ಶ್ರೀ ಗೋವರ್ಧನಗಿರಿ ಟ್ರಸ್ಟ್ ಮೂಲಕ ನೀಲಾವರ ಮತ್ತು ಕೊಡವೂರು ಗೋಶಾಲೆಯ ಬಗ್ಗೆ ನೀಡಲಾದ ಅಪಪ್ರಚಾರದ ಪತ್ರಿಕಾ ಪ್ರಕಟಣೆಗೆ ಶಶಿಧರ ಭಟ್ ಹಾಗೂ ನೀಲಾವರ ಗೋಗ್ರಾಸ ಸೇವಾ ತಂಡದವರು ನೀಡುವ ಸ್ಪಷ್ಟೀಕರಣ

ನೀಲಾವರ ಗೋಗ್ರಾಸ ಸೇವಾ ತಂಡ ಎಂಬುದು ಒಂದು ಸ್ವಯಂಸೇವಕರ ತಂಡವಾಗಿದ್ದು, "ಗೋ ಸೇವಾ ಪರಮೋ ಧರ್ಮ:" ಎಂಬ ಉದ್ದೇಶದೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡವರಾಗಿರುತ್ತೇವೆ. ನಮ್ಮ ತಂಡವು ನೀಲಾವರ ಮತ್ತು ಕೊಡವೂರಿನ ಗೋಶಾಲೆಗಳಲ್ಲಿ ಸೇವೆ ಮಾಡಲು ಇಚ್ಚಿಸುವವರಿಗೆ ಸಹಾಯ ಮಾಡುವುದು ಗೋ ಸೇವೆಗೆ ಸಾರ್ವಜನಿಕರನ್ನು ಪ್ರೇರೇಪಿಸುವುದು ಮತ್ತು ಗೋಶಾಲೆ ನಡೆಸಲು ಬೇಕಾದ ಸೌಕರ್ಯಗಳನ್ನು ಹೊಂದಿಸಿ ಕೊಡುವ ಸದುದ್ದೇಶದಿಂದ ಪ್ರಾರಂಭಿಸಿರುತ್ತೇವೆ.

ಈ ಬಗ್ಗೆ ಪ್ರಾರಂಭಿಸುವಾಗಲೇ ನಾವು ಪೇಜಾವರ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರನ್ನು ಸಂಪರ್ಕಿಸಿ ಒಪ್ಪಿಗೆ ಪಡೆದಿರುತ್ತೇವೆ ಹಾಗೂ ನಮ್ಮ ಚಟುವಟಿಕೆಗಳನ್ನು ಅವರ ಒಪ್ಪಿಗೆಯಿಂದಲೇ ಮಾಡಿಕೊಂಡು ಅವರಿಗೆ ಎಲ್ಲಾ ಚಟುವಟಿಕೆಗಳ ವಿವರಗಳನ್ನು ಕಾಲಕಾಲಕ್ಕೆ ನೀಡಿರುತ್ತೇವೆ.

