ಉಡುಪಿ: ವಿದೇಶದಲ್ಲಿ ಹೌಸ್ ಕೀಪಿಂಗ್ ಸೂಪರ್ವೈಸರ್ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ

ಉಡುಪಿ: ವಿದೇಶದಲ್ಲಿ ಹೌಸ್ ಕೀಪಿಂಗ್ ಸೂಪರ್ವೈಸರ್ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನಿಟ್ಟೂರಿನ ವ್ಯಕ್ತಿಯೊಬ್ಬರಿಂದ ಹಂತ ಹಂತವಾಗಿ ಲಕ್ಷಾಂತರ ರೂ. ಹಣ ಹಾಗೂ ಪಾಸ್ಪೋರ್ಟ್ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ನಿಟ್ಟೂರಿನ ಎನ್. ಆರ್. ಪದ್ಮನಾಭ ಉಪಾಧ್ಯ ವಂಚನೆಗೊಳಗಾದವರು. ಆಶ್ಲೆ ಕರ್ನೇಲಿಯೋ, ಸವಿತಾ, ಪ್ರಕೃತಿ ಹಾಗೂ ಪ್ರಶಾಂತ್ ಎಂಬುವರೇ ವಂಚನೆ ಎಸಗಿದ ಆರೋಪಿಗಳು. 

ಉದ್ಯೋಗ ಹುಡುಕುತ್ತಿದ್ದ ಪದ್ಮನಾಭ ಉಪಾಧ್ಯ ಅವರನ್ನು 2025ರ ಫೆಬ್ರವರಿ 12ರಂದು ಸಂಪರ್ಕಿಸಿದ್ದ ಮೊದಲ ಆರೋಪಿ ಆಶ್ಲೆ ಕರ್ನೇಲಿಯೋ, ಯುನೈಟೆಡ್ ಕಿಂಗ್ಡಮ್ (ಯು.ಕೆ.) ದೇಶದಲ್ಲಿ ಹೌಸ್ ಕೀಪಿಂಗ್ ಸೂಪರ್ವೈಸರ್ ಕೆಲಸ ಕೊಡಿಸುವುದಾಗಿ ನಂಬಿಸಿದ್ದಳು. ಬಳಿಕ ತನ್ನ ಸಹಾಯಕಿ ಸವಿತಾ ಎಂಬಾಕೆಯ ಮೊಬೈಲ್ ಸಂಖ್ಯೆ ನೀಡಿದ್ದಳು. ವೀಸಾ ಪ್ರಕ್ರಿಯೆಗಾಗಿ 2 ಲಕ್ಷ ರೂ. ಪ್ರೊಸೆಸಿಂಗ್ ಶುಲ್ಕ ಪಾವತಿಸುವಂತೆ ಸವಿತಾ ತಿಳಿಸಿದ ಹಿನ್ನೆಲೆಯಲ್ಲಿ, ಪದ್ಮನಾಭ ಅವರು 2025ರ ಮಾರ್ಚ್ 19ರಂದು ಆಕೆಯ ಬ್ಯಾಂಕ್ ಆಫ್ ಬರೋಡ ಖಾತೆಗೆ ಹಣ ಜಮಾ ಮಾಡಿದ್ದರು.

ನಂತರ ಆರೋಪಿಗಳಾದ ಪ್ರಕೃತಿ ಮತ್ತು ಪ್ರಶಾಂತ್ ಎಂಬುವರು ಕೈಜೋಡಿಸಿ ಮೆಡಿಕಲ್ ಪರೀಕ್ಷೆ, ವೀಸಾ ಸ್ಟಾಂಪಿಂಗ್ ಹಾಗೂ ಎಂಬೆಸಿ ಪ್ರೊಸೆಸಿಂಗ್ ಹೆಸರಿನಲ್ಲಿ ಪದ್ಮನಾಭ ಅವರಿಂದ ಹಂತ ಹಂತವಾಗಿ ಒಟ್ಟು 6,23,000 ರೂ. ನಗದು ಹಾಗೂ ಪಾಸ್ಪೋರ್ಟ್ ಪಡೆದುಕೊಂಡಿದ್ದರು. ಕೆಲ ದಿನಗಳ ನಂತರ "ನಿಮ್ಮ ವೀಸಾ ತಿರಸತಗೊಂಡಿದೆ ಎಂದು ಹೇಳಿದ ಆರೋಪಿಗಳು, ಹಣ ಮತ್ತು ಪಾಸ್ಪೋರ್ಟ್ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಸದ್ಯ ನ್ಯಾಯಾಲಯದ ನಿರ್ದೇಶನದ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು