ಗಂಡಾಂತರಕಾರಿ ದ್ವಿಭಾಷಾ ಮಾಧ್ಯಮ

"ಕರ್ನಾಟಕ ಸರಕಾರ ಒಂದರಿಂದ ಹತ್ತನೆಯ ತರಗತಿವರೆಗೆ ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸದೆ,ರಾಜ್ಯದ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಕಡ್ಡಾಯ ಉದ್ಯೋಗಾವಕಾಶಗಳನ್ನು ಕಲ್ಪಿಸದೆ ಕನ್ನಡ ಜನತೆಯನ್ನು ವಂಚಿಸುತ್ತಿದೆ.ಅದಕ್ಕೂ ಮಿಗಿಲಾಗಿ ಒಂದನೆಯ ತರಗತಿಯಿಂದಲೇ ದ್ವಿಭಾಷಾ ಮಾಧ್ಯಮ ಬೋಧನೆಯನ್ನು ಜಾರಿಗೆ ತರುತ್ತಿರುವುದು ಭಾಷಿಕ ಪಾರ‌ಮ್ಯ ಮತ್ತು ಮಕ್ಕಳಲ್ಲಿ ಭಾಷಾಕೌಶಲಗಳ ಪ್ರಭುತ್ವದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಹೆಜ್ಜೆ.ಎರಡೂ ಭಾಷೆಗಳಲ್ಲಿ ಸಮಾನ ಪ್ರಭುತ್ವದಿಂದ ಬೋಧನೆ ಮಾಡುವುದು ಮತ್ತು ಎರಡೂ ಭಾಷೆಗಳಲ್ಲಿ ಗ್ರಹಿಕೆ ಮತ್ತು ಅಭಿವ್ಯಕ್ತಿಯ ಮೇಲೆ ಹಿಡಿತ ಸಾಧಿಸುವುದು ನಿಜಕ್ಕೂ ಬಲು ದೊಡ್ಡ ಸವಾಲು" ಎಂದು ಡಾ ಮಹಾಬಲೇಶ್ವರ ರಾವ್ ಈಚೆಗೆ ಅಭಿಪ್ರಾಯ ಪಟ್ಟರು.ಅವರು ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನ ಮೂರನೆಯ ಸೆಮಿಸ್ಟರ್ ನ ಕನ್ನಡ ಬೋಧನವಿಧಾನ ಶಾಸ್ತ್ರದ ವಿದ್ಯಾರ್ಥಿಗಳು ನಡೆಸಿಕೊಟ್ಟ ' ಕನ್ನಡ ಕಲರವ' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಈ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಬೆಳೆದು ಬಂದ ಹಾದಿ ,ಕನ್ನಡ ಮಾಧ್ಯಮ ಶಾಲೆಗಳ ಹಿನ್ನಡೆ ಎಂಬ ವಿಷಯಗಳನ್ನು ಕುರಿತು ರಾಧಿಕಾ.ಎನ್ ಮತ್ತು ಧನುಷಾ ದೀಪಕ್ ಪೂಜಾರಿ ಪ್ರಬಂಧ ಮಂಡನೆ ಮಾಡಿದರು. ಭಾಷಾ ಕೌಶಲಗಳು - ಸಮಸ್ಯೆಗಳು ಮತ್ತು ನಮ್ಮ ಶಾಲೆ ನಮ್ಮ ಹೆಮ್ಮೆ ಎಂಬ ಎರಡು ಕಿರು ನಾಟಕಗಳನ್ನು ಸೌಜನ್ಯ,ಅನಂತರಾಜ್ .ಮತ್ತು ಸಂಗಡಿಗರು ನಡೆಸಿಕೊಟ್ಟರು. ನುಡಿ ಜಾಣ ಮತ್ತು ಸಮೂಹಗೀತೆಯನ್ನು ನಿರುಪಮಾ, ಪವನ ಮತ್ತು ಸಂಗಡಿಗರು ನಿರ್ವಹಿಸಿದರು. ಪೂರ್ಣಿಮಾ ಸ್ವಾಗತಿಸಿದರೆ ಸೌಜನ್ಯ ಧನ್ಯವಾದ ಸಲ್ಲಿಸಿದರು. ಪ್ರೀತಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು