ಉಡುಪಿ ಜಿಲ್ಲಾ ಯುವಬ್ರಾಹ್ಮಣ ಪರಿಷತ್ ವತಿಯಿಂದ ವಿಪ್ರ ಮಹಿಳಾ ದಿನಾಚರಣೆ ಮತ್ತು ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಸಮಾರಂಭವು ಗುಂಡಿಬೈಲಿನ ಬ್ರಾಹ್ಮೀ ಸಭಾಭವನದಲ್ಲಿ ಜರುಗಿತು. ಆರೋಗ್ಯ ಕಾರ್ಡ್ ಯೋಜನೆಯ ಸಂಚಾಲಕರಾದ ಚೈತನ್ಯ ಎಂ.ಜಿ. ಅವರು ಕಾರ್ಡಿನ ಅಗತ್ಯತೆ ಮತ್ತು ಪ್ರಯೋಜನದ ಬಗ್ಗೆ ವಿವರವಾಗಿ ತಿಳಿಸಿದರು. ಸಾಂಕೇತಿಕವಾಗಿ ಕೆಲವು ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್ ಹಸ್ತಾಂತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾಹೆ ಮಣಿಪಾಲದ ಸಂಶೋಧನ ವಿಭಾಗದ ಡೆಪ್ಯುಟಿ ಡೈರೆಕ್ಟರ್ ಡಾ. ಚೈತ್ರಾ ಆರ್. ರಾವ್ ಅವರು ಮಾತನಾಡುತ್ತಾ ಮಹಿಳೆಯರು ದೇವರಲ್ಲಿ ನಂಬಿಕೆ, ಭಕ್ತಿ ಇಟ್ಟುಕೊಂಡು ಧಾರ್ಮಿಕತೆ, ಯೋಗ, ವ್ಯಾಯಾಮ, ಧ್ಯಾನ, ಮಿತ ಆಹಾರ ಸೇವನೆ ಮುಂತಾದ ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾನಸಿಕ ನೆಮ್ಮದಿಯನ್ನು ಪಡೆದು ತನ್ಮೂಲಕ ಉತ್ತಮ ಸ್ವಾಸ್ಥ್ಯವನ್ನು ಕೂಡ ಹೊಂದಬಹುದು ಎಂದು ಅಭಿಪ್ರಾಯಪಟ್ಟರು. ನಿವ್ರತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಿರ್ಮಲ ಬಿ. ಅವರು ಇನ್ನೋರ್ವ ಅತಿಥಿಯಾಗಿ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಕರಾದ ಖ್ಯಾತ ನೇತೃತಜ್ಞೆ ಡಾ. ರೂಪಶ್ರೀ, ಸಂಗೀತ ವಿದುಷಿ ಶ್ರೀಮತಿ ಉಮಾಶಂಕರಿ, ಹಿರಿಯ ಛಾಯಾಗ್ರಾಹಕ ಪತ್ರಕರ್ತ ಶ್ರೀ ಆಸ್ಟ್ರೋ ಮೋಹನ್ ಇವರನ್ನು ಪರಿಷತ್ತಿನ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಆಶಾ ರಘುಪತಿ ರಾವ್, ದಿವ್ಯ ಪಾಡಿಗಾರ್, ಭಾರತಿ ಕೃಷ್ಣಮೂರ್ತಿ ಸನ್ಮಾನ ಪತ್ರ ವಾಚಿಸಿದರು. ಕಲ್ಪನಾ ಶಯನ, ಪದ್ಮಲತಾ ವಿಷ್ಣು, ಶಶಿಪ್ರಭಾ, ಸುನೀತಾ ಚೈತನ್ಯ, ರಾಧಿಕಾ ಚಂದ್ರಕಾಂತ್, ಅನುಪಮಾ, ಸುಮನ ಆಚಾರ್ಯ, ಪವಿತ್ರ ರಾವ್ ಸಹಕರಿಸಿದರು. ಪರಿಷತ್ತಿನ ಅಧ್ಯಕ್ಷರಾದ ಕೆ. ರಘುಪತಿ ರಾವ್ ಪ್ರಸ್ತಾವಿಸಿ ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಅಮಿತಾ ಕ್ರಮಧಾರಿ ವಂದನಾರ್ಪಣೆಗೈದರು. ಕಾರ್ಯಕ್ರಮದ ಕೊನೆಯಲ್ಲಿ ಮಹಿಳಾ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

0 ಕಾಮೆಂಟ್‌ಗಳು