ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು, ಟೆನ್ವಿಕ್ ಸ್ಪೋರ್ಟ್ಸ್ ಸಹಯೋಗದೊಂದಿಗೆ ತನ್ನ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಹೈ-ಪರ್ಫಾರ್ಮೆನ್ಸ್ ಸೆಂಟರ್‌ಗಳ ಮೊದಲ ಹಂತವನ್ನು ಲೋಕಾರ್ಪಣೆಗೊಳಿಸಿದೆ. ಈ ಮಹತ್ವದ ಸಹಯೋಗವು ದೇಶದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಅಂತರರಾಷ್ಟ್ರೀಯ ಮಟ್ಟದ ತರಬೇತಿ ನೀಡುವುದಲ್ಲದೆ, ಅವರ ಶೈಕ್ಷಣಿಕ ಭವಿಷ್ಯವನ್ನೂ ಭದ್ರಪಡಿಸಲಿದೆ.
ಈ ಸಹಯೋಗದ ಭಾಗವಾಗಿ ಮಾಹೆ ಮತ್ತು ಟೆನ್ವಿಕ್ ಸ್ಪೋರ್ಟ್ಸ್ ವಿಶೇಷ ಕೋರ್ಸ್‌ಗಳನ್ನು ಪರಿಚಯಿಸಿದೆ. ಅವುಗಳೆಂದರೆ,
ಕ್ರೀಡಾ ವ್ಯವಹಾರ (Business of Sports)
ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆ (Data Acquisition and Analytics)
ಕ್ರೀಡೆಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಮಷೀನ್ ಲರ್ನಿಂಗ್ (AI & ML in Sports)
ಈ ಕೋರ್ಸ್‌ಗಳು 'ಮಾಹೆ ಪ್ಲಸ್' ಪೋರ್ಟಲ್‌ನಲ್ಲಿ ಲಭ್ಯವಿರಲಿದ್ದು, ಆನ್‌ಲೈನ್, ನೇರ ತರಗತಿ ಹಾಗೂ ಅವೆರಡನ್ನು ಒಳಗೊಂಡ ಅಲ್ಪಾವಧಿ ಕೋರ್ಸ್ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳು ಇರಲಿವೆ. ತಜ್ಞ ಶಿಕ್ಷಕರಿಂದ ಉದ್ಯಮಕ್ಕೆ ಪೂರಕವಾದ ಕೌಶಲಗಳನ್ನು ಕಲಿಯಲು ಮತ್ತು ವೃತ್ತಿಜೀವನದ ಬೆಳವಣಿಗೆಗೆ ಸಹಕಾರಿಯಾಗುವ ಮಾನ್ಯತೆ ಪಡೆದ ಪ್ರಮಾಣಪತ್ರಗಳನ್ನು ಪಡೆಯಲು ಉತ್ತಮ ಅವಕಾಶ ಕಲ್ಪಿಸುತ್ತದೆ.
ಕ್ರೀಡಾ ಉದ್ಯಮದಲ್ಲಿ ಯಶಸ್ವಿ ವೃತ್ತಿಜೀವನ ರೂಪಿಸಿಕೊಳ್ಳಲು ಅಗತ್ಯವಿರುವ ಈ ಪಠ್ಯಕ್ರಮಗಳು ವಿದ್ಯಾರ್ಥಿಗಳಿಗೆ ಹಾಗೂ ವೃತ್ತಿಪರರಿಗೆ ಅಗತ್ಯವಾದ ಶೈಕ್ಷಣಿಕ ಪರಿಣತಿ ಮತ್ತು ಪ್ರಾಯೋಗಿಕ ಜ್ಞಾನವನ್ನು ನೀಡಲಿವೆ. ಮುಂಬರುವ ದಿನಗಳಲ್ಲಿ ಕ್ರೀಡಾ ತರಬೇತಿ, ಕ್ರೀಡಾ ವಿಜ್ಞಾನ ಮತ್ತು ಕ್ರೀಡಾ ಮಾಧ್ಯಮ ವಿಭಾಗಗಳಲ್ಲಿ ಹೆಚ್ಚಿನ ಕೋರ್ಸ್‌ಗಳನ್ನು ಆರಂಭಿಸಲು ಯೋಜಿಸಲಾಗಿದೆ.
ಕ್ರೀಡಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ, ಮಾಹೆ ಮತ್ತು ಟೆನ್ವಿಕ್ ಸ್ಪೋರ್ಟ್ಸ್ ಸಂಸ್ಥೆಗಳು ಮಣಿಪಾಲ ಮತ್ತು ಬೆಂಗಳೂರಿನ ಮಾಹೆ ಕ್ಯಾಂಪಸ್‌ಗಳಲ್ಲಿ 'ಹೈ-ಪರ್ಫಾರ್ಮೆನ್ಸ್ ಸೆಂಟರ್'ಗಳನ್ನು ಸ್ಥಾಪಿಸಲಿವೆ. ಈ ಕೇಂದ್ರಗಳು ಕ್ರೀಡಾಪಟುಗಳಿಗೆ ವಿಶ್ವದರ್ಜೆಯ ತರಬೇತಿ, ಕ್ರೀಡಾ ನೆರವು ಮತ್ತು ವಸತಿ ಸಹಿತ ತರಬೇತಿ ಸೌಲಭ್ಯಗಳನ್ನು ಒದಗಿಸಲಿವೆ. ಇದರ ಜತೆಗೆ, ಕ್ರೀಡಾಪಟುಗಳು ಕ್ಯಾಂಪಸ್‌ನಲ್ಲಿರುವ ಸಂಯೋಜಿತ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಮೂಲಕ ಶೈಕ್ಷಣಿಕ ವ್ಯಾಸಂಗ ಮುಂದುವರಿಸಲು ಈ ಯೋಜನೆ ಅವಕಾಶ ಕಲ್ಪಿಸಲಿದೆ.
ಈ ಕೇಂದ್ರಗಳು ಆರಂಭಿಕ ಹಂತದಲ್ಲಿ ನಾಲ್ಕು ಕ್ರೀಡೆಗಳಿಗೆ ಸಂಬಂಧಿಸಿ ತರಬೇತಿ ನೀಡಲಿದ್ದು, ನಂತರದಲ್ಲಿ ಸುಮಾರು ಹನ್ನೆರಡು ಕ್ರೀಡೆಗಳಿಗೆ ಸಂಬಂಧಿಸಿದ ತರಬೇತಿ ನೀಡುವ ಯೋಜನೆ ಇದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಸಾಧಿಸುವ ಸಾಮರ್ಥ್ಯ ಮತ್ತು ವೃತ್ತಿಪರ ಲೀಗ್‌ಗಳ ಲಭ್ಯತೆಯನ್ನು ಆಧರಿಸಿ ಮಾಹೆ ಹಾಗೂ ಟೆನ್ವಿಕ್ ಸ್ಪೋರ್ಟ್ಸ್ ಈ ಕ್ರೀಡೆಗಳನ್ನು ಆಯ್ದುಕೊಂಡಿವೆ.
ಕ್ರೀಡಾ ಕ್ಷೇತ್ರದ ತಜ್ಞರಾದ ವಿನಯ್ ಬದಾಮಿ, ಅಪರ್ಣಾ ಪೋಪಟ್, ದೀಪ್ತಿ ಬೋಪಯ್ಯ, ಹೇಮಂತ್ ಬುಚ್, ಸಿದ್ದಾರ್ಥ್ ರಾಮನ್ ಮತ್ತು ಸಿಕೆಎಂ ಧನಂಜಯ್ ಅವರು ಅತಿಥಿ ಉಪನ್ಯಾಸಕರಾಗಿ ಈ ಭಾಗವಹಿಸಲಿದ್ದಾರೆ. ಪರಿಣತರ ಅನುಭವವು ಕ್ರೀಡಾ ಕ್ಷೇತ್ರದ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಲಿದೆ.
ಮುಂದಿನ ದಿನಗಳಲ್ಲಿ ಮಾಹೆ ಮತ್ತು ಟೆನ್ವಿಕ್ ಸ್ಪೋರ್ಟ್ಸ್ ಸಂಸ್ಥೆಗಳು ಈ ಕೋರ್ಸ್‌ಗಳನ್ನು ಪೂರ್ಣ ಪ್ರಮಾಣದ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಾಗಿ ರೂಪಿಸಲಿವೆ. ಜಾಗತಿಕ ಕ್ರೀಡಾ ಶಕ್ತಿಯಾಗಿ ಹೊರಹೊಮ್ಮುವ ಭಾರತದ ಮಹತ್ವಾಕಾಂಕ್ಷೆಗೆ ಪೂರಕವಾಗಿ, ಸುಸ್ಥಿರ ಪ್ರತಿಭೆಗಳ ಪಡೆಯನ್ನು ಸೃಷ್ಟಿಸುವುದು ಈ ಯೋಜನೆಯ ಮುಂದಿನ ಗುರಿಯಾಗಿದೆ
ಈ ಯೋಜನೆಯ ಪ್ರಮುಖ ಗುರಿಗಳು:
ಅತ್ಯುತ್ತಮ ಕೌಶಲ ಹೊಂದಿದ ಕ್ರೀಡಾ ವೃತ್ತಿಪರರನ್ನು ರೂಪುಗೊಳಿಸುವುದು.
ಕ್ರೀಡೆ ಮತ್ತು ಆಧುನಿಕ ತಂತ್ರಜ್ಞಾನದ ನಡುವಿನ ಸಂಬಂಧದ ಬಲವರ್ಧನೆ.
ಕ್ರೀಡಾ ಉದ್ಯಮದಲ್ಲಿ ಉದ್ಯೋಗಾವಕಾಶಗಳ ಸುಸ್ಥಿರ ಮಾರ್ಗಗಳ ನಿರ್ಮಾಣ.
ಮಾಹೆ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು ಮಾತನಾಡಿ, ‘ಟೆನ್ವಿಕ್ ಜತೆಗಿನ ಈ ಸಹಯೋಗವು ಉನ್ನತ ಶಿಕ್ಷಣದಲ್ಲಿ ನಾವೀನ್ಯತೆ ಮತ್ತು ಶ್ರೇಷ್ಠತೆಯಲ್ಲಿ ನಮಗಿರುವ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಮೈದಾನದಲ್ಲಿ ಮಾತ್ರವಲ್ಲದೆ, ಭಾರತದಾದ್ಯಂತ ಕ್ರೀಡಾ ವ್ಯವಸ್ಥೆಯಲ್ಲಿ ಮುಂದಿನ ಪೀಳಿಗೆಯ ವೃತ್ತಿಪರರನ್ನು ಸಜ್ಜುಗೊಳಿಸುವ ಮೂಲಕ, ನಾವು ಸದೃಢ ರಾಷ್ಟ್ರ ಮತ್ತು ಬಲಿಷ್ಠ ಕ್ರೀಡಾ ಸಂಸ್ಕೃತಿಯ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದ್ದೇವೆʼ ಎಂದು ಹೇಳಿದರು.
ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್ ಅವರು ಮಾತನಾಡಿ, 'ಕ್ರೀಡಾಪಟುಗಳ ಕಠಿಣ ಶ್ರಮವನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ವಿಶ್ವದರ್ಜೆಯ ತರಬೇತಿಯ ಜತೆಗೆ ಪೂರಕವಾದ ಶೈಕ್ಷಣಿಕ ವಾತಾವರಣವನ್ನು ನಾವು ಕಲ್ಪಿಸುತ್ತಿದ್ದೇವೆ. ಈ ಯೋಜನೆಯು ಕ್ರೀಡಾಪಟುಗಳ ಕ್ರೀಡಾ ಬದುಕಿನ ನಂತರದ ಜೀವನಕ್ಕೂ ಸುಸ್ಥಿರ ಭದ್ರತೆ ನೀಡಲಿದೆ. ಈ ಮೂಲಕ ಪ್ರತಿಭೆಗಳ ವಿಕಸನಕ್ಕೆ ಹೊಸ ಆಯಾಮ ನೀಡಲಾಗುತ್ತಿದ್ದು, ಇದು ಅಥ್ಲೀಟ್‌ಗಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಲಿದೆ' ಎಂದರು.
