BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸಾಧನೆ

ಮಲಬಾರ್ ವಿಶ್ವರಂಗ ಪುರಸ್ಕಾರ 2026 ಈ ಬಾರಿ ಶ್ರೇಷ್ಟ ಹಿರಿಯ ರಂಗ ನಟಿ ಗೀತಾ ಸುರತ್ಕಲ್ ರವರಿಗೆ...


ಜೈನ ಧರ್ಮ ಕಲೆ ಮತ್ತು ವಾಸ್ತುಶಿಲ್ಪದ ಐತಿಹಾಸಿಕ ಕೇಂದ್ರವಾಗಿದ್ದು "ಜೈನ ಕಾಶಿ " ಎಂದೇ ಹೆಸರಾದಂತಹ ಬಿದಿರೇ ವ್ಯಾಪಕವಾಗಿ ಬೆಳೆಯುತ್ತಿದ್ದಂತಹ ಒಂದು ಪ್ರಸಿದ್ಧ ಸ್ಥಳ ಮೂಡುಬಿದ್ರೆ. ಅಲ್ಲಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿರುವ ಒಂದು ಪುಟ್ಟ ಹಳ್ಳಿ, ಪಚ್ಚೆ ಪಸಿರಿನ ಸುಂದರ ತಾಣ ಮರೋಡಿ. 


ಅಲ್ಲಿ ನೆಲೆ ಕಂಡುಕೊಂಡ ದಿ. ತಿಮ್ಮಪ್ಪ ಹಾಗೂ ಶಾಂತಾ ದಂಪತಿಗಳದ್ದು ಒಂದು ಸಾತ್ವಿಕ ಸಂಸ್ಕಾರಯುತ ಸುಶಿಕ್ಷಿತ ತುಂಬು ಕುಟುಂಬ. ಆ  ವಂಶವೃಕ್ಷಕ್ಕೆ ಒಂಬತ್ತು ಕೊಂಬೆಗಳು.  ಅದರಲ್ಲಿ 5 ಗಂಡು ನಾಲ್ಕು ಹೆಣ್ಣು.  ಅವರಲ್ಲಿ ಮೂರನೇ ಯವರೇ ರಂಗಭೂಮಿ ಚಾರಣ ಹಾಗೂ ಸಾಹಿತ್ಯ ಕ್ಷೇತ್ರದ ಮಿನುಗು ನಕ್ಷತ್ರ...ಗೀತಾ ಸುರತ್ಕಲ್. ಇವರು ಚಿಗುರು ಒಡೆದದ್ದು... 1953 ಮೇ 18ರಂದು. ತಂದೆ ಗ್ರಾಮ ಲೆಕ್ಕಿಗರು ತಾಯಿ ಮನೆಯಲ್ಲೇ ಅಂಚೆ ಕಚೇರಿ ಅಧಿಕಾರಿ. 


ಈ ದಂಪತಿಗಳಿಗೆ ಹಾಡು, ಗೀತೆ, ಭಜನೆ, ನಾಟಕ ಹೀಗೆ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲೆ ಅತೀವ ಆಸಕ್ತಿ. ಒಳ್ಳೆಯ ಹಾಡುಗಾರರೂ ಕೂಡ.  ಹಾಗಾಗಿ ಗೀತಾ ಕೂಡಾ ಬಾಲ್ಯದಲ್ಲೇ...ಹಾಡುಗಾರ್ತಿ ಹಾಗೂ ಹಾರ್ಮೋನಿಯಂ ಪ್ರವೀಣೆ. ತಂದೆಯ ಮುತುವರ್ಜಿಯಲ್ಲಿ ನಡೆಯುತ್ತಿದ್ದ ಮರೋಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲೇ ಪ್ರಾರಂಭಿಕ ಪ್ರಾಥಮಿಕ ವಿದ್ಯಾಭ್ಯಾಸ. ಹೊರ ಜಗತ್ತಿನ ಹೆಚ್ಚಿನ ಅರಿವಿರದ ಒಂದು ಪುಟ್ಟ ಹಳ್ಳಿಯಲ್ಲಿ ಬೆಳೆದರೂ ಊರಿನ ಹೊಲ ಹಾಡಿಗಳಲ್ಲಿ ಹರಿದಾಡುತ್ತಿದ್ದ ಜನಪದ ಕಥೆ ಹಾಡುಗಳನ್ನು ಆಲಿಸುತ್ತಾ ಜನಜೀವನದ ಜೊತೆ ಬೆರೆಯುತ್ತಾ ಅಲ್ಲಿ ಇಲ್ಲಿ ನಡೆಯುತ್ತಿದ್ದ ಆಟ ಬಯಲಾಟ ನಾಗನೃತ್ಯ ದರ್ಶನ ಬಲಿ ಕೋಲಗಳನ್ನು ವೀಕ್ಷಿಸುತ್ತಾ ನಲಿಯುತ್ತಾ ಬಾಲ್ಯವನ್ನು ಕಳೆಯುವಾಗ ಅವರಲ್ಲೂ ಜೀವನದ ಯಶೋಗಾಥೆಯ ಬಗ್ಗೆ ಒಂದಷ್ಟು ಆಸೆಗಳು ಹುಟ್ಟಿ ಕೊಂಡ ದ್ದಂತೂ ಸತ್ಯ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ವೇದಿಕೆಯಲ್ಲಿ ಒಮ್ಮೆ ಕೃಷ್ಣವೇಷ ಇನ್ನೊಮ್ಮೆ ಭಾರತ ಮಾತೆ ಹೀಗೆ ನೃತ್ಯದ ಜೊತೆ  ಅಭಿನಯ ಮಾಡಿದ್ದೂ ಇದೆ. 


ಹಾಗಾಗಿ ಸಭಾಕಂಪನ ವೂ ದೂರವಾಗಿತ್ತು. ಜೊತೆಗೆ ಖಾಲಿ ಹಾಳೆಗಳಲ್ಲಿ ಅಕ್ಷರಗಳನ್ನು ಪೋಣಿಸಿ ಗೀಚುವ ಅಭ್ಯಾಸ ಇಷ್ಟವಾಗುತ್ತಿತ್ತು. ನಂತರ ಹತ್ತಿರದ ಊರು ಮಕ್ಕಿದ ಪಲ್ಲದಲ್ಲಿ ಇದ್ದ ಜವಹರಲಾಲ್ ನೆಹರು ಹೈಸ್ಕೂಲ್ನಲ್ಲಿ ಪ್ರೌಢ ಶಿಕ್ಷಣ ಮುಗಿಸುವಷ್ಟರಲ್ಲಿ ತಂದೆ ತಾಯಿಯವರಿಗೆ ನಿವೃತ್ತಿಯಾಗಿತ್ತು. ಜೀವನೋಪಾಯಕ್ಕಾಗಿ ಮರೋಡಿಯನ್ನು ಬಿಟ್ಟು ಅಜ್ಜಿಯ ಆಶೀರ್ವಾದದ ಫಲ ಮಂಗಳೂರಿನ ಸಮೀಪದ ಸುರತ್ಕಲ್ ನಲ್ಲಿ ಇದ್ದ ಒಂದಷ್ಟು ಜಾಗದಲ್ಲಿ ಪುಟ್ಟ ಗೂಡೊಂದನ್ನು ಕಟ್ಟಿ ಕೊಳ್ಳ ಬೇಕಾಯಿತು. 


ಅಲ್ಲಿಗೆ ಬಂದದ್ದು ಗೀತಾ ರವರಿಗೆ ಹಳ್ಳಿಯಿಂದ ದಿಲ್ಲಿಗೆ ಬಂದ ಅನುಭವ ನೀಡಿತ್ತಂತೆ. ಮುಂದಿನ ದಿನಗಳಲ್ಲಿ ನೆರೆಕರೆಯಲ್ಲಿದ್ದ ದಾಯಾದಿಗಳಿಂದಲೇ ವರ್ಷಾನುಗಟ್ಟಲೆ ವ್ಯಾಜ್ಯದ ಕಹಿ ಅನುಭವ ಜೀವನವನ್ನು ತಲ್ಲಣ  ಗೊಳಿಸಿತ್ತು. ಆದರೆ ಅದೇ ಘಟನೆ ಗೀತಾ ರವರಿಗೆ ಸ್ಪೂರ್ತಿಯಾಗಿ ಬರವಣಿಗೆಯ ಚಾತುರ್ಯ ಇದ್ದುದರಿಂದ ಭೂ ಸುಧಾರಣೆಯ ವ್ಯವಸ್ಥೆ ಅವ್ಯವಸ್ಥೆಗಳ ಕಥಾ ಹಂದರದೊಂದಿಗೆ ಅವರ ಕೈಯಿಂದ ಒಂದು ನಾಟಕದ ಸಣ್ಣ ಕಥೆ ರೂಪುಗೊಂಡಿತ್ತು. ಆ ಕೃತಿ "ಕಪ್ಪೆ" ಎಂಬ ಹೆಸರಿನಿಂದ ನವ ಭಾರತ ಪ್ರಕಟಿತ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯಿತು. 


ಅಲ್ಲದೆ ಸುಧಾ ಹಾಗೂ ಮತ್ತಿತರ ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿ ಅವರ ಮನಸ್ಸಿಗೆ ಒಂದಷ್ಟು  ಮುದ ನೀಡಿತ್ತು. ಮುಂದೆ ಸುರತ್ಕಲ್ ನಲ್ಲಿ ಹಿಂದೂ ವಿದ್ಯಾದಾಯಿನಿ ಹೈಸ್ಕೂಲ್ ನಲ್ಲಿ ಪದವಿ ಪೂರ್ವ ಹಾಗೂ ಗೋವಿಂದ ದಾಸ ಕಾಲೇಜಿನಲ್ಲಿ ಕನ್ನಡ ಲಿಟರೇಚರ್ ನಲ್ಲಿ ಪದವಿ ಪಡೆಯಲು  ಪ್ರೋತ್ಸಾಹ ದೊರೆಯಿತು. ಹಾಗಾಗಿ ಮನದೊಳಗಿನ ಸಾಹಿತ್ಯಿಕ ಒಲವು ಅಂಕುರಿಸಲು ಹೊಲವೊಂದು ದಕ್ಕಿತು. ಮನದೊಳಗಿನ ಕನ್ನಡ ಅಕ್ಷರಮಾಲೆಗಳ ಬೆಳೆ ಹುಲುಸಾಗಿ ಬೆಳೆಯಲು ಒಳ್ಳೆಯ ಮನಸ್ಸಿನ ಗುರುಗಳು ಕಾರಣರಾದರು. ಲೀಲಾವತಿ ರಾವ್, ಸೀತಾರಾಮ ಆಚಾರ್ಯ, ಪ್ರೊ.  ಶೇಖರ್ ಇಡ್ಯ ರವರ ಪ್ರೋತ್ಸಾಹದ ಫಲ ಬಾಳಿಗೊಂದು ಹೊಸ ತಿರುವು ನೀಡಿತು. ಕಾಲೇಜ್ ಜೀವನ ಅವರ ಪ್ರತಿಭೆ ಕಲಾ ಜೀವನ ಸಾಹಿತ್ಯ ಪ್ರೇಮಕ್ಕೆ ಒಂದು ವೇದಿಕೆಯಾಯಿತು. 


ಈ ಸಂದರ್ಭದಲ್ಲಿ ನಿವೃತ್ತಿ ಜೀವನದ ನಡುವೆ ಸಂಸಾರದ ಭಾರದಿಂದ ಕುಸಿದಿದ್ದ ತಂದೆಯವರಿಗೆ ಮತ್ತಷ್ಟು ಹೊರೆಯನ್ನು ಗೀತಾರವರು ನೀಡದೆ ಸರಕಾರದಿಂದ ಸಿಗುವ ಫ್ರೀ ಷಿಪ್ ನಿಂದ ಬಂದ ಹಣ ಹಾಗೂ ಸಾಲ ಇತ್ಯಾದಿಗಳನ್ನು ಬಳಸಿಕೊಂಡು ಕಾಲೇಜ್ ಲೈಬ್ರರಿಯಲ್ಲಿ ಸಿಗುತ್ತಿದ್ದ ಅಗತ್ಯದ ಪುಸ್ತಕಗಳನ್ನು ಬಳಸಿಕೊಳ್ಳುತ್ತಾ ಗುರ್ಮೆ ವಿವೇಕ ರೈ,  ಪಂಡಿತಾರಾಧ್ಯ, ಪರಮೇಶ್ವರ ಭಟ್ಟರ ಮಾರ್ಗದರ್ಶನದಲ್ಲಿ ಕೋಣಾಜೆಯಲ್ಲಿ ಎಂ.ಎ.ಇನ್ ಕನ್ನಡ ಲಿಟರೇಚರ್ ಪದವಿಯನ್ನು ಗಳಿಸಿ ದ್ದಾಗಿತ್ತು. ಕಡಲತಡಿಯ ಭಾರ್ಗವ ಶಿವರಾಮ ಕಾರಂತರ ಬರಹಗಳು ಇವರನ್ನು ಹೆಚ್ಚು ಆಕರ್ಷಿಸಿದ್ದು ಅವರ ಕೃತಿಗಳ ಸಂಗ್ರಹ ಹಾಗೂ ಓದು ಮುಂದಿನ ಇವರ ಸಾಹಿತ್ಯಿಕ ಕೃಷಿಗೆ ದಾರಿದೀಪ ವಾಯಿತು. ಕಲಿತ ವಿದ್ಯೆ ಸಾಹಿತ್ಯ ಸಾಂಸ್ಕೃತಿಕ ಹಾಗೂ ರಂಗಭೂಮಿಯ ಕ್ಷೇತ್ರದಲ್ಲಿ ಬೆಳೆಯಲು ನಾಂದಿ ಆಯ್ತು. ಸ್ಪಷ್ಟ ಸ್ಪುಟ ಸುಂದರ ಶಾರೀರ ಹಾಗೂ ಭಾಷಾ ಪ್ರೌಢಿಮೆ ಆಕಾಶವಾಣಿಯಲ್ಲಿಹಲವು ಅವಕಾಶಗಳನ್ನು ಕಲ್ಪಿಸಿಕೊಟ್ಟಿತು. 


 ಹಲವಾರು ಬರಹ, ಕಥೆ, ಲೇಖನ, ನಾಟಕಗಳು ಒಂದಷ್ಟು ಪತ್ರಿಕೆಗಳಲ್ಲಿ ಪ್ರಕಟವಾಗ ತೊಡಗಿದವು. ಹಲವಾರು ಪ್ರತಿಭಾನ್ವಿತರ ಪರಿಚಯದಿಂದ ತುಳು ಭಾಷೆಯಲ್ಲಿ ಒಂದು ನಾಟಕ "ಪಿಲಿ ಪತ್ತಿ ಗಡಸ್ " ಹಾಗೂ ಕನ್ನಡದಲ್ಲಿ ನಾಟಕಗಳಲ್ಲಿ ನಟಿಸುವ ಅವಕಾಶ ಒದಗಿ ಬಂತು. ಮಂಗಳೂರು ರಂಗ ಭೂಮಿಯ ಭೂಮಿಕಾ, ಆಯನ, ಅಭಿವ್ಯಕ್ತ ಮುಂತಾದ ತಂಡಗಳಲ್ಲಿ ಪ್ರಸಿದ್ಧ ನಿರ್ದೇಶಕರಾದ ಸುರೇಂದ್ರನಾಥ ಸುರೇಶ ಆನಗಳ್ಳಿ ಮೋಹನ ಚಂದ್ರ, ರಾಮು, ನಾ ದಾಮೋದರ ಶೆಟ್ಟಿ ಅನಂತ ರಂಗಾಚಾರ್ ಮುಂತಾದ ಘಟಾನುಘಟಿಗಳ ನಿರ್ದೇಶನದಲ್ಲಿ ಅರಳಿದ ನಾಟಕಗಳಾದ ಮಾಧವಿ, ಮಾಡು ಸಿಕ್ಕದಲ್ಲ, ಅಂಜಿ, ಕಾಲೇಜು ಹುಡುಗಿ, ಅಂತಿ ಗೊನೆ, ಜೂಲಿಯಸ್ ಸೀಸರ್ ಮುಂತಾದ ನಾಟಕಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದುದರಿಂದ ಗೀತಾ ಸುರತ್ಕಲ್ ಒಳ್ಳೆಯ ಹೆಸರು ಹಾಗೂ ಕೀರ್ತಿಯನ್ನು ಸಂಪಾದಿಸಿದರು.


 ಮುಖ್ಯಮಂತ್ರಿ ಚಂದ್ರು ರವರ ಜೊತೆಗಿನ ಅಭಿನಯದ ಪ್ರಬುದ್ಧ ಕಥೆ ವಸ್ತುವನ್ನು ಹೊಂದಿದ್ದ "ಮುಖ್ಯ ಮಂತ್ರಿ" ನಾಟಕ ದೇಶ ವಿದೇಶಗಳಲ್ಲಿ  ಹಲವು ಪ್ರಯೋಗಗಳನ್ನು ಕಂಡಿದ್ದು ಅದರಲ್ಲೂ ಈ ನಾಟಕ ಅಮೇರಿಕಾದ 18 ಕಡೆ ಪ್ರದರ್ಶನಗೊಂಡಿದ್ದು ಅದರಲ್ಲಿ ಅಭಿನಯಿಸಿದ ಗೀತಾರವರ ಪಾಲಿಗೆ ಅದೊಂದು ಅವಿಸ್ಮರಣೀಯ ಅನುಭವವಾಗಿ ಉಳಿದಿದೆ.   ಇವರು ಪ್ರಥಮವಾಗಿ  ರಂಗವೇರಿದ ಮೊದಲಿನ ರಂಗ ನಾಟಕ.. ಜಯ ಪ್ರಕಾಶ್ ಮಾವಿನಕುಳಿ ನಿರ್ದೇಶನದ "ಯಯಾತಿ".  


ಉದ್ಯೋಗದ ಹುಡುಕಾಟ ದಲ್ಲಿದ್ದ ಗೀತಾ ರವರಿಗೆ M.A. ಮುಗಿಸಿ 2-3 ವರ್ಷದ ನಂತರ ಸಿಂಡಿಕೇಟ್ ಬ್ಯಾಂಕ್ ಮೂಲಕ ಉದ್ಯೋಗ ಯೋಗ ಬಂದಿತು. ಪ್ರಾರಂಭದಲ್ಲಿ ಉಡುಪಿ ಲೋಕಲ್ ಆಫೀಸ್ ಬ್ರಾಂಚ್ ನಂತರ ಕಾಟಿಪಳ್ಳದ ಶಾಖೆಗೆ ವರ್ಗಾವಣೆ ಹೊಂದಿದರು. ಉದ್ಯೋಗ ಪರ್ವ ಜೀವನ ನೌಕೆಯನ್ನು ಸಲೀಸಾಗಿ ಸಾಗಿಸಲು ತಂದೆಗೊಂದಿಷ್ಟು ಹೆಗಲು ಕೊಡಲು ಕೂಡ ಸಹಕಾರಿಯಾಯಿತು. ಇವರ ಕಲಾ ಪ್ರತಿಭೆಗೆ ಮಾರು ಹೋದ ರಂಗಮಿತ್ರರ ಸಹ ಉದ್ಯೋಗಿಗಳ ಪ್ರೋತ್ಸಾಹದ ಹಾಗೂ ಒತ್ತಾಯದ ಮೇರೆಗೆ ಸುಮಾರು 1991ರಲ್ಲಿ, ಬೆಂಗಳೂರಿನ ಗಾಂಧಿನಗರದ ಶಾಖೆಗೆ ಮರು ವರ್ಗಾವಣೆ ಪಡೆದರು.  


ಇದು ಇವರ ಮನಸ್ಸಲ್ಲಿ ಸುಪ್ತವಾಗಿದ್ದ ಕಲಾ ಪ್ರತಿಭೆ ಪೂರ್ಣ ಪ್ರಮಾಣದಲ್ಲಿ ಅನಾವರಣ ಗೊಳ್ಳಲು ಸಹಕಾರಿಯಾಯಿತು.  ಬೆಂಗಳೂರಲ್ಲಿ ರಂಗ ನಿರಂತರ, ಕಲಾ ಗಂಗೋತ್ರಿ, ರಂಗಮಂಟಪ ಇತ್ಯಾದಿ ತಂಡಗಳಲ್ಲಿ ತನ್ನನ್ನು ತೊಡಗಿಸಿಕೊಂಡು ತನ್ನ ರಂಗ ಪಯಣವನ್ನು ಮುಂದುವರಿಸಿದರು. ರಾಜೇಂದ್ರ ಕಾರಂತರ ರಚನೆಯ ಮೈಮನಗಳ ನಡುವೆ, ಪ್ರಕಾಶ್ ಶೆಟ್ಟಿ ನಿರ್ದೇಶನದ ಅನಭಿಜ್ಞ ಶಾಕುಂತಲ, ಚಂಪಾ ಶೆಟ್ಟಿ ಅವರ "ಗಾಂಧಿ ಬಂಧ" ರಂಗಶಂಕರ ನಿರ್ಮಿತ ಅಂತರಾಷ್ಟ್ರೀಯ ಖ್ಯಾತಿಯ ಮೋಹಿತ್ ತಾಕಲ್ಕರ್ ನಿರ್ದೇಶನದ ಬೀದಿಯೊಳಗೊಂದು ಮನೆ ಮಾಡಿ.. 


ಇತ್ಯಾದಿ ನಾಟಕಗಳ ಭಾವಾಭಿನಯ ಅವರ ಕೀರ್ತಿ ಕಿರೀಟದ ಹೊಳೆಯುವ ರತ್ನಗಳಾದವು. ಚಂಪಾ ಶೆಟ್ಟಿ ಜೊತೆಗಿನ ಸಹ ನಿರ್ಮಾಣದಲ್ಲಿ ವೈದೇಹಿಯವರ ಅಕ್ಕು, ಅಮ್ಮಚ್ಚಿಯೆಂಬ ನೆನಪು ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು ಎಂಬ ಮೂರು ಕಥಾ ಆಧಾರಿತ " ಅಮ್ಮಚ್ಚಿಯೆಂಬ ನೆನಪು" ಕಾ.ತಾ. ಚಿಕ್ಕಣ್ಣರವರ ಸಣ್ಣ ಕಥೆಗಳನ್ನು ಆಧರಿಸಿ ಮಾಡಿದ " ಕೋಳಿ ಎಸ್ರು" ಸಿನಿಮಾಗಳ ಮೂಲಕ ಚಿತ್ರರಂಗಕ್ಕೂ ಗೀತಾ ರವರು ಲಗ್ಗೆ ಇಟ್ಟರು. ಅಮ್ಮಚ್ಚಿಯೆಂಬ ನೆನಪು ಚಿತ್ರ ಈಗಲೂ ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದೆ. ಇದರೊಂದಿಗೆ ಹಲವು ಚಿತ್ರಗಳಿಗೆ ವಸ್ತ್ರ ವಿನ್ಯಾಸ  ಮಾಡಿ ಎಲ್ಲರಿಂದ ಸೈ ಅನಿಸಿಕೊಂಡಿದ್ದಾರೆ. 


ಮುಂಬೈ ಕನ್ನಡ ಸಂಘದ "ಪ್ರತಿಷ್ಠಿತ ರಂಗಕರ್ಮಿ " , "ಸ್ಟರ್ಣ ಮಯ್ಯೂರ" " ಕಾರ್ಮಿಕ ರಂಗ ಪ್ರಶಸ್ತಿ" ಮುಖ್ಯವಾಗಿ " ಕರ್ನಾಟಕ ನಾಟಕ ಎಕಾಡೆಮಿ ಪ್ರಶಸ್ತಿ " ಹೀಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಮನ್ನಣೆ ಪುರಸ್ಕಾರಗಳು ಇವರ ಮನೆಯ ಗೋಡೆಯನ್ನು ಅಲಂಕರಿಸಿವೆ. 


 ಚಿಕ್ಕಂದಿನಿಂದಲೂ ಚಾರಣದ ಬಗ್ಗೆ ಇದ್ದ ಒಲವು ಆಸಕ್ತಿಯನ್ನು ಗೀತಾರವರು ದೊಡ್ಡವರಾದ ಮೇಲೆ ತೀರಿಸಿಕೊಂಡರು . ಈ ನಿಟ್ಟಿನಲ್ಲಿ ಹಿಮಾಲಯದ ಶಿಖರಗಳಿಗೆ ಹಲವಾರು ಬಾರಿ ಭೇಟಿ ನೀಡಿದ್ದರು. ಸರ್ಪಾಸ್, ರೋಹಟಾಂಗ ಪಾಸ್, ಚಂದ್ರ ಕಾಣಿ ಪಾಸ್ , ಹರ್ ಕಿ ದುನ್ , ಕರೇರಿ ಲೇಕ್ , ಹೇಮಕುಂಡ್ ಸಾಹಿಬ್, ಪುಷ್ಪಾ ಕಣಿವೆ, ಶಿಮ್ಲಾ , ನೀಲಗಿರಿ ಬೆಟ್ಟಗಳು ಕೇರಳದ ಮೌನ ಕಣಿವೆ ಮತ್ತು ಕೈಲಾಸ ಪರ್ವತ ದಂತಹ ಸುಂದರ ತಾಣಗಳಲ್ಲಿ ಟ್ರಕ್ಕಿಂಗ್ ಮಾಡಿ ತಿರುಗಿ ಕಣ್ಮನ ತುಂಬಿಕೊಂಡವರು ಗೀತಾ ಸುರತ್ಕಲ್.

 

ಪ್ರಸ್ತುತ ಬೆಂಗಳೂರಿಗೆ ಓಡಾಡಿಕೊಂಡು ಸುರತ್ಕಲ್ ನಲ್ಲೇ ಸಣ್ಣ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಒಂಟಿ ಸಲಗ ...ಕಥೆ ಕವನ ಲೇಖನಗಳ ಕಾವ್ಯ ಕನ್ನಿಕೆ, ಚಾರಣ ವೀಕ್ಷಣೆಗಳ ಪ್ರಕೃತಿ ಪ್ರಿಯೆ, ರಂಗ ಕಲೆಗಳ ಅಭಿನಯ ಚತುರೆ ಗೀತಾ ಸುರತ್ಕಲ್ ರವರಿಗೆ  2025 - 26ನೇ ಸಾಲಿನ ಶಂಕರ್ ರೂಫಿಂಗ್ ಸಿಸ್ಟಮ್ ದತ್ತಿ ನಿಧಿ ಪ್ರಾಯೋಜಿತ ಮಲಬಾರ್ ವಿಶ್ವ ರಂಗ ಪುರಸ್ಕಾರ- 2026 ನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಉಡುಪಿ ಶಾಖೆ ಜೊತೆಯಾಗಿ ಸೇರಿ ಇದೇ ತಿಂಗಳ ಮಾರ್ಚ್ 26ರಂದು ನೀಡಿ ಗೌರವಿಸಲಿದೆ. 🌹


ಬರಹ: 🖋️ರಾಜೇಶ್ ಭಟ್ ಪಣಿಯಾಡಿ


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!