ಉಡುಪಿ ಜಿಲ್ಲಾ ಯುವಬ್ರಾಹ್ಮಣ ಪರಿಷತ್ ವತಿಯಿಂದ ಭೀಮ ಜುವೆಲ್ಲರ್ಸ್ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯು ಗುಂಡಿಬೈಲಿನ ಬ್ರಾಹ್ಮಿ ಸಭಾಭವನದಲ್ಲಿ ಸಂಪನ್ನಗೊಂಡಿತು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಾಟಕ ಬ್ಯಾಂಕಿನ ಡಿಜಿಎಂ ವಾದಿರಾಜ ಭಟ್ ಇವರು ದೀಪ ಬೆಳಗಿ ಜಿಲ್ಲಾಮಟ್ಟದ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿದರು. ಅವರು ಮಾತನಾಡುತ್ತಾ ಈ ಹಿಂದೆ ಮನೆಮನೆಗಳಲ್ಲಿ ಸಂಜೆ ವೇಳೆ ಭಜನೆ ಮಾಡುವ ಸಂಪ್ರದಾಯ ಇತ್ತು ಆದರೆ ಇತ್ತೀಚಿನ ದಿನಗಳಲ್ಲಿ ಈ ಸಂಪ್ರದಾಯ ವಿರಳವಾಗುತ್ತಿದ್ದು ಭಜನಾ ಮಂಡಳಿಗಳಿಂದಾಗಿ ಈ ಪರಂಪರೆ ಉಳಿದಿದೆ ಮತ್ತು ಇಂತಹಾ ಭಜನಾ ಸ್ಪರ್ಧೆಗಳ ಮೂಲಕ ಭಜನಾ ತಂಡಗಳಿಗೆ ಉತ್ತೇಜನ ನೀಡಿ ಈ ವಿಶಿಷ್ಟ ಧಾರ್ಮಿಕ ಪದ್ಧತಿಯನ್ನು ಉಳಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಭೀಮಾಗೋಲ್ಡ್ ಸಂಸ್ಥೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಜಿ. ರಾಘವೇಂದ್ರ ಭಟ್ ಇನ್ನೋರ್ವ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ಭಜನಾ ಸ್ಪರ್ಧೆಯು ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಜರುಗಿದ್ದು ಸುಮಾರು 28 ತಂಡಗಳು ಭಾಗವಹಿಸಿದ್ದು ಪ್ರಥಮ 15 ಸಾವಿರ, ದ್ವಿತೀಯ 10 ಸಾವಿರ ಮತ್ತು ತೃತಿಯ 5 ಸಾವಿರ ನಗದು ಬಹುಮಾನ ನೀಡಲಾಯಿತು. ಭಾಗವಹಿಸಿದ ಪ್ರತಿ ತಂಡಕ್ಕೂ ರೂ. 1,000 ನಗದು ನೀಡಿ ಪ್ರೋತ್ಸಾಹಿಸಲಾಯಿತು. ಭಜನಾ ಸ್ಪರ್ಧೆಯ ತೀರ್ಪುಗಾರರಾಗಿ ಅಕ್ಷತಾ ವಿಶು ರಾವ್ ಮತ್ತು ವೆಂಕಟೇಶ ರಾವ್ ಸಹಕರಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಮಹಿಳಾ ವಿಭಾಗದಲ್ಲಿ ಲಕ್ಷ್ಮೀನಾರಾಯಣ ಭಜನಾ ಮಂಡಳಿ,ಕಬ್ಬಿನಾಲೆ (ಪ್ರಥಮ), ಶ್ರೀ ರಾಮ ಭಜನಾಮಂಡಳಿ, ಸಾಲಿಗ್ರಾಮ (ದ್ವಿತೀಯ), ಜನಾರ್ಧನ ಮಹಾಕಾಳಿ ಭಜನಾಮಂಡಳಿ ಅಂಬಲಪಾಡಿ (ತೃತೀಯ) ಬಹುಮಾನ ಪಡೆಯಿತು.
ಪುರುಷರ ವಿಭಾಗದಲ್ಲಿ ಗಿರಿಬಳಗ ಕುಂಜಾರುಗಿರಿ (ಪ್ರಥಮ) ಚಿಟ್ಪಾಡಿ ವಲಯ ಬ್ರಾಹ್ಮಣ ಮಹಾಸಭಾ (ದ್ವಿತೀಯ), ಶ್ರೀ ಕೃಷ್ಣ ಮುಖ್ಯಪ್ರಾಣ ಭಜನಾ ಮಂಡಳಿ, ಪುತ್ತೂರು (ತೃತೀಯ) ಬಹುಮಾನ ಪಡೆಯಿತು. ಸಂಗೀತ ಕ್ಷೇತ್ರದ ಸಾಧಕಿ ವಿದುಷಿ ಮಾಧವಿ ಭಟ್ ಪೆರ್ಣಂಕಿಲ ಮತ್ತು ಸಮಾಜ ಸೇವಕಿ ಸುಮನ ಆಚಾರ್ಯ ಇವರನ್ನು ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.
ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ರಘುಪತಿ ರಾವ್ ಕಿದಿಯೂರು ಪ್ರಸ್ತಾವನೆಗೈದು ಸ್ವಾಗತಿಸಿದರು. ಕಾರ್ಯದರ್ಶಿ ಅಮಿತ ಕ್ರಮಧಾರಿ, ಕೋಶಾಧಿಕಾರಿ ರವೀಂದ್ರ ಆಚಾರ್ಯ, ವಿಷ್ಣು ಪ್ರಸಾದ್ ಪಾಡಿಗಾರ್, ಚಂದ್ರಕಾಂತ ಕೆ.ಎನ್., ಭಜನಾ ತರಬೇತುದಾರರಾದ ವಿದುಷಿ ಉಷಾ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವ ಬ್ರಾಹ್ಮಣ ಪರಿಷತ್ತಿನ ಭಜನಾ ಮಂಡಳಿಯ ಪ್ರಮುಖರಾದ ಆಶಾರಾವ್, ದಿವ್ಯ ವಿಷ್ಣುಪ್ರಸಾದ್, ಪವಿತ್ರ ಸಹಕರಿಸಿದರು. ಸವಿತಾ ಶಶಿಧರ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಅಮಿತಾ ಕ್ರಮಧಾರಿ ವಂದನಾರ್ಪಣೆಗೈದರು.

0 ಕಾಮೆಂಟ್‌ಗಳು