ಗ್ರಾಮೀಣ ಭಾಗದ ಜನರು ತಮ್ಮ ಖಾತೆಯಿಂದ ಹಣವನ್ನು ATM ಮೂಲಕ ಪಡೆಯಲು ದೂರದ ಪ್ರದೇಶಗಳಿಗೆ ತೆರಳ ಬೇಕಾಗಿದ್ದು, ಇದರ ಬದಲಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ C.S.C. ಕೇಂದ್ರಗಳಲ್ಲಿ ಡಿಜಿ-ಪೇ ಮೂಲಕ ತಮ್ಮ ಹಳ್ಳಿಯಲ್ಲಿಯೇ ಖಾತೆಯಿಂದ ಹಣ ಹಿಂಪಡೆಯುವ ಅವಕಾಶವಿದ್ದು, ಇದೊಂದು ಗ್ರಾಮೀಣ ಭಾಗದ ಜನರಿಗೆ ವರದಾನವಾಗಲಿದೆ ಎಂದು ಉಡುಪಿ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಆನಂದ ಸುವರ್ಣ ರವರು ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಉಡುಪಿ ತಾಲೂಕಿನ ಕೆಳಾರ್ಕಳಬೆಟ್ಟು C.S.C. ಕೇಂದ್ರದಲ್ಲಿ ಡಿಜಿ-ಪೇ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಡಿಜಿ-ಪೇ ಕಾರ್ಯಕ್ರಮದಿಂದ ಗ್ರಾಮೀಣ ಜನರ ಸಮಯ ಮತ್ತು ಖರ್ಚು ವೆಚ್ಚಗಳು ಉಳಿತಾಯವಾಗಲಿದ್ದು, ತಮ್ಮ ಊರಿನಲ್ಲಿ ಹಣ ಪಡೆಯುವ ಸೌಲಭ್ಯ ಸಿಗಲಿದ್ದು, ಬ್ಯಾಂಕ್ ಅಥವಾ ATM ಗೆ ಹೋಗುವ ಅಗತ್ಯವಿರುವುದಿಲ್ಲ ಮತ್ತು ರಶೀದಿ ಬರೆಯುವ (Withdrawal slip) ಅಥವಾ ಎಟಿಎಂ ಕಾರ್ಯದ ಬಗ್ಗೆ ಗೊಂದಲ ಮಾಡಿಕೊಳ್ಳುವ ಪ್ರಮೇಯ ಇರುವುದಿಲ್ಲ ಎಂದರು. ಡಿಜಿ-ಪೇ ಕಾರ್ಯಕ್ರಮದಲ್ಲಿ ಹಣ ಹಿಂಪಡೆಯುವುದು, ಮಿನಿ ಸ್ಟೇಟ್ಮೆಂಟ್ ತೆಗೆಯುವುದು, ಬ್ಯಾಲೆನ್ಸ್ Enquiry ಮುಂತಾದ ಸೇವೆಗಳು ಲಭ್ಯವಿದ್ದು ಗ್ರಾಮದ ಜನರು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀ ನಾಗರಾಜ ಶೆಟ್ಟಿ, ತಾಲೂಕು ಯೋಜನಾಧಿಕಾರಿಯವರಾದ ಶ್ರೀ ಸುರೇಂದ್ರ, CSC ವಿಭಾಗದ ಯೋಜನಾಧಿಕಾರಿಯವರಾದ ಶ್ರೀ ದಿಲೀಪ್ ಜೈನ್, ತಾಲೂಕು ನೋಡಲ್ ಅಧಿಕಾರಿ, ಸೇವಾಪ್ರತಿನಿಧಿ ಮತ್ತು ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

0 ಕಾಮೆಂಟ್‌ಗಳು