ಕನ್ನಡದ ವರನಟ ಡಾ.ರಾಜ್‌ಕುಮಾರ್ ಜಯಂತಿ ಒಂದು ಅಪರೂಪದ ಕಾರ್ಯಕ್ರಮ. ಒಬ್ಬ ಚಿತ್ರ ನಟನ ಜಯಂತಿ ಕಾರ್ಯಕ್ರಮವನ್ನು ಆಚರಿಸುವುದು ದೇಶದಲ್ಲೇ ಅತ್ಯಂತ ಅಪೂರ್ವವಾಗಿದೆ. ರಾಜ್‌ಕುಮಾರ್ ಅವರು ಕೇವಲ ನಟ ಮಾತ್ರವಲ್ಲ, ಅವರೊಬ್ಬ ಸರಳ-ಸಜ್ಜನ ವ್ಯಕ್ತಿ. ಸರಳತೆಯಿಂದ ಅವರು ಬದುಕಿದ ರೀತಿ ಅನುಕರಣೆ ಮಾಡುವುದು ಯೋಗ್ಯ. ಒಬ್ಬ ನಟನಾಗಿಯೂ ಸಮಾಜಕ್ಕೆ ಕೊಡುಗೆ ನೀಡಬಹುದು ಎಂದು ತೋರಿಸಿಕೊಟ್ಟ ಅವರ ಮಾನವೀಯ ಮೌಲ್ಯಗಳು ಜನರಿಗೆ ತಿಳಿಯಬೇಕು ಎನ್ನುವ ನಿಟ್ಟಿನಲ್ಲಿ ಜಯಂತಿ ಕಾರ್ಯಕ್ರಮ ನಡೆಸುತ್ತಿರುವುದು ಅರ್ಥಪೂರ್ಣ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಬ್ರಹ್ಮಗಿರಿಯ ರೆಡ್‌ಕ್ರಾಸ್ ಸಭಾಂಗಣದಲ್ಲಿ ನಡೆದ ವರನಟ ಡಾ.ರಾಜ್‌ಕುಮಾರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ರಾಜ್‌ಕುಮಾರ್ ಅಪಾರ ಅಭಿಮಾನಿಗಳ ಹೃದಯದ ಕಣ್ಮಣಿಯಾಗಿದ್ದರು. ಅವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ನೋಡಲೆಂದು ಜನರು ಸಾಗರೋಪಾದಿಯಲ್ಲಿ ಬಂದಿದ್ದರು. ಅದ್ಭುತ ಗಾಯಕರಾಗಿದ್ದ ಅವರ ಕಂಠಸಿರಿಯ ಆಕರ್ಷಣೆಯೇ ಅಂಥದ್ದು. ಚಲನ ಚಿತ್ರಗಳಲ್ಲಿ ಅಮೋಘ ನಟನಾ ಸಾಮರ್ಥ್ಯವನ್ನು ನಮ್ಮೆಲ್ಲರಿಗೂ ತೋರಿಸಿದ ಅವರು ನಿಜ ಜೀವನದಲ್ಲಿ ನಾವೆಲ್ಲಾ ಯಾವ ರೀತಿ ವ್ಯವಹರಿಸಬೇಕು ಎನ್ನುವುದನ್ನೂ ತೋರಿಸಿಕೊಟ್ಟಿದ್ದಾರೆ. ಯುವಜನತೆ ಡಾ.ರಾಜ್ ಬಗ್ಗೆ ತಿಳಿದುಕೊಂಡು ಅವರ ಆಚಾರ-ವಿಚಾರಗಳನ್ನು ಮತ್ತು ಅವರ ಜೀವನದ ಮೌಲ್ಯಗಳನ್ನು ತಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡು ಸಾಧನೆ ಮಾಡಬೇಕು ಎಂದರು.
ಭಾರತೀಯ ರೆಡ್‌ಕ್ರಾಸ್ ರಾಜ್ಯ ಸಭಾಪತಿ ಬಸರೂರು ರಾಜೀವ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವಿತಾವಧಿಯಲ್ಲಿ ಸಾಧನೆಗಳ ಸರಮಾಲೆಯನ್ನೆ ಮೂಡಿಗೆರಿಸಿಕೊಂಡಿರುವ ಡಾ. ರಾಜ್ ಕುಮಾರ್ ಅವರು ಜಯಂತಿಯನ್ನು ಸರಕಾರ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ತಮ್ಮ ನಟನೆಯಲ್ಲಿ ನೈಜತೆ ಹೊಂದಿದ ಅವರು ಜನಮಾನಸದಲ್ಲಿ ಮೇರುನಟರಾಗಿ ಇಂದಿಗೂ ಅಚ್ಚಳಿಯದೆ ಉಳಿದಿದ್ದಾರೆ. ಕನ್ನಡ ನಾಡು ನುಡಿಯ ಬಗ್ಗೆ ಒಲವು ಹೊಂದಿದ್ದ, ದೊಡ್ಡ ಕಲಾವಿದರಗಿಯೂ ಸರಳ ಜೀವನ ನಡೆಸಿದ ಇಂತಹ ವ್ಯಕ್ತಿಗಳ ಜೀವನ ಮೌಲ್ಯಗಳು ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ ಎಂದರು.
ಖ್ಯಾತ ಚಲನಚಿತ್ರ ಕಲಾವಿದೆ ಪ್ರತಿಮಾ ನಾಯಕ್ ಡಾ.ರಾಜ್‌ಕುಮಾರ್ ಅವರ ಜೀವನ ಮತ್ತು ನಟನೆ ಕುರಿತು ಉಪನ್ಯಾಸ ನೀಡಿ, ಹೆಚ್ಚು ವಿದ್ಯಾಭ್ಯಾಸ ಮಾಡಿಲ್ಲದೇ ಇದ್ದರೂ ತಮ್ಮ ಅಭಿಜಾತ ಕಲಾ ಪ್ರತಿಭೆಗಾಗಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡ ಡಾ.ರಾಜ್ ಜೀವನವೇ ಒಂದು ದಂತಕಥೆ. ಅವರ ನಟನೆಗೆ ಮನ ಸೋಲದ ಜನರೇ ಇಲ್ಲ. ತಂದೆಯAತೆಯೇ ಗುಬ್ಬಿ ವೀರಣ್ಣ ನಾಟಕ ಕಂಪನಿಯಿAದ ತಮ್ಮ ನಟನಾ ಜೀವನವನ್ನು ಆರಂಭಿಸಿ ಮೊದಲಿಗೆ ನಾಟಕಗಳಲ್ಲಿ ಅಭಿನಯಿಸಿ ತದನಂತರ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಭಕ್ತಿ ಪ್ರಧಾನ ಹಾಗೂ ಪೌರಾಣಿಕ ಪಾತ್ರದಲ್ಲಿ ಮಿಂಚಿ ಐತಿಹಾಸಿಕ ಚಿತ್ರಗಳ ಭಾಗವಾಗಿ ಎಲ್ಲ ನಟರಿಗೂ ಪ್ರೇರಣೆಯಾಗಿದ್ದಾರೆ. ಚಿತ್ರಗಳ ಮೂಲಕ ಸಾಮಾಜಿಕ ಸಂದೇಶ ನೀಡಿ ಸಮಾಜದಲ್ಲಿ ಪರಿವರ್ತನೆಗೆ ಕಾರಣರಾಗಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದರಾಗಿದ್ದರೂ ತಮ್ಮ ಸಹ ಕಲಾವಿದರ ಜೊತೆ ಯಾವುದೇ ಹಮ್ಮು-ಬಿಮ್ಮುಗಳಿಲ್ಲದೇ ನಟಿಸುತ್ತಿದ್ದ ಅವರು ಇಂದಿನ ನಟರಿಗೆ ಮಾದರಿಯಾಗಿದ್ದಾರೆ. ಅವರು ಹಾಡಿದ ಗೀತೆಗಳಲ್ಲಿ ಭಾವ ಸ್ಪುರಿಸುತ್ತಿದ್ದುದರಿಂದ ಕೇಳುಗರು ಮಂತ್ರಮುಗ್ದರಾಗುತ್ತಿದ್ದರು. ಇಂದಿಗೂ ಅವರ ಹಾಡುಗಳನ್ನು ಕೇಳಿ ಆನಂದಿಸುತ್ತಿದ್ದೇವೆ. ಅಗಾಧ ಕೀರ್ತಿಯನ್ನು ಪಡೆದಿದ್ದರೂ ತಮ್ಮ ವಿನಯವಂತಿಕೆಯಿAದ ಎಲ್ಲರನ್ನೂ ಆಕರ್ಷಿಸಿದ ಅವರು ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಐದು ದಶಕಗಳ ಕಾಲ 212 ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ನಟನೆ ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳಲ್ಲೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಕನ್ನಡ ಏಕೀಕರಣ ಚಳುವಳಿಯ ಸೇನಾನಿಯಾಗಿದ್ದ ಅವರು ರಾಷ್ಟçದ ಅತ್ಯುನ್ನತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯಿಂದ ದೊರೆತ ಹಣವನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ದೇಣಿಗೆ ನೀಡಿ ತಮ್ಮ ಕನ್ನಡ ಪ್ರೇಮವನ್ನು ಜಗಜ್ಜಾಹೀರು ಮಾಡಿದ್ದಾರೆ. ಸಂತ್ರಸ್ತರ ನಿಧಿಗೆ, ಆಸ್ಪತ್ರೆಗಳಿಗೆ ಮತ್ತು ಸಾಮಾಜಿಕ ಕಾರ್ಯಗಳಿಗೆ ಸಹಾಯಾರ್ಥವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಡುವುದರೊಂದಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಅವರ ಭಾಷಾ ಶುದ್ದತೆ, ಜೀವನದ ಮೌಲ್ಯಗಳು, ಹಿರಿಯರಿಗೆ ನೀಡುತ್ತಿದ್ದ ಗೌರವ ಮತ್ತು ಪರೋಪಕಾರ ಪ್ರವೃತ್ತಿ ಎಲ್ಲವೂ ಅನುಕರಣೀಯ ಎಂದರು.
ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಾದ ದಿಶಾ ಮತ್ತು ದಿಯಾ ಡಾ.ರಾಜ್ ಕುಮಾರ್ ಅವರ ಚಿತ್ರಗೀತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಮಿಡ್‌ಟೌನ್ ಅಧ್ಯಕ್ಷ ಪುರುಷೋತ್ತಮ್ ನಾಯಕ್, ಡಾ.ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ, ವಾರ್ತಾ ಇಲಾಖೆಯ ಸಿಬ್ಬಂದಿಗಳು, ರೆಡ್‌ಕ್ರಾಸ್ ಹಾಗೂ ಡಿ.ಡಿ.ಆರ್.ಸಿ ಸಿಬ್ಬಂದಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಘಟಕದ ಕಾರ್ಯದರ್ಶಿ ಗಣನಾಥ್ ಶೆಟ್ಟಿ ಎಕ್ಕಾರ್ ನಿರೂಪಿಸಿ, ಖಜಾಂಜಿ ರಮಾದೇವಿ ವಂದಿಸಿದರು.

0 ಕಾಮೆಂಟ್‌ಗಳು