ಮಾಹೆಯ ಸಹ-ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ಕೆ. ರಾವ್ ಅವರು ಮಾತನಾಡಿ, ‘ಮಾಹೆ–ಟೆನ್ವಿಕ್ ಪಾಲುದಾರಿಕೆಯು ಶಿಕ್ಷಣ, ಸಾಮರ್ಥ್ಯ ಮತ್ತು ಗುರಿಯನ್ನು ಒಗ್ಗೂಡಿಸುತ್ತದೆ. ಉನ್ನತ ಕ್ರೀಡಾ ವಾತಾವರಣದ ಜತೆಗೆ ಈಗಿನ ಕಾಲಕ್ಕೆ ಹೊಂದಿಕೊಳ್ಳುವ ಕಲಿಕೆಯ ಮೂಲಕ, ಕ್ರೀಡಾಪಟುಗಳು ಸ್ಪರ್ಧಾತ್ಮಕ ಕ್ರೀಡಾ ಜೀವನದ ಆಚೆಗೂ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಅವಕಾಶಗಳನ್ನು ಒದಗಿಸುತ್ತಿದ್ದೇವೆ. ಇದರೊಂದಿಗೆ ಭಾರತದಲ್ಲಿ ಕ್ರೀಡಾ ಕ್ಷೇತ್ರವನ್ನು ಹೆಚ್ಚು ವೃತ್ತಿಪರವಾಗಿ ಮತ್ತು ಸುಸಜ್ಜಿತವಾಗಿ ಬೆಳೆಸಲು ಕೊಡುಗೆ ನೀಡುತ್ತಿದ್ದೇವೆʼ ಎಂದು ತಿಳಿಸಿದರು.
ಟೆನ್ವಿಕ್ ಸ್ಪೋರ್ಟ್ಸ್‌ನ ಸಹ-ಸಂಸ್ಥಾಪಕ ಅನಿಲ್ ಕುಂಬ್ಳೆ ಮಾತನಾಡಿ, ‘ಭಾರತೀಯ ಕ್ರೀಡಾ ಇತಿಹಾಸದಲ್ಲಿ ಇದೊಂದು ಸ್ಮರಣೀಯ ದಿನ. ಕ್ರೀಡಾ ಉದ್ಯಮದ ಗಂಭೀರ ಸವಾಲೊಂದಕ್ಕೆ ನಾವು ಪರಿಹಾರ ಕಂಡುಕೊಳ್ಳುತ್ತಿದ್ದೇವೆ. ವೃತ್ತಿಪರ ಲೀಗ್‌ಗಳು, ಕ್ರೀಡಾ ಸ್ಟಾರ್ಟ್‌ಅಪ್‌ಗಳು ಮತ್ತು ನುರಿತ ತರಬೇತುದಾರರ ಬೇಡಿಕೆ ಹೆಚ್ಚುತ್ತಿದ್ದರೂ, ಭಾರತದ ಕ್ರೀಡಾ ವ್ಯವಸ್ಥೆಯು ಸಮರ್ಥ ಮತ್ತು ಉದ್ಯಮಕ್ಕೆ ಸಜ್ಜಾದ ವೃತ್ತಿಪರರ ತೀವ್ರ ಕೊರತೆ ಎದುರಿಸುತ್ತಿದೆ. ಟೆನ್ವಿಕ್-ಮಾಹೆ ಕಾರ್ಯಕ್ರಮಗಳು ಈ ಕೌಶಲದ ಕೊರತೆಯನ್ನು ನೀಗಿಸಲಿವೆ. ಈ ದೀರ್ಘಕಾಲೀನ ಪ್ರತಿಭೆಗಳ ಪೂರೈಕೆಯು ಮುಂದಿನ ದಶಕಗಳಲ್ಲಿ ಭಾರತದ ಕ್ರೀಡಾ ಬೆಳವಣಿಗೆಗೆ ಸುಸ್ಥಿರ ಶಕ್ತಿಯನ್ನು ತುಂಬಲಿದೆ. 2010ರಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಾವು ಕಂಡಿದ್ದ ಕನಸು ಇಂದು ಸಾಕಾರಗೊಳ್ಳುತ್ತಿದೆʼ ಎಂದು ಸಂತಸ ವ್ಯಕ್ತಪಡಿಸಿದರು.
ಟೆನ್ವಿಕ್ ಸ್ಪೋರ್ಟ್ಸ್ ಸಹ-ಸಂಸ್ಥಾಪಕ ಹಾಗೂ ಸಿಇಒ ವಸಂತ್ ಭಾರದ್ವಾಜ್ ಅವರು ಮಾತನಾಡಿ, 'ಭಾರತದ ಕ್ರೀಡಾ ಕ್ಷೇತ್ರದಲ್ಲಿ ಉದ್ಯೋಗಾರ್ಹ ವೃತ್ತಿಪರರ ತೀವ್ರ ಕೊರತೆಯಿದೆ. ಈ ಕೊರತೆಯನ್ನು ನೀಗಿಸಲು ಮಾಹೆ ಮತ್ತು ಟೆನ್ವಿಕ್ ಜಂಟಿಯಾಗಿ ಈ ವಿಶೇಷ ಶೈಕ್ಷಣಿಕ ಪಥವನ್ನು ರೂಪಿಸಿವೆ. 2010ರಲ್ಲಿ ನಾವು ಕಂಡಿದ್ದ ಕನಸಿನಂತೆ, ಕ್ರೀಡಾ ಶಿಕ್ಷಣದ ಮೂಲಕ ಕ್ರಾಂತಿಕಾರಿ ಬದಲಾವಣೆ ತರುವ ಪ್ರಯತ್ನಕ್ಕೆ ಇಂದು ಚಾಲನೆ ದೊರೆತಿದೆ. ಇದು ಮುಂಬರುವ ದಿನಗಳಲ್ಲಿ ಭಾರತವನ್ನು ಜಾಗತಿಕ ಕ್ರೀಡಾ ಶಕ್ತಿಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ' ಎಂದರು.
ಮಾಹೆ ಮತ್ತು ಟೆನ್ವಿಕ್ ಸ್ಪೋರ್ಟ್ಸ್ ನಡುವಿನ ಈ ಸಹಯೋಗವು ಶೈಕ್ಷಣಿಕ ಜಗತ್ತು, ಕ್ರೀಡಾಪಟುಗಳ ಅಭಿವೃದ್ಧಿ ಮತ್ತು ಕ್ರೀಡಾ ಉದ್ಯಮದ ಅಗತ್ಯತೆಗಳನ್ನು ಬೆಸೆಯುವ ಒಂದು ಅದ್ವಿತೀಯ ಪ್ರಯತ್ನವಾಗಿದೆ. ಮುಂದಿನ ಪೀಳಿಗೆಯ ಕ್ರೀಡಾ ವೃತ್ತಿಪರರನ್ನು ರೂಪಿಸುವುದು ಹಾಗೂ ಭಾರತದ ಕ್ರೀಡಾ ಭೂಪಟದ ಪ್ರಗತಿಗೆ ಮಹತ್ವದ ಕೊಡುಗೆ ನೀಡುವುದು ಈ ಪಾಲುದಾರಿಕೆಯ ಮುಖ್ಯ ಉದ್ದೇಶವಾಗಿದೆ.

0 ಕಾಮೆಂಟ್‌ಗಳು