ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ದ ಮಣಿಪಾಲ್ ಗ್ರೂಪ್ ಮಣಿಪಾಲ ಇದರ ಸಂಯುಕ್ತ ಆಶ್ರಯದಲ್ಲಿ ಟಿಎಂಜಿ ಸುನಿಧಿ ಫೌಂಡೇಷನ್ ಟ್ರಸ್ಟ್ನ ಸಿಎಸ್‌ಆರ್ ನಿಧಿಯಿಂದ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆಗೆ ಕೊಡುಗೆಯಾಗಿ ನೀಡಲಾದ ಪೋರ್ಟಬಲ್ ಎಕ್ಸ್ ರೇ ಮತ್ತು ಡಿಜಿಟಲ್ ರೇಡಿಯೋಗ್ರಫಿ ವ್ಯವಸ್ಥೆಗಳನ್ನು ಅಜ್ಜರಕಾಡಿನ ಜಿಲ್ಲಾ ಸರ್ವೇಕ್ಷಣ ಘಟಕದಲ್ಲಿ ಹಸ್ತಾಂತರಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಸವರಾಜ್ ಹುಬ್ಬಳ್ಳಿ ಇಲಾಖೆಯ ಪರವಾಗಿ ಉಪಕರಣಗಳನ್ನು ಸ್ವೀಕರಿಸಿ ಮಾತನಾಡಿ, ಜಿಲ್ಲೆಯ ಆರೋಗ್ಯ ಕ್ಷೇತ್ರದ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಮಣಿಪಾಲ್ ಗ್ರೂಪ್ ಸಂಸ್ಥೆಯು ಕಳೆದ ಒಂದು ದಶಕದಿಂದ ತಮ್ಮ ಸಿಎಸ್‌ಆರ್ ನಿಧಿಯಿಂದ ಹಲವಾರು ಉಪಕರಣಗಳನ್ನು ಕೊಡುಗೆಯಾಗಿ ನೀಡಿದೆ. ಕೋವಿಡ್ ಸಂಕಷ್ಟದ ಕಾಲದಲ್ಲಿ ಮೇಲ್ವಿಚಾರಣೆಗೆ ಅಗತ್ಯವಾಗಿದ್ದ ವಾಹನಗಳನ್ನು ಕೊಡುಗೆ ನೀಡಿದಾಗಿನಿಂದ ಆರೋಗ್ಯ ಇಲಾಖೆ ಹಾಗೂ ಸಂಸ್ಥೆಯ ಒಡನಾಟ ಬೆಳೆಯುತ್ತಲೇ ಬಂದಿದ್ದು ಸಂಸ್ಥೆಯು ಕೊಡುಗೆಯಾಗಿ ನೀಡಿರುವ ಎಲ್ಲ ಉಪಕರಣಗಳ ಸದ್ಬಳಕೆಯಾಗಿ ಜನರಿಗೆ ಪ್ರಯೋಜನ ದೊರೆತಾಗ ಸಂಸ್ಥೆ ನೀಡಿದ ಕೊಡುಗೆ ಸಾರ್ಥಕವಾಗುತ್ತದೆ. ಜಿಲ್ಲೆಯನ್ನು ಸಂಪೂರ್ಣವಾಗಿ ಟಿಬಿ ಮುಕ್ತವಾಗಿಸಲು ಇಲಾಖೆಯು ಪಣತೊಟ್ಟಿದ್ದು ಸಮೂಹ ಸಂಸ್ಥೆಗಳ ಸಹಯೋಗದಿಂದಾಗಿ ಈ ಕಾರ್ಯಕ್ಕೆ ವೇಗ ದೊರಕಲಿದೆ ಎಂದರು.
ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ಹಸೀರೀಕರಣ ಮಾಡುವತ್ತ ಒಂದು ಮಹತ್ವದ ಹೆಜ್ಜೆಯಾಗಿ ಎಐ ಆಧಾರಿತ ಪೋರ್ಟಬಲ್ ಎಕ್ಸ್ ರೇ ಮತ್ತು ಡಿಜಿಟಲ್ ರೇಡಿಯೋಗ್ರಫಿ ಉಪಕರಣಗಳ ಉಪಯೋಗದತ್ತ ಆರೋಗ್ಯ ಇಲಾಖೆ ಮುಖ ಮಾಡಿದ್ದು ಇದರಿಂದ ಪರಿಸರದಲ್ಲಿ ಇಂಗಾಲದ ಹೆಜ್ಜೆಗುರುತುಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಈ ನಿಟ್ಟಿನಲ್ಲಿ ದ ಮಣಿಪಾಲ್ ಗ್ರೂಪ್ ಸಂಸ್ಥೆಯು ಆರೋಗ್ಯ ಇಲಾಖೆಯ ಮನವಿಗೆ ಸ್ಪಂದಿಸಿ ಜಿಲ್ಲೆಯ ತಾಯಿ ಮಕ್ಕಳ ಆಸ್ಪತ್ರೆಗೆ ಡಿಜಿಟಲ್ ರೇಡಿಯೋಗ್ರಫಿ ಮತ್ತು ಪೋರ್ಟಬಲ್ ಎಕ್ಸ್ ರೇ ವ್ಯವಸ್ಥೆಗಳನ್ನು ಕೊಡುಗೆಯಾಗಿ ನೀಡಿದೆ. ಜಿಲ್ಲೆಯ ಆರೋಗ್ಯ ಇಲಾಖೆಯು ಆರೋಗ್ಯ ಮೂಲಸೌಕರ್ಯದ ಹಸಿರೀಕರಣದತ್ತ ಒತ್ತು ನೀಡಿದ್ದು, ಜಿಲ್ಲೆಯ 60 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅದಾಗಲೇ ಸೌರ ಫಲಕಗಳನ್ನು ಅಳವಡಿಲಾಗಿದ್ದು ಇದು ರಾಜ್ಯದಲ್ಲೇ ಪ್ರಪ್ರಥಮ ಉಪಕ್ರಮವಾಗಿದೆ. ಆರೋಗ್ಯ ಕ್ಷೇತ್ರದ ಈ ಸಂಪೂರ್ಣ ಸೌರೀಕರಣ ಉಪಕ್ರಮದಲ್ಲಿ ಮಣಿಪಾಲ್ ಗ್ರೂಪ್ ಕೂಡಾ ಕೈಜೋಡಿಸಿದ್ದು ಪರಿಸರ ಸಂರಕ್ಷಣೆಯಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಲಿದೆ. ಸಂಸ್ಥೆಯು ಈ ಹಿಂದೆಯೂ ದಿವ್ಯಾಂಗರಿಗೆ ಶ್ರವಣ ಸಾಧನ, ಬ್ಯಾಟರಿ ಚಾಲಿತ ವಾಹನಗಳನ್ನು ಕೊಡುಗೆಯಾಗಿ ನೀಡಿ ಸಾಮಾಜಿಕ ಕಳಕಳಿಯನ್ನು ತೋರಿದೆ ಎಂದರು.
ಮಣಿಪಾಲ್ ಗ್ರೂಪ್ ನ ಗ್ರೂಪ್ ಸಿಎಚ್‌ಆರ್‌ಓ ಪ್ರಮೋದ್ ಫೆರ್ನಾಂಡಿಸ್ ಉಪಕರಣಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿ ಮಾತನಾಡಿ ಸಂಸ್ಥೆಯು ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಮಹಿಳೆ ಮತ್ತು ಮಕ್ಕಳ ಅಭಿವೃದ್ದಿಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸುನಿಧಿ ಫೌಂಡೇಷನ್ ಟ್ರಸ್ಟ್ ವತಿಯಿಂದ ಸಿ.ಎಸ್.ಆರ್ ನಿಧಿಯನ್ನು ಸಮಾಜಮುಖಿ ಕಾರ್ಯಗಳಲ್ಲಿ ಬಳಸುತ್ತಿದೆ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯು ಮೂಲಸೌಕರ್ಯದ ಉನ್ನತೀಕರಣದತ್ತ ಹೆಜ್ಜೆ ಹಾಕಿರುವುದು ಅಭಿನಂದನಾರ್ಹ ಕಾರ್ಯವಾಗಿದ್ದು ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೊಡುಗೆ ನೀಡಲು ಸಂಸ್ಥೆಯು ಉತ್ಸುಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಣಿಪಾಲ್ ಟೆಕ್ನಾಲಜೀಸ್‌ನ ಜಿಎಂ-ಹೆಚ್‌ಆರ್ ರೊನಾಲ್ಡ್ ಡಿಸೋಜಾ, ಜಿಲ್ಲಾ ಶಸ್ತçಚಿಕಿತ್ಸಕ ಡಾ.ಅಶೋಕ್ ಎಚ್ ಹಾಗೂ ಮತ್ತಿರರು ಉಪಸ್ಥಿತರಿದ್ದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಚಿದಾನಂದ ಸಂಜು ಸ್ವಾಗತಿಸಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸತೀಶ್ ರಾವ್ ನಿರೂಪಿಸಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ವಂದಿಸಿದರು.

0 ಕಾಮೆಂಟ್‌ಗಳು