ಶ್ರೇಷ್ಟ ರಂಗ ಭೂಮಿ ನಟ, ನಿರ್ದೇಶಕ, ಸಂಘಟಕ ಶ್ರೀ ಶ್ರೀಪತಿ ಮಂಜನಬೈಲು ರವರಿಗೆ ಈ ಬಾರಿಯ ಮಲಬಾರ್ ವಿಶ್ವರಂಗ ಪುರಸ್ಕಾರ 2026.

ಗೊತ್ತು ಗುರಿ ಇಲ್ಲದ ಹಾದಿಯದು, ಬರಿಯ ಕಾಲಿನ ನಡಿಗೆ, ಆಸರೆಯ ಆಶಾಕಿರಣಗಳ ಜೊತೆ ಜೊತೆಗೆ ಪಯಣ... ಎಡರು ತೊಡರುಗಳ ಲೆಕ್ಕಿಸದೆ ಭವದ ಬೇಗೆಗೆ ಬಗ್ಗದೆ - ಕುಗ್ಗದೆ ಛಲವ ಬಿಡದೆ ವಿಧಿಯ ಹೊಡೆತಗಳನೆಲ್ಲ ಇಟ್ಟಿಗೆಯ ಮಾಡಿ ಅದರೊಳಗೆ ಮನದ ತುಡಿತಗಳ ಜೀವಂತವಾಗಿರಿಸಿ ಜೋಡಿಸಿ ಜೊತೆಗೆ ಸಾಧನೆಗೆ ಯೋಗ್ಯವಾದುದೆಲ್ಲವ ಸಾಧಿಸುತ ಸಾಧನೆಯ ಭವನ ಕಟ್ಟುತ್ತ ಭವ ಹಾಗೂ ಬದುಕಿಗೊಂದರ್ಥವ ಕಂಡುಕೊಂಡ ಭಾವಜೀವಿ ಶ್ರೀಪತಿ ಮಂಜನಬೈಲು. 


ಬೆಳೆಯುವುದು ಬೆಳಗು ವುದು ಬೆಳೆಸುವುದು ಮಾನವ ಜೀವನದ ಮೌಲ್ಯಯುತ ಗುಣ ಧರ್ಮಗಳು. ವೃತ್ತಿ ಪ್ರವೃತ್ತಿ ಮತ್ತು ಜೀವನದಲ್ಲಿ ಅದನ್ನಳವಡಿಸಿಕೊಂಡು ಸಾಧನೆಯ ಹಾದಿಯಲ್ಲಿ ನಡೆದವರು ಶ್ರೀಪತಿ. ಕರುನಾಡ ಅಂಚಿನಲ್ಲಿ ಕನ್ನಡದ ಕನ್ನಡಿಗೆ ಹಿಡಿದಿದ್ದ ಧೂಳು - ಮಸಿಯುಜ್ಜಿ ಕನ್ನಡಮ್ಮನ ಚೆಲು ಮೊಗಕ್ಕೆ ತಿಲಕ ವಿಟ್ಟವರು... ಶ್ರೀಪತಿ.  


ಅವರ ಜೀವನವೇ ಒಂದು ರೋಚಕ ಕಥೆ. :- ದಿ. ಹನುಮಂತರಾವ್ ಸಂಜೀವಿನಿ ದಂಪತಿಗಳು ಬಾಳಾಗಸದ ಸಪ್ತ ಋಷಿ ಮಂಡಲದ ಎರಡನೆಯ ತಾರೆ ಇವರು. ಪಟ್ಟಣದಿಂದ ದೂರ ಸರಿಯ ಮಾರ್ಗವೇ ಗೋಚರಿಸದ ಬೆರಳೆಣಿಕೆಯ ಕುಟುಂಬಗಳು ನೆಲೆಸಿದ್ದ ಪುಟ್ಟ ಹಳ್ಳಿ ಮಂಜನ ಬೈಲಿನಲ್ಲಿತ್ತು ಇವರ ಮೂಲ ಮನೆ. ತುಂಬು ಸಂಸಾರದ ಹೊತ್ತಿನ ಊಟಕ್ಕೆ ಅಪ್ಪ ನಡೆಸುತ್ತಿದ್ದ ಸಣ್ಣ ಹೋಟೆಲ್ ಒಂದೇ ಆಸರೆ. ಹುಟ್ಟೂರ ಸಮೀಪದ ನಿಡ್ಡೋಡಿಯಲ್ಲಿ ಪ್ರಾಥಮಿಕ  ನಂತರ ಎರಡು ವರ್ಷ ಕಟೀಲು ಹೈಸ್ಕೂಲಲ್ಲಿ ವಿದ್ಯಾಭ್ಯಾಸ. ಅಪ್ಪನ ದುಡಿಮೆಗೆ ಕೈ ಜೋಡಿಸುವುದು ಅವಶ್ಯವಿತ್ತು.  


ಹಾಗಾಗಿ ಹುಟ್ಟಿದೂರು ಬಿಟ್ಟು, ಹೊಟ್ಟೆಯ ಪಾಡಿಗೆ , ಓದು ಮುಂದುವರಿಸಲು, ಗದಗ ಬಳಿಯ ಶಿರಹಟ್ಟಿ ಮತ್ತು ಬೆಳ್ಳಟ್ಟಿ ಊರುಗಳಲ್ಲಿದ್ದ ಪರಿಚಯದವರ ಹೋಟೆಲುಗಳಲ್ಲಿ ಮಾಣಿಯಾಗಿ ಕೆಲಸ ಜೊತೆಗೆ ವಿದ್ಯಾಭ್ಯಾಸ ಮುಂದುವರಿಸಿದರು. ಆಟವಾಡುವ ವಯಸ್ಸಲ್ಲಿ ಜವಾಬ್ದಾರಿಯ ಹೊರೆ ತಲೆಯ ಮೇಲಿದ್ದರೆ ಕನಸುಗಳಿಗೆಲ್ಲಿದೆ ಬೆಲೆ. ಆದರೂ ಶಾಲಾ ಜೀವನದಲ್ಲಿದ್ದಾಗ, ಯಕ್ಷಗಾನ ನಾಟಕಗಳಲ್ಲಿ ಅಭಿನಯಿಸಲು ಅತ್ಯಂತ ಆಸಕ್ತಿ. ಪ್ರಾಥಮಿಕ ಶಾಲೆಯಲ್ಲಿ ನಟಿಸಿದ್ದ ಲವಕುಶ ಎಂಬ ಪ್ರಥಮ ನಾಟಕದಲ್ಲಿ ನಿರ್ವಹಿಸಿದ ಸೀತೆಯ ಪಾತ್ರ ಎಲ್ಲರ ಮೆಚ್ಚುಗೆ ಗಳಿಸುವುದರೊಂದಿಗೆ ಪುಟ್ಟ ಬಂಗಾರದ ಪದಕದ ಜೊತೆ ಸಣ್ಣಪುಟ್ಟ ಉಡುಗೊರೆಗಳು ದೊರೆತದ್ದು ಮುಂದಿನ ರಂಗ ಜೀವನಕ್ಕೆ ನಾಂದಿಯಾಯ್ತು. 


ಕಟೀಲು ಹೈಸ್ಕೂಲಿನ ಪ್ರಿಯರಾದ ಗುರು ಸದಾನಂದ ಆಸ್ರಣ್ಣರ ಪ್ರೋತ್ಸಾಹ ಬಾಲ್ಯದಲ್ಲೇ ನಾಟಕ ಯಕ್ಷಗಾನದ ಹುಚ್ಚು ಹಿಡಿಸಿತ್ತು. ಆದರೆ ಮನೆಯ ಪರಿಸ್ಥಿತಿಯ ಅರಿತು, ಓದಿಗಾಗಿ ಹೋಟೆಲ್ ಉದ್ಯೋಗದ ಹಿಂದೆ ಓಟ ಶುರುವಾಯಿತು. ಮೊದಲು ಶಿರಹಟ್ಟಿ, ಬೆಳ್ಳಟ್ಟಿ, ಬಳ್ಳಾರಿ, ಗೌರಿಬಿದನೂರು, ಬೆಂಗಳೂರು, ಧಾರವಾಡ ಹೀಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಅಲೆದದ್ದಾಗಿತ್ತು. ಈ ನಡುವೆ ಹೈಸ್ಕೂಲ್ ಶಿರಹಟ್ಟಿಯಲ್ಲಿ, ಪಾಂಪೇ ಕಾಲೇಜಲ್ಲಿ ಪಿಯುಸಿ ಮುಗಿಸಿದ್ದಾಗಿತ್ತು. ಹೋದಲ್ಲೆಲ್ಲಾ ನಾಟಕ ಮಾಡುವ ಹವ್ಯಾಸ ಮೈಗಂಟಿತು. ಬೆಂಗಳೂರಲ್ಲಿದ್ದಾಗ ರಾಷ್ಟ್ರ ಕಂಡ ಶ್ರೇಷ್ಠ ನಾಟಕಕಾರ ಶ್ರೀ ಬಿ ವಿ ಕಾರಂತರ ನಾಟಕದಲ್ಲಿ ಪಾತ್ರ ವಹಿಸುವ ಅವಕಾಶ ದೊರೆಯಿತು. 


ಅಲ್ಲಿ ಹೊಸ ಅಲೆಗಳ ನಾಟಕಗಳ ಪರಿಚಯವಾಯಿತು. ಬಳ್ಳಾರಿಯಲಿದ್ದಾಗ ತೆಲುಗು ಕನ್ನಡ ನಾಟಕಗಳಲ್ಲಿ ಅಭಿನಯಿಸುವ ಅವಕಾಶವಾಯ್ತು. ಅಲ್ಲಿಂದ ನೇರ ಧಾರವಾಡದಲ್ಲಿ ಆರು ತಿಂಗಳ ಕಾಲ ಪಿ ಡಬ್ಲ್ಯೂ ಡಿ ಯಲ್ಲಿ ದಿನಗೂಲಿ ನೌಕರನಾಗಿ ದುಡಿದು ಮುಂದೆ 1972ರಲ್ಲಿ ಪರೀಕ್ಷೆ ಬರೆದು ಸಂದರ್ಶನದಲ್ಲಿ ಸೈ ಎನಿಸಿಕೊಂಡು ಕರ್ನಾಟಕ ಹೌಸಿಂಗ್ ಬೋರ್ಡ್, ಹುಬ್ಬಳ್ಳಿ ವಿಭಾಗದಲ್ಲಿ ಸೀನಿಯರ್ ಇನ್ಸ್ಪೆಕ್ಟರ್ ಆಗಿ ಖಾಯಂ ವೃತ್ತಿಯನ್ನು ಅಲಂಕರಿಸಿದ್ದಾಗಿತ್ತು. ಅಲ್ಲಿಂದ ದಾಂಡೇಲಿಗೆ ವರ್ಗವಾಗಿ ನಂತರ 1976 ರಲ್ಲಿ ಬೆಳಗಾವಿಗೆ ಕಾಲಿಡುತ್ತಲೇ ತಪ್ಪಿ ಮಹಾರಾಷ್ಟ್ರಕ್ಕೆ ಬಂದಿಳಿದೆನೇನೋ ಅನ್ನಿಸಿತ್ತು ಶ್ರೀಪತಿಗೆ. ಕನ್ನಡದ ಮಾತಿಗೆ ಅಲ್ಲಿ ಪ್ರತ್ಯುತ್ತರ ಮರೀಚಿಕೆಯಾಗಿತ್ತು. 


ಅಲ್ಲಿಯ ಸಹವಾಸ ಬೇಡ... ಬೇರೆ ಯೂರಿಗೆ ವರ್ಗ ಮಾಡಿಕೊಳ್ಳೋಣ ಎನ್ನುವಷ್ಟರಲ್ಲಿ ಅವರಂತೆ ಆದಾಯಕರ ಇಲಾಖೆಗೆ ವರ್ಗವಾಗಿ ಬಂದ ರಂಗಮಿತ್ರ ಡಿ.ಟಿ. ಚೆನ್ನಕೇಶವಮೂರ್ತಿಯವರ ಭೇಟಿಯಾಯಿತು.  ಇವರಿಬ್ಬರ ಜೊತೆ ಕವಿ ಸತೀಶ್ ಕುಲಕರ್ಣಿ ,  ಕವಿ, ಹಿರಿಯ ಪತ್ರಕರ್ತ ಡಾ. ಸರಜೂ ಕಾಟ್ಕರ್ ಮತ್ತು ಹಿರಿಯರಾದ ಎಂ ಕೆ ಜೈನಾಪುರ್ ಸೇರಿಕೊಂಡರು.  ಈ ಐದು ಜನ  ಪ್ರತಿದಿನ ಸಂಜೆ ಒಟ್ಟಾಗಿ ಹರಟೆ  ಸುರು ಹಚ್ಚಿದ್ದರು. ಕನ್ನಡದ ನೆಲದಲ್ಲಿ ಮರಾಠಿಗರ ದರ್ಪ, ಕನ್ನಡವನ್ನು ತುಚ್ಚವಾಗಿ ಕಾಣುವ ಜನ, ಮರಾಠಿಗರ ಸಾಂಸ್ಕೃತಿಕ ಚಟುವಟಿಕೆಗಳು ಹೀಗೆ ಅವೆಲ್ಲವನ್ನು ಕಂಡು ಅಸೂಯೆ ಹೆಚ್ಚಾಯ್ತು. 


ಶ್ರೀಪತಿಯವರ ಮನದ ಮಾತಿಗೆ ಒಮ್ಮತ ಸೂಚಿಸಿದ ಈ ಗೆಳೆಯರೊಂದಿಗೆ ಸೇರಿ ಒಂದು ಕನ್ನಡ ಕಲಾವಿದರ ತಂಡ ಮತ್ತು ಆಧುನಿಕ ರಂಗಭೂಮಿಯ ಕನ್ನಡ ನಾಟಕದ ಥಳಕನ್ನು ಬೆಳಗಾವಿಯ ಜನಕ್ಕೆ ಪರಿಚಯಿಸಲು ಬಯಸಿ ಸೈಕಲಲ್ಲಿ ಮನೆಮನೆಗೆ ಭೇಟಿ ನೀಡಿ ಒಲೈಸಿ ಜನರ ಎಲ್ಲ ಪ್ರತಿಕ್ರಿಯೆಗಳನ್ನು ಧನಾತ್ಮಕವಾಗಿ ಸ್ವೀಕರಿಸುತ್ತ ಪ್ರವೇಶದ ಟಿಕೆಟ್ ನೀಡಿ ಹೊಸ ಅವಿಷ್ಕಾರಗಳಿಂದ ಕೂಡಿದ ನಾಲ್ಕು ದಿನದ ನಾಟಕೋತ್ಸವವನ್ನು ಹಮ್ಮಿಕೊಂಡರು. ಇವರ ಈ ಪ್ರಥಮ ಪ್ರಯತ್ನ  ನ: ಭೂತೋ ನ: ಭವಿಷ್ಯತೀ ಎಂಬಂತೆ ಮೂಡಿ ಬಂದು ಜನಸಾಗರವೇ ಹರಿದು ಬಂದು ಮರಾಠಿ ಹಾಗೂ ಕನ್ನಡಿಗ ಪ್ರೇಕ್ಷಕರ ಹೃದಯ ಕದ್ದಿತು.  


ಇವರ ಈ ಯಶಸ್ಸು ಸಾಧನೆ ಮರಾಠಿ ಪತ್ರಿಕೆಗಳಲ್ಲೂ ಛಾಪಿಸಲ್ಪಟ್ಟು ಎಲ್ಲರಲ್ಲೂ ಕನ್ನಡದ ಬಗ್ಗೆ ಆಸ್ತೆ ಹುಟ್ಟುವಂತೆ ಮಾಡಿತು. ಈ ಬಗ್ಗೆ ರೊಚ್ಚಿಗೆದ್ದ ಮರಾಠಿ ತರುಣರ ಗುಂಪೊಂದು ಇವರನ್ನು ಥಳಿಸಿ ದಮ್ಕಿ ಹಾಕಿದ್ದ ಕಹಿ ಘಟನೆಯೂ ಆಗಿತ್ತು. ಅದೃಷ್ಟವಶಾತ್ ಹಿರಿಯ ಮರಾಠಿ ಕಲಾವಿದರೊಬ್ಬರು ಆ ಸಂದರ್ಭದಲ್ಲಿ ಅಲ್ಲಿಗೆ ಸರ್ಪ್ರೈಸ್ ಎಂಟ್ರಿ ಕೊಟ್ಟು ಸಾತ್ ನೀಡಿ ಕಲೆಗೆ ಭಾಷೆಯ ಕಟ್ಟುಪಾಡು ಬೇಡ ಎಂದು ಅವರನ್ನು ಗದರಿಸಿ ಘಟನೆಯನ್ನು ತಿಳಿಗೊಳಿಸಿದ್ದರು.  ಹೀಗೆ ಪ್ರಾರಂಭವಾದ ರಂಗ ಚಟುವಟಿಕೆ ಬೆಳಗಾವಿಯಲ್ಲಿ ರಂಗಸಂಪದದ ಹುಟ್ಟಿಗೆ ಕಾರಣವಾಯಿತು. 


ಪ್ರೇಕ್ಷಕರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಿರಂತರವಾಗಿ  ಕಾರ್ಯಕ್ರಮಗಳು ಪ್ರಾರಂಭಗೊಂಡು, ಪ್ರತಿ ವರುಷ ಹತ್ತು ಹನ್ನೆರಡು ನಾಟಕಗಳನ್ನು ಪ್ರೇಕ್ಷಕ ಸದಸ್ಯರಿಗೆ ತಪ್ಪದೇ ಪ್ರದರ್ಶಿಸಲಾಗುತ್ತಿತ್ತು. ಈ ಪ್ರೇಕ್ಷಕ ಸದಸ್ಯ ಯೋಜನೆ ಇಂದಿಗೂ ಮುಂದುವರಿಸಿಕೊಂಡು ಬರಲಾಗಿದೆ. ಮುಖ್ಯವಾಗಿ ಪ್ರತಿ ವರುಷ ನಾಲ್ಕು ಅಥವಾ ಐದು ದಿನಗಳ ನಾಟಕೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಹಲವು ರಂಗ ಕಾರ್ಯಾಗಾರಗಳು, ನಾಟಕ ರಚನಾ ಶಿಬಿರ, ಸೆಮಿನಾರುಗಳು,  ಹೀಗೆ ಅನೇಕ ರಂಗಕ್ಕೆ ಸಂಬಂಧಿಸಿದ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ. 


1994ರಲ್ಲಿ 14 ದಿನದ ಬಹುಭಾಷಾ ನಾಟಕೋತ್ಸವ 1998ರಲ್ಲಿ 9 ದಿನಗಳ ಗಿರೀಶ್ ಕಾರ್ನಾಡ್ ರ ನಾಟಕಗಳ ಉತ್ಸವ ನಡೆಸುವುದರೊಂದಿಗೆ  ಸ್ಥಳೀಯ ಕಲಾವಿದರ ತುಂಬು ಸಹಕಾರದೊಂದಿಗೆ ಹೊಸ ಅಲೆಯ ಹಲವಾರು ನಾಟಕಗಳನ್ನು ಹೊಸ ಹೊಸ ಅವಿಷ್ಕಾರಗಳ ಜೊತೆಗೆ ರಂಗಕ್ಕೆ ತರುವಲ್ಲಿ ಶ್ರೀಪತಿ ಮಂಜನಬೈಲು ಯಶಸ್ವಿಯಾದರು.


ಜ್ಞಾನ ಸಂಪಾದನೆಯ ಒಲವು ಹೊಂದಿದ್ದ ಶ್ರೀಪತಿಯವರು ಅರ್ಧದಲ್ಲೇ ನಿಂತು ಹೋಗಿದ್ದ ಕಲಿಕೆಗೆ ಡಿಸ್ಟೆನ್ಸ್ ಎಜುಕೇಶನ್ ಮೂಲಕ ಚಾಲನೆ ನೀಡಿ ಬಿ ಎ ನಂತರ ಸೋಶಿಯಾಲಜಿ ಮತ್ತು ಪೊಲಿಟಿಕಲ್ ಸೈನ್ಸ್ ನಲ್ಲಿ ಎಂ.ಎ.  ಮಾನವ ಸಂಪನ್ಮೂಲ, ರೂರಲ್ ಡೆವಲಪ್ಮೆಂಟ್ನ ವಿಷಯಗಳಲ್ಲಿ ಪಿಜಿ ಡಿಪ್ಲೋಮಾ ಮೂಲಕ ಉನ್ನತ ವಿದ್ಯೆಗಳನ್ನು ಮೈಗೂಡಿಸಿಕೊಂಡರು. ಜೊತೆಗೆ ವೇದ ಪುರಾಣಗಳ, ಇತಿಹಾಸ ಕಥೆಗಳ ಅಧ್ಯಯನ. ಗಮಕ ಕಲೆ ಹಾಗೂ ಹಿಂದುಸ್ತಾನಿ ಸಂಗೀತವನ್ನು ಕಲಿಯುವು ದರೊಂದಿಗೆ ಕನ್ನಡ ನಾಟಕಗಳ ಮತ್ತು ಸಾಹಿತ್ಯದ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಿದರು.


 ಮುಂದೆ ಎಲ್ಲರ ನಕಾರವಿದ್ದರೂ ವೃತ್ತಿ ನಿಮಿತ್ತ 2002 ರಲ್ಲಿ ಬೆಂಗಳೂರಿಗೆ ಬಂದಿಳಿದರೂ ಬೆಳಗಾವಿಯ ರಂಗ ಸಂಪದದ ಬೆನ್ನೆಲುಬಾಗಿದ್ದು ಕೊಂಡು ನಿರಂತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಕನ್ನಡದ ಕಂಪನ್ನು ಬೆಳಗಾವಿಯಲ್ಲಿ ಅಜರಾಮರ ಗೊಳಿಸಿದರು. ಬೆಂಗಳೂರಲ್ಲಿ ಬಂದಿಳಿದ ಶ್ರೀಪತಿಯವರು ಸಾಂಸ್ಕೃತಿಕವಾಗಿ ಮತ್ತಷ್ಟು ಬೆಳೆಯುತ್ತಾ 2012ರಲ್ಲಿ ವೃತ್ತಿಯಿಂದ ನಿವೃತ್ತಿ ಹೊಂದಿದರೂ ಹಲವಾರು ಸಾಂಸ್ಕೃತಿಕ ದಿಗ್ಗಜರೊಡನೆ ಹೆಜ್ಜೆ ಹಾಕುತ್ತ ಅಭಿನಯ ಶಾರದೆಯ ಮುದ್ದಿನ ಮಗನಾಗಿ ಬೆಳೆದು ನಿಂತರು.   


ಇದು ವರೆಗೆ 80ಕ್ಕೂ ಹೆಚ್ಚು ನಾಟಕಗಳ ನಿರ್ದೇಶನ. 170ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ.  ಯುಗಾಂತರ, ಕೆಳದಿಯ ಚೆನ್ನಮ್ಮಇತ್ಯಾದಿ 18 ಟಿ ವಿ ಧಾರವಾಹಿಗಳು, 12 ಸಾಕ್ಷ ಚಿತ್ರಗಳು. ಅರಿಷಡ್ವರ್ಗ ಓಲ್ಡ್ ಮಾಂಕ್, ಕಂಸಾಳೆ ಕೈಸಾಲೆ, ಮರಾಠಿ ಚಿತ್ರ ಜಾತಿ ಚೆ ಪಾಹಿಜೆ ಮುಂತಾಗಿ 18 ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.  ಮೂರು ಮರಾಠಿ ನಾಟಕಗಳ ಭಾಷಾಂತರ, ಎಸ್ ಎಲ್ ಭೈರಪ್ಪನವರ "ವಂಶವೃಕ್ಷ" ಕಾದಂಬರಿಯನ್ನು ರಂಗರೂಪಾಂತರಿಸಿದ್ದು, ಬಿ ವಿ ಕಾರಂತರ ಆತ್ಮಚರಿತ್ರೆ ಆದರಿಸಿ ರಚಿಸಿದ ನಾಟಕ "ಬಾಬಾ ಕಾರಂತ",  ಮಹಾತ್ಮ ಗಾಂಧೀಜಿ ಅವರ ಕರ್ನಾಟಕ ಭೇಟಿಯ ಘಟನೆಗಳನ್ನು ಆಧರಿಸಿದ ನಾಟಕ "ಕನ್ನಡ ನೆಲದಲ್ಲಿ ಮೋಹನದಾಸ' ಸಂವಾದ ಬರಹ ಹೀಗೆ ಒಟ್ಟಾರೆ ರಂಗಭೂಮಿಯನ್ನು ದೇವರಂತೆ ಕಂಡು ಬದುಕು ಸಾಗಿಸಿದರು ಶ್ರೀಪತಿ ಮಂಜನಬೈಲು. 


ಪತಿಯ ಕಲಾ ಬದುಕನ್ನು ಆದರಿಸುತ್ತಾ ಸದಾ ಪ್ರೇರಕ ಶಕ್ತಿಗಳಾಗಿ ನಿಂತು ಜೊತೆ ಜೊತೆಗೆ ಹೆಜ್ಜೆ ಇಟ್ಟು ಖುಷಿ ಪಟ್ಟವರು ಇವರ ಮಡದಿ ಶೋಭಾ ಹಾಗೂ ಪ್ರೀತಿಯ ಮಗಳು ನಂದಿನಿ. ಇಂತಹ ಮೇರು ಕಲಾವಿದರಿಗೆ ಪ್ರಶಸ್ತಿ ಪುರಸ್ಕಾರ ಮನ್ನಣೆಗಳ ಕೊರತೆ ಎಲ್ಲಿ ಇದ್ದೀತು?...ನಾಟಕ ಅಕಾಡೆಮಿ ಪ್ರಶಸ್ತಿ, ಪೃಥ್ವಿ ಥೇಟರ್ ಮುಂಬಯಿ ಎಕ್ಜೂಟ್ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಂಘ, ಸಾಹಿತ್ಯ ಸಮ್ಮೇಳನ, ಊರ ಪರವೂರ ಎಲ್ಲಾ ಹೆಸರಾಂತ ಸಂಘ ಸಂಸ್ಥೆಗಳ ಲೆಕ್ಕವಿಲ್ಲದಷ್ಟು ಮನ್ನಣೆ ಪುರಸ್ಕಾರಗಳು ಮನೆಯ ಕಪಾಟು ಗೋಡೆಗಳನ್ನೆಲ್ಲಾ ತುಂಬಿಕೊಂಡು ಸುಂದರವಾಗಿಸಿವೆ.


ಇಂತಹ ರಂಗಭೂಮಿಯ ರತ್ನ ಶ್ರೀಪತಿ ಮಂಜನಬೈಲುರವರಿಗೆ 2025-26ನೇ ಸಾಲಿನ ಶಂಕರ್ ರೂಫಿಂಗ್ ಸಿಸ್ಟಮ್ ದತ್ತಿನಿಧಿ ಪ್ರಾಯೋಜಿತ ಮಲಬಾರ್ ವಿಶ್ವ ರಂಗ ಪುರಸ್ಕಾರ- 2026 ನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಉಡುಪಿ ಶಾಖೆ ಜಂಟಿಯಾಗಿ ಇದೇ ತಿಂಗಳ ಮಾರ್ಚ್ 26 ರಂದು ನೀಡಿ ಗೌರವಿಸಲಿದೆ...


 ಲೇಖನ: ರಾಜೇಶ್ ಭಟ್ ಪಣಿಯಾಡಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು