ಮಣಿಪಾಲ: ಇಲ್ಲಿನ ಪ್ರಸಿದ್ಧ ಆಸ್ಪತ್ರೆಯ ಮುಂಭಾಗದ ಕ್ಯಾಂಟೀನ್‌ನಲ್ಲಿ ಟೀ ಕುಡಿಯುತ್ತಿದ್ದ ವ್ಯಕ್ತಿಯೊಬ್ಬನನ್ನು ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದ ಏಳೆಂಟು ಮಂದಿಯ ತಂಡವೊಂದು ಹಾಡಹಗಲೇ ಅಪಹರಿಸಿರುವ ಘಟನೆ ನಡೆದಿದೆ.
ಕೊಡ್ಲಾಡಿ ಗ್ರಾಮದ ನಿವಾಸಿ ರಾಮ ಮಡಿವಾಳ ಅವರು ತಮ್ಮ ಸಹೋದರ ಲಕ್ಷ್ಮಣ ಅವರಿಗೆ ಚಿಕಿತ್ಸೆ ಕೊಡಿಸಲು ಮಣಿಪಾಲದ ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಮತ್ತೋರ್ವ ಸಹೋದರ ರಾಜೇಶ್ ಹಾಗೂ ಸುಧೀರ್ ಎಂಬುವವರ ಜೊತೆ ಆಸ್ಪತ್ರೆಯ ಹೊರಗಿನ ಕ್ಯಾಂಟೀನ್‌ನಲ್ಲಿ ಚಹಾ ಸೇವಿಸುತ್ತಿದ್ದರು.
ಅದೇ ಸಮಯದಲ್ಲಿ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಸೆಲ್ಟಾಸ್ ಕಾರಿನಲ್ಲಿ ಬಂದ ಏಳೆಂಟು ಮಂದಿ ಅನಿರೀಕ್ಷಿತವಾಗಿ ರಾಜೇಶ್ ಅವರ ಮೇಲೆರಗಿ, ಬಲತ್ಕಾರವಾಗಿ ಕಾರಿನೊಳಗೆ ತುೂಕಿ ಮಣಿಪಾಲದಿಂದ ಹಿರಿಯಡಕ ಮಾರ್ಗವಾಗಿ ಪರಾರಿಯಾಗಿದ್ದಾರೆ.
ಅಪಹರಣಕಾರರನ್ನು ಮಲ್ಲಾರೆಡ್ಡಿ, ತುಳಜಾ, ನರಸಿಂಗ, ಹುಸೇನ್, ಶಂಕರ, ನಾಗೇಶ್, ಪರಮೇಶ್ವರ್ ಹಾಗೂ ವಿಜಯ್ ಎಂದು ಗುರುತಿಸಲಾಗಿದೆ. ಈ ತಂಡವು ಈ ಹಿಂದೆ ತೆಲಂಗಾಣದಲ್ಲಿನ ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ ರಾಜೇಶ್ ಅವರ ಮನೆಗೆ ಬಂದು ಮಾತುಕತೆ ನಡೆಸಿತ್ತು ಎನ್ನಲಾಗಿದೆ. ಇದೇ ವ್ಯವಹಾರದ ಹಳೇ ದ್ವೇಷ ಅಥವಾ ಹಣಕಾಸಿನ ವಿಚಾರಕ್ಕಾಗಿ ಈ ಕಿಡ್ನಾಪ್ ನಡೆದಿದೆ ಎಂಬ ಸಂಶಯ ವ್ಯಕ್ತವಾಗಿದೆ.
ಸದ್ಯ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಜನನಿಬಿಡ ಪ್ರದೇಶದಲ್ಲೇ ನಡೆದ ಈ ಕೃತ್ಯ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

0 ಕಾಮೆಂಟ್‌ಗಳು