ನಮ್ಮ ತಂಡದಿಂದ ಮಾಡಿದ ಪ್ರತಿಯೊಂದು ಕಾರ್ಯ ಚಟುವಟಿಕೆಗಳ ಸಂಪೂರ್ಣ ಲೆಕ್ಕಾಚಾರ ಇಟ್ಟುಕೊಂಡಿದ್ದು, ಹಾಗೂ ಗೋಸೇವೆಗಾಗಿ ಮಾತ್ರ ಇದನ್ನ ವಿನಿಯೋಗಿಸಿರುತ್ತೇವೆ. ಸಂಗ್ರಹಿಸಿದ ಮೊತ್ತದಿಂದ ಗೋಗ್ರಾಸ ಸೇವೆಗೆ ಬೇಕಾದ ಪಾತ್ರೆಗಳು, ಹಿಂಡಿ ಇತ್ಯಾದಿ ಖರ್ಚು-ವೆಚ್ಚಗಳಿಗೆ ಮಾತ್ರ ಬಳಸುತ್ತಿದ್ದೇವೆ. ಉಳಿಕೆ ಮೊತ್ತವನ್ನು ಈಗಾಗಲೇ ಗೋವರ್ಧನಗಿರಿ ಟ್ರಸ್ಟ್ ಖಾತೆಗೆ ವರ್ಗಾಯಿಸಿರುತ್ತೇವೆ. ನಮ್ಮ ತಂಡದ ಅವಿರತ ಚಟುವಟಿಕೆಗಳಿಗೆ ಸಾರ್ವಜನಿಕರು, ಗೋಪ್ರಿಯರು ಸಾಕಷ್ಟು ಮೆಚ್ಚುಗೆ ಸೂಚಿಸಿ, ಈ ಸೇವಾ ಕೈಂಕರ್ಯಕ್ಕೆ ನಮ್ಮನ್ನು ಸಂಪರ್ಕಿಸಲು ಪ್ರಾರಂಭಿಸಿದರು.

ಈ ಸಂದರ್ಭದಲ್ಲಿ ಕೆಲ ಸ್ಥಾಪಿತ ಹಿತಾಸಕ್ತಿಗಳು ವಿನಾಕಾರಣ ನಮ್ಮ ತೇಜೋವಧೆ ಮಾಡಿ ಅಪಪ್ರಚಾರದ ಸುದ್ದಿಗಳನ್ನು ಹರಡಿ ನನ್ನ ಹಾಗೂ ನಮ್ಮ ತಂಡದ ವಿರುದ್ಧ ವಿನಾಕಾರಣ ಈ ವಿಷಯದಲ್ಲಿ ವೈಯಕ್ತಿಕ ನಿಂದನೆ ಹಾಗೂ ನಾನು ಪಾಲುದಾರನಾಗಿರುವ ನಮ್ಮ ವ್ಯವಹಾರಿಕ ಸಂಸ್ಥೆಯ ಹೆಸರನ್ನು ಎಳೆದು ತಂದು ತೇಜೋವಧೆ ಮಾಡಲು ಪ್ರಯತ್ನಿಸಿದ್ದಾರೆ. 

ನಾನು ಹಾಗೂ ನಮ್ಮ ಗೋಗ್ರಾಸ ಸೇವಾ ತಂಡವು ಪೇಜಾವರ ಮಠಕ್ಕಾಗಲಿ, ಪರಮಪೂಜ್ಯ ಪೇಜಾವರ ಶ್ರೀಗಳಿಗಾಗಲಿ, ನೀಲಾವರ ಮತ್ತು ಕೊಡವೂರು ಗೋಶಾಲೆಗಾಗಲಿ ಯಾವುದೇ ಮೋಸ, ವಂಚನೆ ಅಥವಾ ದ್ರೋಹವೆಸಗಿಲ್ಲ. ಗೋಸೇವೆಯೇ ನಮ್ಮ ಧ್ಯೇಯ ಎಂದು ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ಮುಂದೆಯೂ ಗೋ ಸೇವೆಯನ್ನು ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಆರಾಧನೆ ಎಂದೇ ಭಾವಿಸಿ ಮುನ್ನಡೆಯುತ್ತೇವೆ. ನಮ್ಮ ಸೇವಾತತ್ಪರತೆ ಹಾಗೂ ಪಾರದರ್ಶಕತೆಯನ್ನು ಯಾವುದೇ ಸ್ಥಳ ಅಥವಾ ವ್ಯಕ್ತಿಗಳ ಸಮ್ಮುಖದಲ್ಲಿ ವ್ಯಕ್ತಪಡಿಸಲು ಸಿದ್ಧ ಎಂದು ಹೇಳಲಿಚ್ಚಿಸುತ್ತೇನೆ. 

~ಶಶಿಧರ್ ಭಟ್, ಗುಂಡಿಬೈಲು, ಉಡುಪಿ, 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು