ಪಾಡ್ದನ ಕಲಾವಿದೆ ಸಿಂಧು ಗುಜರನ್ ಮೂಲ್ಕಿ ಅವರಿಗೆ ತುಳು ಪಾಡ್ದನ ಪ್ರಶಸ್ತಿ

ಉಡುಪಿ: ತುಳುನಾಡು ದೈವಾರಾಧನೆ, ನಾಗಾರಾಧನೆಯ ಮೂಲ ನೆಲೆಯಾಗಿದ್ದು, ನಮ್ಮ ಮಣ್ಣಿನ ಮೂಲ ಸಂಸ್ಕೃತಿಯನ್ನು ತಿಳಿದು ಕೊಳ್ಳಬೇಕಾದರೆ ತುಳು ಪಾಡ್ದನಗಳನ್ನು ಅಧ್ಯಯನ ಮಾಡಬೇಕು. ಜನಪದರಿಂದ ಬಾಯ್ದೆರೆಯಾಗಿ ಬಂದಿರುವ ಪಾಡ್ದನಗಳು ತುಳುವರ ಮಹಾಕಾವ್ಯಗಳಾಗಿವೆ ಎಂದು ನ್ಯಾಯವಾದಿ ಎಂ.ಶಾAತಾರಾಮ್ ಶೆಟ್ಟಿ ತಿಳಿಸಿದ್ದಾರೆ.

ದೆಂದೂರಿನ ಕೊಲ್ಲುಕೃಷ್ಣ ಶೆಟ್ಟಿ ಫೌಂಡೇಶನ್ ವತಿಯಿಂದ ಬ್ರಹ್ಮಗಿರಿ ಪ್ರಧಾನ್ ಹೊಟೇಲ್ ಸಭಾಂಗಣದಲ್ಲಿ ನಡೆದ ತುಳು ಪಾಡ್ದನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತುಳುನಾಡಿನ ದೈವಾರಾಧನೆಯಲ್ಲಿ ರಾತ್ರಿ ಹೊತ್ತು ದೈವಗಳ ಇತಿಹಾಸವನ್ನು ಪದ್ಯರೂಪದಲ್ಲಿ ಹಾಡುತ್ತಿದ್ದ ಹಿರಿಯ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುವ ಹೊಸ ಸಂಪ್ರದಾಯವನ್ನು ದೆಂದೂರಿನ ಕೊಲ್ಲುಕೃಷ್ಣ ಶೆಟ್ಟಿ ಫೌಂಡೇಶನ್ ವತಿಯಿಂದ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಇದೇ ವೇಳೆ ಕರ್ನಾಟಕ ರಾಜ್ಯೋತ್ಸವ ಮತ್ತು ಜನಪದ ಅಕಾಡೆಮಿ ಪ್ರಶಸ್ತಿ ವಿಜೇತ ಪಾಡ್ದನ ಕಲಾವಿದೆ ಸಿಂಧು ಗುಜರನ್ ಮೂಲ್ಕಿ ಅವರಿಗೆ ೧೦ಸಾವಿರ ನಗದು,ಅಕ್ಕಿ ಮುಡಿ ಸಹಿತ ಪಾಡ್ದನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅವರು ದೆಂದೂರು ದಯಾನಂದ ಕೆ ಶೆಟ್ಟಿ ಅವರು ಬರೆದಿರುವ ‘ಬನ್ನಂಜೆ ಕಲ್ಕುಡ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ತುಳು ಭಾಷೆ, ಆರಾಧನೆ, ಸಂಪ್ರದಾಯ, ಆಚಾರ ವಿಚಾರಗಳನ್ನು ಬಿಂಬಿಸುವ ಹಲವಾರು ಕಾರ್ಯಕ್ರಮಗಳನ್ನು ತುಳುಕೂಟ ಹಮ್ಮಿಕೊಳ್ಳುತ್ತಾ ಬಂದಿದೆ. ಹಿರಿಯರನ್ನು ಗುರುತಿಸಿ ಪಾಡ್ದನ ಪುರಸ್ಕಾರ ನೀಡುವ ಹೊಸ ಸಂಪ್ರದಾಯವನ್ನು ೫ವರ್ಷಗಳಿಂದ ದೆಂದೂರಿನ ಕೊಲ್ಲುಕೃಷ್ಣ ಶೆಟ್ಟಿ ಫೌಂಡೇಶನ್ ಮಡಿರುವುದು ಇತರರಿಗೆ ಮಾದರಿಯೆನಿಸಿದೆ ಎಂದರು. ಇದೇ ವೇಳೆ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಹೃದಯಂ ಫೌಂಡೇಶನ್ ಮುಖ್ಯಸ್ಥ, ಉದ್ಯಮಿ ಸುಭಾಷ್ ಸಾಲಿಯಾನ್, ಬ್ರಹ್ಮಗಿರಿ ಪ್ರಧಾನ್ ಹೊಟೇಲ್ ಉದ್ಯಮಿ ಚೇತನ್ ಕುಮಾರ್ ಶೆಟ್ಟಿ, ಜಯಂಟ್ಸ್ ಸಂಸ್ಥೆಯ ಕೇಂದ್ರೀಯ ಸಮಿತಿ ಸದಸ್ಯ ದಿನಕರ್ ಅಮೀನ್, ದೆಂದೂರಿನ ಕೊಲ್ಲುಕೃಷ್ಣ ಶೆಟ್ಟಿ ಫೌಂಡೇಶನ್ ಗೌರವಾಧ್ಯಕ್ಷೆ ದೀಪಾ ಚೇತನ್‌ಕುಮಾರ್ ಶೆಟ್ಟಿ, ಕಾರ್ಯದರ್ಶಿ ಗುಣವತಿ ದಯಾನಂದ ಶೆಟ್ಟಿ, ಕೋಶಾಧಿಕಾರಿ ಇಶಾನಿ ಶೆಟ್ಟಿ, ಅಶೋಕ್ ಅಲೆವೂರು, ಎಸ್.ಎನ್.ಶೆಟ್ಟಿ,ವಸಂತ ಶೆಟ್ಟಿ ಮುಂಬಯಿ, ರಾಮ್ ವಿ.ಕುಂದರ್,ಉಷಾ ಶೆಟ್ಟಿ ಮುಗ್ಗೇರಿ,ನಾಗೇಶ್ ಶೆಟ್ಟಿ ದೆಂದೂರು, ಯಶೋಧ ಶೆಟ್ಟಿ ಪಾಂಗಾಳ,ಯಶೋಧ ಕೇಶವ್, ಗಂಗಾಧರ್ ಕಿದಿಯೂರ್, ನಾಟಿ ವೈದ್ಯ ಪದ್ಮನಾಭ್ ಆರ್. ಕೋಟ್ಯಾನ್, ಡಯಾನ ಸುಪ್ರಿಯ ಉಪಸ್ಥಿತರಿದ್ದರು. ದೆಂದೂರಿನ ಕೊಲ್ಲುಕೃಷ್ಣ ಶೆಟ್ಟಿ ಫೌಂಡೇಶನ್ ಅಧ್ಯಕ್ಷ ದಯಾನಂದ್ ಕೆ.ಶೆಟ್ಟಿ ದೆಂದೂರು ಸ್ವಾಗತಿಸಿದರು. ಪ್ರಕಾಶ ಸುವರ್ಣ ಕಟಪಾಡಿ ನಿರೂಪಿಸಿದರು.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು