ಮಾಹೆ ಹಾಗೂ ಧ್ರುವ ಸ್ಪೇಸ್ ನಡುವೆ ಒಪ್ಪಂದ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆ ಮತ್ತು ‘ಧ್ರುವ ಸ್ಪೇಸ್‌’ ಮಣಿಪಾಲದ ಮಾಹೆ ಕ್ಯಾಂಪಸ್‌ನಲ್ಲಿ ಜಂಟಿಯಾಗಿ 'ಅಸೆಂಟ್' (ASCENT - Advanced Space Capability, Engineering & New-space Technologies) ಕೇಂದ್ರ ಅಭಿವೃದ್ಧಿ ಪಡಿಸುವ ಒಪ್ಪಂದಕ್ಕೆ ಸಹಿ ಹಾಕಿವೆ. 

ಭಾರತದ ವಾಣಿಜ್ಯ ಬಾಹ್ಯಾಕಾಶ ವ್ಯವಸ್ಥೆಯು ವಿಸ್ತಾರಗೊಳ್ಳುತ್ತಿರುವಂತೆ, ನುರಿತ ಪ್ರತಿಭೆಗಳ ಬೇಡಿಕೆ ಹೆಚ್ಚಾಗುತ್ತಿದೆ. ಹಾಗಾಗಿ ಶೈಕ್ಷಣಿಕ ಸಂಶೋಧನೆ, ಕೈಗಾರಿಕಾ ಪರಿಣತಿ ಮತ್ತು ಪ್ರಾಯೋಗಿಕ ಇಂಜಿನಿಯರಿಂಗ್ ಅನ್ನು ಒಂದೇ ವೇದಿಕೆಯಡಿ ತರುವ ಮೂಲಕ ಈ ಅಂತರವನ್ನು ಕಡಿಮೆ ಮಾಡಲು 'ಅಸೆಂಟ್' ಕೇಂದ್ರವನ್ನು ಸ್ಥಾಪಿಸಲಾಗಿದೆ. ಬಾಹ್ಯಾಕಾಶ ಇಂಜಿನಿಯರಿಂಗ್, ಆನ್ವಯಿಕ ಸಂಶೋಧನೆ ಮತ್ತು ಮಿಷನ್ ಅಭಿವೃದ್ಧಿಗೆ ಇದು ಉತ್ತೇಜನ ನೀಡಲಿದೆ. ಬಾಹ್ಯಾಕಾಶ ನೌಕೆಗಳ ವಿನ್ಯಾಸ, ಜೋಡಣೆ ಹಾಗೂ ಪರೀಕ್ಷೆಗಳಿಗಾಗಿ ಕ್ಲಾಸ್ 10,000 ಕ್ಲೀನ್‌ರೂಮ್, ಹೆಲ್ಮ್‌ಹೋಲ್ಟ್ಜ್ ಕೇಜ್ ಮತ್ತು ಏರ್-ಬೇರಿಂಗ್ ಟೇಬಲ್‌ನಂತಹ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಈ ಕೇಂದ್ರ ಒಳಗೊಂಡಿರಲಿದೆ. 

2026ರ ಅಂತ್ಯದ ವೇಳೆಗೆ ಉದ್ಘಾಟನೆಗೊಳ್ಳುವ ನಿರೀಕ್ಷೆಯಿರುವ ಈ ಕೇಂದ್ರವು, ವಿದ್ಯಾರ್ಥಿ-ನೇತೃತ್ವದ ಉಪಗ್ರಹ ಮತ್ತು ಪೇಲೋಡ್ ಮಿಷನ್‌ಗಳಿಗೆ ಬೆಂಬಲ ನೀಡಲಿದೆ. ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ನೌಕೆಯ ವಿನ್ಯಾಸ, ಜೋಡಣೆ, ಪರೀಕ್ಷೆ, ಉಡಾವಣಾ ಸಿದ್ಧತೆ ಮತ್ತು ಕಕ್ಷೆಯ ಕಾರ್ಯಾಚರಣೆಗಳ ಸಮಗ್ರ ಅನುಭವವನ್ನು ಒದಗಿಸಲಿದೆ. ಶೈಕ್ಷಣಿಕ ಕಲಿಕೆಯನ್ನು ನೈಜ ಇಂಜಿನಿಯರಿಂಗ್ ಕಾರ್ಯಕ್ರಮಗಳೊಂದಿಗೆ ಬೆಸೆಯುವ ಮೂಲಕ ವಾಣಿಜ್ಯ ಹಾಗೂ ರಾಷ್ಟ್ರೀಯ ಪ್ರಾಮುಖ್ಯದ ತಂತ್ರಜ್ಞಾನಗಳ ಅಭಿವೃದ್ಧಿಗೆ ಈ ಕೇಂದ್ರ ಬೆಂಬಲ ನೀಡಲಿದೆ. 

ಬಾಹ್ಯಾಕಾಶ-ಆಧಾರಿತ ಐಒಟಿ ಮತ್ತು ಮೈಕ್ರೋಗ್ರಾವಿಟಿ ಸಂಶೋಧನೆಯಂತಹ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಿರುವ 'ಅಸೆಂಟ್' ಕೇಂದ್ರವು 2028ರ ವೇಳೆಗೆ ಕನಿಷ್ಠ ಮೂರು 1U-6U ಕ್ಯೂಬ್‌ಸ್ಯಾಟ್ ಮಿಷನ್‌ಗಳ ಅಭಿವೃದ್ಧಿ ಮತ್ತು ಕಾರ್ಯಾಚರಣೆ, 2030ರ ವೇಳೆಗೆ ಫೆಮ್ಟೋ ಉಪಗ್ರಹಗಳ ಸಮೂಹ, ಸಂಪೂರ್ಣ ಕಾರ್ಯನಿರತ ಬಾಹ್ಯಾಕಾಶ ಪರಿಸ್ಥಿತಿ ಅರಿವು (ಎಸ್‌ಎಸ್‌ಎ) ಕೇಂದ್ರ ಮತ್ತು ಸ್ವದೇಶಿ ಉಪಗ್ರಹ ಪ್ಲಾಟ್‌ಫಾರ್ಮ್‌ಗಳ ನಿಯೋಜನೆ ಹಾಗೂ 2035ರ ವೇಳೆಗೆ ಡೀಪ್-ಸ್ಪೇಸ್ ಅನ್ವೇಷಣೆಗೆ ಕೊಡುಗೆ ನೀಡಬಲ್ಲ ಕನಿಷ್ಠ ಒಂದು ಅಂತರಗ್ರಹ ತಂತ್ರಜ್ಞಾನ ಪ್ರದರ್ಶನ ಮಿಷನ್ ಕೈಗೊಳ್ಳುವ ಗುರಿಗಳನ್ನು ಹೊಂದಿದೆ. 

ಮಾಹೆಯ ಕುಲಪತಿಗಳಾದ ಡಾ ಶರತ್‌ ಕೆ. ರಾವ್‌ ಅವರು ಮಾತನಾಡಿ, “ಬಾಹ್ಯಾಕಾಶ ವಲಯವು ಗಮನಾರ್ಹ ಪರಿವರ್ತನೆಗೆ ಸಾಕ್ಷಿಯಾಗುತ್ತಿದ್ದು, ನಾವೀನ್ಯ, ಸಹಯೋಗ ಹಾಗೂ ಪ್ರತಿಭೆಗಳ ಬೆಳವಣಿಗೆಗೆ ಹೊಸ ಅವಕಾಶಗಳನ್ನು ತೆರೆಯುತ್ತಿದೆ. ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಾಗಿ, ಈ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುವ ಪ್ರಮುಖ ಜವಾಬ್ದಾರಿ ನಮ್ಮ ಮೇಲಿದೆ. ಪ್ರತಿಭೆಗಳನ್ನು ಪೋಷಿಸಲು, ಜ್ಞಾನವನ್ನು ವಿಸ್ತರಿಸಲು ಮತ್ತು ಭಾರತದ ಬೆಳೆಯುತ್ತಿರುವ ಬಾಹ್ಯಾಕಾಶ ವ್ಯವಸ್ಥೆಗೆ ಕೊಡುಗೆ ನೀಡುವ ನಮ್ಮ ಬದ್ಧತೆಗೆ ಅಸೆಂಟ್ ಸಾಕ್ಷಿಯಾಗಿದೆ. ಧ್ರುವ ಸ್ಪೇಸ್ ಜತೆಗಿನ ಪಾಲುದಾರಿಕೆಯ ಮೂಲಕ, ನಮ್ಮ ವಿದ್ಯಾರ್ಥಿಗಳಿಗೆ ನೈಜ ಉಪಗ್ರಹ ಮಿಷನ್‌ಗಳಲ್ಲಿ ಕೆಲಸ ಮಾಡುವ ಮತ್ತು ಕೈಗಾರಿಕಾ ಗುಣಮಟ್ಟದ ಮೂಲಸೌಕರ್ಯಗಳೊಂದಿಗೆ ಪ್ರಾಯೋಗಿಕ ಅನುಭವ ಪಡೆಯುವ ಅಪೂರ್ವ ಅವಕಾಶ ದೊರೆಯಲಿದೆ” ಎಂದು ಹೇಳಿದರು. 

ಎಂಐಟಿ ಮಣಿಪಾಲ ಪ್ರಭಾರ ನಿರ್ದೇಶಕಿ ಪ್ರೊ. ಚಂದ್ರಕಲಾ ಸಿ. ಬಿ. ಅವರು ಮಾತನಾಡಿ, “ಈ ಶೈಕ್ಷಣಿಕ-ಕೈಗಾರಿಕಾ ಸಹಯೋಗದ ಮೂಲಕ, ಭಾರತದ ಬಾಹ್ಯಾಕಾಶ ವಲಯದ ಬೆಳವಣಿಗೆಗೆ ಪೂರಕವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಉದ್ಯಮ ಪಾಲುದಾರರಿಗೆ ಅಧಿಕಾರ ನೀಡುವ ಅತ್ಯುತ್ತಮ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಉದ್ದೇಶ ಹೊಂದಿದ್ದೇವೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಎಂಐಟಿ ಸ್ಪೇಸ್ ಪ್ರೋಗ್ರಾಮ್ಸ್ ಸಂಯೋಜಕ ಡಾ. ಬಲ್‌ಬೀರ್ ಸಿಂಗ್ ಅವರು ಮಾತನಾಡಿ, “ಅಸೆಂಟ್‌, ಬಾಹ್ಯಾಕಾಶ ಮಿಷನ್‌ಗಳ ಆರಂಭದಿಂದ ಅಂತ್ಯದವರೆಗಿನ ಸುಧಾರಿತ ಸಂಶೋಧನೆ ಮತ್ತು ಪ್ರಾಯೋಗಿಕ ಕಲಿಕೆಯನ್ನು ಒದಗಿಸುವ ಬಹುಶಿಸ್ತೀಯ ಕೇಂದ್ರವಾಗಲಿದೆ. ಸ್ವಾಯತ್ತ ಬಾಹ್ಯಾಕಾಶ ಕಾರ್ಯಾಚರಣೆಗಳಿಗಾಗಿ ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ಅಳವಡಿಸಿಕೊಂಡು, ಸ್ಪೇಸ್ ಐಒಟಿಯಂತಹ ತಂತ್ರಜ್ಞಾನಗಳಲ್ಲಿ ಇದು ನಾವೀನ್ಯ ತರಲಿದೆ. ಮೈಕ್ರೋಗ್ರಾವಿಟಿ ಸಂಶೋಧನೆ ಮತ್ತು ವಿವಿಧ ಸಹಯೋಗಗಳ ಮೂಲಕ ಭಾರತದ 'ನ್ಯೂಸ್ಪೇಸ್' ವ್ಯವಸ್ಥೆಯನ್ನು ಅಸೆಂಟ್ ಬಲಪಡಿಸಲಿದೆ” ಎಂದರು. 

ಧ್ರುವ ಸ್ಪೇಸ್‌ನ ಸಹ-ಸಂಸ್ಥಾಪಕ ಮತ್ತಿ ಸಿಒಒ ಕೃಷ್ಣತೇಜ ಪೆನಮಕೂರು ಅವರು ಮಾತನಾಡಿ, “ತಂತ್ರಜ್ಞಾನದ ಜತೆಗೆ, ದೀರ್ಘಾವಧಿಯ ಬೆಳವಣಿಗೆಯನ್ನು ಕಾಯ್ದುಕೊಳ್ಳಲು ಸಂಶೋಧನಾ ಮೂಲಸೌಕರ್ಯ, ಪ್ರತಿಭೆ ಮತ್ತು ಉದ್ಯಮ-ಶೈಕ್ಷಣಿಕ ಪಾಲುದಾರಿಕೆಯ ಅಗತ್ಯವಿದೆ. ಅಸೆಂಟ್‌ ಮೂಲಕ ನಾವು ‘ಸೆಂಟರ್ ಆಫ್ ಎಕ್ಸಲೆನ್ಸ್’ ಅನ್ನು ಸ್ಥಾಪಿಸುತ್ತಿದ್ದು, ಇಲ್ಲಿ ಆಲೋಚನೆಗಳು ಉದ್ಯಮದ ಸಹಯೋಗದೊಂದಿಗೆ ಸಂಶೋಧನೆಯ ಹಂತದಿಂದ ‘ಮಿಷನ್‌-ರೆಡಿ’ ಪರಿಹಾರಗಳಾಗಿ ರೂಪುಗೊಳ್ಳಲಿವೆ. ಭಾರತದ ಮುಂದಿನ ಪೀಳಿಗೆಯ ಬಾಹ್ಯಾಕಾಶ ತಂತ್ರಜ್ಞಾನಗಳು ಹಾಗೂ ನಾವೀನ್ಯಗಳನ್ನು ರೂಪಿಸುವಲ್ಲಿ ಈ ಪಾಲುದಾರಿಕೆ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ” ಎಂದು ತಿಳಿಸಿದರು. 

ಮಾಹೆಯ ಬಹುಶಿಸ್ತೀಯ ಶೈಕ್ಷಣಿಕ ಶಕ್ತಿ ಹಾಗೂ 'ಧ್ರುವ ಸ್ಪೇಸ್'ನ ಸಂಪೂರ್ಣ ಬಾಹ್ಯಾಕಾಶ ಇಂಜಿನಿಯರಿಂಗ್ ಪರಿಣತಿಯನ್ನು ಬೆಸೆಯುವ ಮೂಲಕ, 'ಅಸೆಂಟ್' ಕೇಂದ್ರವು ದೇಶೀಯ ಬಾಹ್ಯಾಕಾಶ ತಂತ್ರಜ್ಞಾನಗಳ ಪ್ರಗತಿಗೆ ಭದ್ರ ಬುನಾದಿ ಹಾಕಲಿದೆ.  

 

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕುರಿತು:  

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯಾಗಿದೆ. ಆರೋಗ್ಯ ವಿಜ್ಞಾನ, ನಿರ್ವಹಣೆ, ಕಾನೂನು, ಮಾನವಿಕ ಹಾಗೂ ಸಮಾಜ ವಿಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 400ಕ್ಕೂ ಹೆಚ್ಚು ವಿಶೇಷ ಕೋರ್ಸ್‌ಗಳನ್ನು ಮಾಹೆ ನೀಡುತ್ತಿದೆ. ಮಣಿಪಾಲ, ಮಂಗಳೂರು, ಬೆಂಗಳೂರು, ಜಂಶೆಡ್ಪುರ ಹಾಗೂ ದುಬೈ ಕ್ಯಾಂಪಸ್‌ಗಳ ಮೂಲಕ ಶಿಕ್ಷಣ, ಸಂಶೋಧನೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಹೆ ವಿಶಿಷ್ಟ ಗುರುತನ್ನು ಸಂಪಾದಿಸಿದೆ. 2020ರಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಮಾಹೆಗೆ ಪ್ರತಿಷ್ಠಿತ ‘ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್’ ಮಾನ್ಯತೆಯನ್ನು ನೀಡಿದೆ. ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ (NIRF) 2025ರ ಶ್ರೇಯಾಂಕದಲ್ಲಿ ದೇಶದಲ್ಲಿ 3ನೇ ಸ್ಥಾನ ಪಡೆದಿರುವ ಮಾಹೆ, ಗುಣಮಟ್ಟದ ಶಿಕ್ಷಣ, ಸಮೃದ್ಧ ಕ್ಯಾಂಪಸ್ ಜೀವನ ಮತ್ತು ಜಾಗತಿಕ ಮಟ್ಟದ ವೃತ್ತಿ ಅವಕಾಶಗಳನ್ನು ಹುಡುಕುವ ವಿದ್ಯಾರ್ಥಿಗಳ ಆದ್ಯತೆಯ ತಾಣವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು