ಕೊಡವೂರು ಸಮೀಪದ ಗರಡಿಮಜಲಿನಲ್ಲಿ ನೂತನ ಬಾವಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಮಣ್ಣು ಕುಸಿದು ಕಾರ್ಮಿಕನೊಬ್ಬ ಮಣ್ಣಿನಡಿ ಸಿಲುಕಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ. ಕೊಪ್ಪಳ ಮೂಲದ ರಮೇಶ್ ಮೃತ ಕಾರ್ಮಿಕ.
ಗರಡಿಮಜಲು ಸಮೀಪ ಬಾವಿ ನಿರ್ಮಾಣದ ಸಂದರ್ಭದಲ್ಲಿ ಏಕಾಏಕಿ ಮರಳು ಹಾಗೂ ಮಣ್ಣು ಕುಸಿದುಬಿದ್ದಿದ್ದು ಕಾಮಗಾರಿ ನಡೆಸುತ್ತಿದ್ದ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡು ಓರ್ವನನ್ನು ರಕ್ಷಿಸಲಾಗಿದೆ. ಮತ್ತೋರ್ವ ಕಾರ್ಮಿಕ ರಮೇಶ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಲ್ಪೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿಗಳ ಸಹಕಾರದೊಂದಿಗೆ ಮಣ್ಣು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ.
ಸುಮಾರು 7-8 ಅಡಿ ಆಳದ ಹೊಂಡದಲ್ಲಿ ಮಣ್ಣು ತುಂಬಿಕೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿದ್ದು, ಕಾರ್ಮಿಕನ ಶವ ಮೇಲಕ್ಕೆತ್ತಲು ಸಿಬ್ಬಂದಿಗಳು ಹರಸಾಹಸಪಡುತ್ತಿದ್ದಾರೆ.
ಸ್ಥಳದಲ್ಲಿ ಮಲ್ಪೆ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಶಾಸಕ ಭೇಟಿ
ಘಟನಾ ಸ್ಥಳಕ್ಕೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

0 ಕಾಮೆಂಟ್‌ಗಳು