ಕಾರ್ಕಳ ತಾಲೂಕಿನ ಮಾಳ ಗೇಟಿನಿಂದ ಎಸ್.ಕೆ. ಬಾರ್ಡರ್ ಮೂಲಕ ಶೃಂಗೇರಿಯ ತನಿಕೋಡು ಗೇಟ್ ವರೆಗಿನ ೨೯ ಕಿ.ಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಕುರಿತು ಸಂಬoಧಿಸಿದ ಅಧಿಕಾರಿಗಳೊಂದಿಗೆ ಇಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಯವರು ಚರ್ಚೆ ನಡೆಸಿದರು.
ಈ ಹೆದ್ದಾರಿ ಅಭಿವೃದ್ಧಿಗೆ ಸುಮಾರು ₹೫೫೦ ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದ್ದು, ಕಾಮಗಾರಿಗೆ ಅಗತ್ಯವಿರುವ ಅರಣ್ಯ ಭೂಮಿ ಸಂಬoಧಿತ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಮಾಳ ಗೇಟ್ ಆರಂಭದಿoದ ರಸ್ತೆ ಇಕ್ಕೆಲಗಳಲ್ಲಿ ಬರುವ ಅರಣ್ಯ ತೆರವುಗೊಳಿಸಲು ಕಂದಾಯ ಇಲಾಖೆಯ ಮೂಲಕ ಅರಣ್ಯ ಇಲಾಖೆಗೆ ಸುಮಾರು ೫೦ ಎಕರೆ ಭೂಮಿಯನ್ನು ವರ್ಗಾಯಿಸಬೇಕಾಗಿದೆ. ಈ ಸಂಬAಧ ಕಡತ ವಿಲೇವಾರಿಗಾಗಿ ನಾಳೆ ಶನಿವಾರ ಶಿವಮೊಗ್ಗ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಲು ಸಮಯ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ, ಇಲಾಖೆಯ ಮಾಹಿತಿಯ ಪ್ರಕಾರ ಹಿಂದೆ ಗುಲಗುಂಜಿ ಮನೆ, ಕೊರ್ಕನಹಳ್ಳಿ ಸೇರಿದಂತೆ ಮೂರು ಸೇತುವೆಗಳು ಮಂಜೂರಾಗಿದ್ದರೂ ಅರಣ್ಯ ಇಲಾಖೆಯ ಅನುಮತಿ ಸಿಗದ ಕಾರಣ ಕಾಮಗಾರಿ ರದ್ದಾಗಿತ್ತು. ಇದೀಗ ಅಗತ್ಯ ಅನುಮತಿ ದೊರಕುವ ನಿರೀಕ್ಷೆಯಲ್ಲಿ ರಸ್ತೆ ಇಕ್ಕೆಲಗಳಲ್ಲಿ ಗಡಿ ಗುರುತು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಮತ್ತು ಕಂದಾಯ ಇಲಾಖೆ ಪ್ರಸ್ತಾಪಿತ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದಲ್ಲಿ, ೧೯೯೯ರಿಂದ ಅಂದರೆ ಸುಮಾರು ೨೫ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಾಳ-ತನಿಕೋಡು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶೀಘ್ರ ಚಾಲನೆ ಸಿಗಲಿದೆ ಎಂದು ಸಂಸದ ಕೋಟ ವಿಶ್ವಾಸ ವ್ಯಕ್ತಪಡಿಸಿದರು.
ಸಂಸದರೊoದಿಗೆ ಎನ್.ಎಚ್ ಇಲಾಖೆಯ ನವೀನ್ ರಾಜ್, ಅರಣ್ಯ ಇಲಾಖೆಯ ಅರುಣ್, ಸತೀಶ್ ನಾಯಕ್, ಸುಬ್ರಹ್ಮಣ್ಯ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

0 ಕಾಮೆಂಟ್‌ಗಳು