ಕಾಪು: ಪುರಸಭೆ ಸಿಬ್ಬಂದಿಯ ಎಡವಟ್ಟು ಕಚೇರಿಯಲ್ಲಿ ಸಿಲುಕಿಕೊಂಡ ಪ್ರಾಧಿಕಾರದ ಸಿಬ್ಬಂದಿಗಳು

ಕಾಪು: ಪುರಸಭೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಕಾಪು ಯೋಜನಾ ಪ್ರಾಧಿಕಾರದ ಸಿಬ್ಬಂದಿಗಳು ಕಚೇರಿಯೊಳಗೆ ಸಿಲುಕಿಕೊಂಡ ಘಟನೆ ಮಂಗಳವಾರ ಕಾಪುವಿನಲ್ಲಿ ನಡೆದಿದೆ.

ಕಾಪು ಪುರಸಭೆ ಕಟ್ಟಡದಲ್ಲೇ ಕಾಪು ಯೋಜನಾ ಪ್ರಾಧಿಕಾರದ ಕಚೇರಿಯೂ ಕಾರ್ಯನಿರ್ವಹಿಸುತ್ತಿದ್ದು, ಎರಡೂ ಕಚೇರಿಗಳಿಗೆ ಒಂದೇ ಮುಖ್ಯ ದ್ವಾರವಿರುವುದರಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ಪುರಸಭೆ ಸಿಬ್ಬಂದಿಗಳು ಸಂಜೆ 5.30 ರಿಂದ 6.00 ಗಂಟೆಯೊಳಗೆ ಕಚೇರಿಗೆ ಬೀಗ ಹಾಕಿ ತೆರಳುವ ರೂಢಿಯಿದ್ದು, ಆ ವೇಳೆ ಪ್ರಾಧಿಕಾರದ ಸಿಬ್ಬಂದಿಗಳು ಕಚೇರಿಯಲ್ಲಿ ಇದ್ದಲ್ಲಿ ಅವರಿಗೆ ಮುಂಚಿತವಾಗಿ ಮಾಹಿತಿ ನೀಡಿ ಕಳುಹಿಸಲಾಗುತ್ತಿತ್ತು.

ಆದರೆ ಮಂಗಳವಾರ ಪ್ರತಿದಿನ ಬೀಗ ಹಾಕುವ ಜವಾಬ್ದಾರಿಯಲ್ಲಿದ್ದ ಸಿಬ್ಬಂದಿ ಅನಾರೋಗ್ಯದ ಕಾರಣದಿಂದಾಗಿ ಬೇಗನೇ ಮನೆಗೆ ತೆರಳಿದ್ದರು. ಅವರ ಬದಲಿಗೆ ಬೀಗ ಹಾಕಬೇಕಿದ್ದ ಮತ್ತೊಬ್ಬ ಸಿಬ್ಬಂದಿ ಪ್ರಥಮ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಧಿಕಾರದ ಸಿಬ್ಬಂದಿಗಳ ಬಗ್ಗೆ ಗಮನ ಹರಿಸದೇ ನೇರವಾಗಿ ಮುಖ್ಯ ದ್ವಾರಕ್ಕೆ ಬೀಗ ಹಾಕಿ ತೆರಳಿದ್ದಾರೆ.

ನಂತರ ಪ್ರಾಧಿಕಾರದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ತಮ್ಮ ಕೆಲಸ ಮುಗಿಸಿ ವಾಪಸ್ಸಾಗುವ ವೇಳೆ ಮುಖ್ಯ ದ್ವಾರಕ್ಕೆ ಬೀಗ ಹಾಕಿರುವುದು ಗಮನಕ್ಕೆ ಬಂದಿದ್ದು, ಕೆಲ ಸಮಯ ಗೊಂದಲ ಮತ್ತು ಆತಂಕ ಉಂಟಾಯಿತು. ಈ ಬಗ್ಗೆ ಕೆಲವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರು.

ವಿಷಯ ತಿಳಿದ ಪುರಸಭೆಯ ಮುಖ್ಯಾಧಿಕಾರಿಯವರು ತಕ್ಷಣವೇ ಬೀಗ ಹಾಕಿ ತೆರಳಿದ್ದ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಬಾಗಿಲು ತೆರೆಯುವಂತೆ ವ್ಯವಸ್ಥೆ ಮಾಡಿದ್ದು, ಇದರಿಂದ ಗೊಂದಲಕ್ಕೆ ತೆರೆ ಬಿದ್ದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು