ಇಂದ್ರಾಣಿ ಶ್ರೀ ಮುಖ್ಯಪ್ರಾಣ ಹಾಗೂ ನಾಗದೇವರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಪ್ರಕೃತಿಯ ರಮಣೀಯ ತಾಣದಲ್ಲಿ ಇರುವ ಇಂದ್ರಾಣಿ ಶ್ರೀ ಪಂಚದುರ್ಗಾಪರಮೇಶ್ವರಿ ದೇವಾಲಯವು ಸುಮಾರು 11ನೆಯ ಶತಮಾನದಲ್ಲಿ ನಿರ್ಮಾಣಗೊಂಡ ದೇವಾಲಯವಾಗಿದೆ. ಚ್ಯವನ ಮಹರ್ಷಿಗಳು ತಪೋ ನಿರತರಾಗಿದ್ದಾಗ ಶ್ರೀಮನ್ನಾರಾಯಣನು ಪ್ರತ್ಯಕ್ಷನಾಗಿ, ಮಹರ್ಷಿಗಳನ್ನು ರೋಗಮುಕ್ತರನ್ನಾಗಿ ಅನುಗ್ರಹಿಸಿದ ಈ ಪವಿತ್ರ ಕ್ಷೇತ್ರವೇ ವೇದಾದ್ರಿ ಎಂಬ ಐತಿಹ್ಯವಿದೆ. ದೇವಲೋಕದಲ್ಲಿ ಕುಪಿತಳಾದ ಕಚೀ ದೇವಿಯನ್ನು ಸಾ೦ತ್ವನಗೊಳಿಸಿ, ನಾರದ ಮಹರ್ಷಿಗಳು ಚ್ಯವನ ಮಹರ್ಷಿಗಳಿದ್ದ ಈ ಕ್ಷೇತ್ರಕ್ಕೆ ಕರೆತಂದರು. ಶ್ರೀ ದೇವಿಯ ವರದಿಂದ ರಾಣಿ ಶಚೀ ದೇವಿಯು ಇ೦ದ್ರದೇವನೊಡನೆ ಸಮಾಗಮವನ್ನು ಹೊಂದಿದಳೆಂದು ಸ್ಕಂದ ಪುರಾಣ ಹೇಳುತ್ತದೆ. ಆದ್ದರಿಂದ ಈ ಕ್ಷೇತ್ರವು ರಾಣಿ ಶಚೀದೇವಿಯ ಹೆಸರಿನಿಂದ ಇಂದ್ರಾಣಿಯಾಗಿ ಪ್ರಸಿದ್ಧಿ ಪಡೆಯಿತು.

ಈ ಇಂದ್ರಾಣಿ ಕ್ಷೇತ್ರಕ್ಕೆ ಹೊಂದಿಕೊಂಡು, ಹಸಿರು ಹೊದ್ದಂತೆ ಕಾಣುವ ಸುಂದರವಾದ ಕಾನನದ ನಡುವೆ ಇಂದ್ರಾಣಿ ತೀರ್ಥದ ಉಗಮ ಸ್ಥಾನದಲ್ಲಿ ಆಂಜನೇಯ ಗುಡಿ ಮತ್ತು ನಾಗಬನಗಳಿವೆ. ನೂರಾರು ವರ್ಷಗಳ ಹಿಂದೆ ಇಲ್ಲಿ ಮಠ ಪರಂಪರೆಯ ಸ್ವಾಮಿಗಳಿಂದ ಆಂಜನೇಯ ದೇವರ ಪ್ರತಿಷ್ಠೆಯಾಗಿದೆ ಎಂದು ತಿಳಿದು ಬರುತ್ತದೆ. 2024ರಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶ್ರೀ ಆಂಜನೇಯ ದೇವರ ಗುಡಿಯನ್ನು ಜೀರ್ಣೋದ್ಧಾರ ಮಾಡುವ ಬಗ್ಗೆ ನಿರ್ಧರಿಸಿ, ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ತೋರಿ ಬಂದಂತೆ, ಪ್ರಾಯಶ್ಚಿತ್ತಾದಿ ಪರಿಹಾರ ಕಾರ್ಯಗಳನ್ನು ಮಾಡಿ, ಶ್ರೀ ದೇವರ ಸುಂದರ ಶಿಲಾಮಯ ಗುಡಿಯನ್ನು ಪ್ರಕೃತಿ ಸೌಂದರ್ಯವನ್ನು ಉಳಿಸಿಕೊಂಡು ನಿರ್ಮಿಸಲಾಗಿದೆ.

ಶ್ರೀ ಆಂಜನೇಯ ದೇವರ ಶಿಲಾಮಯ ಗುಡಿ, ಸುತ್ತುಪೌಳಿಯ ನಿರ್ಮಾಣ ಯೋಜನೆಗೆ ಸುಮಾರು 3 ಕೋಟಿ ವೆಚ್ಚ ತಗಲಿದ್ದು, 2026 ರ ಏಪ್ರಿಲ್ 3 ರಿಂದ 7 ರ ರವರೆಗೆ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು, ವೈದಿಕ, ಧಾರ್ಮಿಕ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗಳೊಂದಿಗೆ ನೆರವೇರುತ್ತಿದೆ. ಎಪ್ರಿಲ್ 1ರಂದು ಉಡುಪಿ ಶ್ರೀ ಕೃಷ್ಣಮಠದಿಂದ ಹೊರೆ ಕಾಣಿಕೆ ಶೋಭಾ ಯಾತ್ರೆ ಹೊರಡಲಿದ್ದು, ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಚಾಲನೆ ನೀಡಲಿದ್ದಾರೆ. ಎಪ್ರಿಲ್ 3 ರಂದು ಸಂಜೆ 6 ರಿಂದ ವಾಸ್ತು ಪೂಜೆ, ವಾಸ್ತು ಬಲಿ, ಬಿಂಬಾಧಿವಾಸ ಪೂಜಾದಿಗಳು ನೆರವೇರಲಿದೆ. ಎಪ್ರಿಲ್ 4 ರಂದು ಬೆಳಿಗ್ಗೆ 6-48 ರಿಂದ ಅಷ್ಟಬಂಧ ಸಹಿತ ಶ್ರೀ ಮುಖ್ಯಪ್ರಾಣ ದೇವರ ಪ್ರತಿಷ್ಠಾ ಕಾರ್ಯಕ್ರಮಗಳು ಆರಂಭವಾಗಲಿದೆ. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನೆರವೇರಲಿದೆ. ಎಪ್ರಿಲ್ 5 ರಂದು ಶ್ರೀ ಮುಖ್ಯಪ್ರಾಣ ದೇವರಿಗೆ ಬ್ರಹ್ಮಕುಂಬಾಭಿಷೇಕ, ಪ್ರಸನ್ನ ಪೂಜಾದಿಗಳು, ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ಜರುಗಲಿದೆ. ಆ ದಿನ ಸಂಜೆ 7 ರಿಂದ ಮಹಾರಂಗ ಪೂಜೆ ಜರುಗಲಿದೆ. ಎಪ್ರಿಲ್ 6 ರಂದು ಸಂಜೆ 6 ರಿಂದ ನಾಗಗುಡಿಯಲ್ಲಿ ವಾಸ್ತು, ರಕ್ಷಾ ಹೋಮ, ಬಿಂಬಾಧಿವಾಸ ಪೂಜಾದಿಗಳು ನೆರವೇರಲಿದೆ. ಎಪ್ರಿಲ್ 7 ರಂದು ನಾಗದೇವರ ಪುನಃ ಪ್ರತಿಷ್ಠಾದಿಗಳು ಆಶ್ಲೇಷ ಬಲಿ, ಮಹಾ ಪೂಜೆ, ವಟು ಆರಾಧನೆ, ಅನ್ನಸಂತರ್ಪಣೆ, ಪ್ರಸಾದ ವಿತರಣೆ ನೆರವೇರಲಿದೆ ಎಂದುಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಹೊರೆ ಕಾಣಿಕೆ ಶೋಭಾ ಯಾತ್ರೆಗೆ ಚಾಲನೆ ನೀಡಲಿರುವರು. ಉಡುಪಿಯ ಅಷ್ಟಮಠಗಳ ಯತಿವರೇಣ್ಯರುಗಳಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು, ಶ್ರೀ ಶ್ರೀ ವಿದ್ಯಾ ವಲ್ಲಭ ತೀರ್ಥ ಶ್ರೀಪಾದರು, ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠಾಧಿಪತಿಗಳಾದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಈ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಶೀರ್ವದಿಸಲಿರುವರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಏಪ್ರಿಲ್ 4 ರಂದು ರಾತ್ರಿ 7:30ರಿಂದ ಕಲಾಮಯಂ ಉಡುಪಿ ಇವರಿಂದ ಜನಪದ ಹಾಗೂ ರಂಗ ಸಂಗೀತ ಮತ್ತು ಜಾನಪದ ವಾದ್ಯ ಪರಿಕರಗಳ ಸಮ್ಮಿಲನ ಗೊಂಡ ಜನಪದ ಕಲರವ, ಏಪ್ರಿಲ್ 5 ರಂದು ರಾತ್ರಿ 7:30 ರಿಂದ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವ್ಯಜ ಕ್ಷೇತ್ರ ಪಾವಂಜೆ, ಕದ್ರಿ ನವನೀತ ಶೆಟ್ಟಿ, ವಿರಚಿತ, ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿಯವರ ಸಾರಥ್ಯದಲ್ಲಿ ಯಕ್ಷಗಾನ ಛಾಯಾನಂದನ, ಏಪ್ರಿಲ್ 6 ರಂದು ಸಂಜೆ 7:30 ರಿಂದ ಗುರುವಸಂತಿ ಸಾಂಸ್ಕೃತಿಕ ವೇದಿಕೆ ಮಣಿಪಾಲ ಇವರ ಪೌರಾಣಿಕ ನಾಟಕ ಬಿಕ್ರಮ ಬಜರಂಗಿ, ಏಪ್ರಿಲ್ ಏಳರಂದು ಸಂಜೆ 7.30 ರಿಂದ ಶ್ರೀ ಯಕ್ಷನಿಧಿ ಮೂಡುಬಿದರೆ (ರಿ.) ಯಕ್ಷಗಾನ ಶಿಕ್ಷಣ ಸಂಸ್ಥೆ ಮತ್ತು ಯುವಮೇಳ ಇವರಿಂದ ಯಕ್ಷಗಾನ - ವೀರಮಣಿ ಕಾಳಗ ಜೊತೆಗೆ 5 ದಿನಗಳಲ್ಲಿ ನೃತ್ಯ ವೈಭವ, ಭಜನಾಮೃತಂ, ಭಕ್ತಿ ಸಂಗೀತ ತಾಳಮದ್ದಲೆ ಕೂಟ, ಭಕ್ತಿ ಗಾನ, ನೃತ್ಯಾಮೃತಂ, ನಿರಂತರ ಭಜನಾ ಕಾರ್ಯಕ್ರಮಗಳು ಜರುಗಲಿವೆ.

ಲೋಕ ಕಲ್ಯಾಣ ಹಾಗೂ ಭಗವದ್ಭಕ್ತರ ಇಷ್ಟಾರ್ಥ ಈಡೇರಿಕೆಗಾಗಿ ಹನುಮಾನ್ ಚಾಲೀಸಾ ಲೇಖನ ಯಜ್ಞ ಆರಂಭವಾಗಿದೆ. ಭಕ್ತರು ಹನುಮಾನ್ ಚಾಲೀಸಾ ಪುಸ್ತಕವನ್ನು ಮನೆಗೆ ಕೊಂಡೊಯ್ದು, ಪೂಜಾ ಸ್ಥಳದಲ್ಲಿ ಬರೆದು, ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಬಳಿಕ ಸನ್ನಿಧಾನಕ್ಕೆ ತಂದು ಒಮ್ಮೆ ಹನುಮಾನ್ ಚಾಲೀಸಾ ಪಠಿಸಿ ದೇವರಿಗೆ ಅರ್ಪಿಸಬೇಕು. ಇದರಿಂದ ಧೈರ್ಯ, ಶೌರ್ಯ, ಆತ್ಮಸ್ಥೆರ್ಯ ಸೃಷ್ಟಿಯಾಗುತ್ತದೆ ಹಾಗೂ ಮನೆಗೆ, ಮಕ್ಕಳಿಗೆ, ನಾಡಿಗೆ ಒಳ್ಳೆಯದಾಗುತ್ತದೆ.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಗವದ್ಭಕ್ತರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಂದು, ಅನಂತ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಪೂಜಿಸಲ್ಪಡುವ ಶ್ರೀ ಮುಖ್ಯಪ್ರಾಣ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು