒಂಭತ್ತನೆಯ ತರಗತಿಯರೆಗಿನ ವಿದ್ಯಾರ್ಥಿಗಳಿಗೆ ತರಗತಿವಾರು ಪ್ರತ್ಯೇಕವಾಗಿ ಸ್ಪರ್ಧೆಗೆ ಅವಕಾಶ ಕಲ್ಪಿಸಿ ಪ್ರಥಮ, ದ್ವಿತೀಯ, ತೃತೀಯ ಹಾಗು ಸಮಾಧನಕರ ಬಹುಮಾನಗಳು ಸೇರಿದಂತೆ ನಗದು ಪುರಸ್ಕಾರ ಸಹಿತ ನಲ್ವತ್ತು ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲಾಯಿತು. 300 ಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಪಾಲಕರಿಗೆ ಉಪಯುಕ್ತ ಮಾಹಿತಿಯನ್ನು ನೀಡುವ ವ್ಯವಸ್ಥೆ ಮಾಡಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿಯ ಪೋಲೀಸ್ ಇನ್ಸ್ಪೆಕ್ಟರ್ ಲೋಕಾಯುಕ್ತ ಮಂಜುನಾಥ ಶಂಕರಹಳ್ಳಿಯವರು 'ಸೈಬರ್ ಅಪರಾಧಗಳು' ಹಾಗು ಮನೋತಜ್ಞ, ಲೇಖಕ ಡಾ. ವಿರೂಪಾಕ್ಷ ದೇವರಮನೆಯವರು 'ಪಾಲಕತ್ವ' ಎಂಬ ವಿಷಯದ ಕುರಿತು ತಿಳುವಳಿಕೆ ನೀಡಿದರು. ಭಾಗವಹಿಸಿದ ಅತಿಥಿ ಗಣ್ಯರಿಗೆ ಸ್ವಾಮೀಜಿ ಯವರು ಶಾಲು, ಸ್ಮರಣಿಕೆ ಮತ್ತು ಕುಮಾರಿ ಪಾವನಿ ಬಿಡಿಸಿದ ಚಿತ್ರದ ಪ್ರತಿಕೃತಿ ನೀಡಿ ಆಶೀರ್ವದಿಸಿದರು. ಸಂಸ್ಥೆಯ ಅಧ್ಯಕ್ಷರೂ ಇಡೀ ಕಾರಾಯಕ್ರಮದ ಪ್ರಾಯೋಜಕರೂ ಆದ ಎಂ. ಗಂಗಾಧರ ರಾವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸರಸ್ವತಿ ಜಿ. ರಾವ್ ಸ್ಪರ್ಧಾವಿಜೇತರ ಹೆಸರು ವಾಚಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಕಲಾರಂಗದ ಸದಸ್ಯರು, ವಿದ್ಯಾಪೋಷಕ್ ವಿದ್ಯಾರ್ಥಿಗಳು ಕಾರ್ಯಕರ್ತರಾಗಿ ಕಾರ್ಯಕ್ರಮಕ್ಕೆ ಸಹಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು