ಉಡುಪಿ: ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಜತ ಸಂಭ್ರಮದ ಪ್ರಯುಕ್ತ ಅಗ್ರಹಾರ ಭಾಸ್ಕರ ಭಟ್ ನೆಂಪುದ ಪೊಸ ರಂಗ್ ‘ ತುಳು ಕಥಾ ಪಂಥ’ದ ಪೋಸ್ಟರ್ ಅನ್ನು ಕಲಾ ಪೋಷಕರಾದ ಸುಚಿತ್ರ ಮೋಹನ್ ತೋನ್ಸೆ ಬಿಡುಗಡೆ ಮಾಡಿದರು.
‘ತುಳುನಾಡು ಕೇವಲ ಒಂದು ಪ್ರದೇಶವಲ್ಲ, ಅದ್ಭುತ ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆಯ ತವರೂರು. ತುಳು ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ, ಅದು ನಮ್ಮ ಭಾವನೆ, ನಮ್ಮ ಸಂಸ್ಕಾರ. ಇಂತಹ ಭಾಷೆಯಲ್ಲಿ ಆಯೋಜಿಸಿರುವ ತುಳು ಕಥಾ ಸ್ಪರ್ಧೆಯಲ್ಲಿ ಎಲ್ಲರೂ ಭಾಗವಹಿಸಬೇಕು’ ಎಂದು ಕರೆ ನೀಡಿದರು.
‘ಕಥೆಗಳು ಕೇವಲ ಕಲ್ಪನೆಗಳಲ್ಲ. ಅವು ನಮ್ಮ ಸಮಾಜದ ಕನ್ನಡಿ. ನಮ್ಮ ಹಿರಿಯರು ನಮಗೆ ಕಲಿಸಿದ ‘ಪಾರ್ದನ’ (ಹಾಡು), ಕಬಿತೆ (ಕವಿತೆ), ಒಸರ್ (ಕಥೆ) ತುಳುನಾಡಿನ ಮಣ್ಣಿನ ಗುಣವನ್ನು ಜಗತ್ತಿಗೆ ಪಸರಿಸಿವೆ. ಇಂದು ಮೊಬೈಲ್ ಮತ್ತು ತಂತ್ರಜ್ಞಾನದ ಯುಗದಲ್ಲಿ ನಾವು ನಮ್ಮ ಮೂಲ ಕಥೆಗಳನ್ನು ಮರೆಯುತ್ತಿದ್ದೇವೆ. ಇಂತಹ ಸಮಯದಲ್ಲಿ ಈ ಕಥಾ ಸ್ಪರ್ಧೆಯು ನಮ್ಮ ಭಾಷೆಯ ಉಳಿವಿಗೆ ಮತ್ತು ಬೆಳವಣಿಗೆಗೆ ಸೇತುವೆಯಾಗಲಿದೆ’ ಎಂದು ಹೇಳಿದರು.
ಸುಮನಸಾದ ಸದಸ್ಯರನ್ನು ಹೊರತುಪಡಿಸಿ ಊರಲ್ಲಿರುವ ತುಳುವರು, ಬೇರೆ ಊರಿನಲ್ಲಿರುವ ತುಳುವರು, ಬೇರೆ ಊರಿನಿಂದ ಬಂದು ಇಲ್ಲಿ ತುಳುವರೇ ಆಗಿರುವವರು ಕಥೆ ಕಳುಹಿಸಬಹುದು. ನಿರ್ನಾಲ 15ರ ಒಳಗೆ ಅಂದರೆ ಸೆಪ್ಟೆಂಬರ್ 30ರ ಒಳಗೆ ಕಥೆ ಕಳುಹಿಸಬೇಕು ಎಂದು ಸಂಘಟಕರು ಕೋರಿದರು.
ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಗೌರವಾಧ್ಯಕ್ಷ ಎಂ.ಎಸ್. ಭಟ್, ಸಂಚಾಲಕ ಭಾಸ್ಕರ್ ಪಾಲನ್, ಉಪಾಧ್ಯಕ್ಷ ವಿನಯ್ ಕಲ್ಮಾಡಿ, ಕಾರ್ಯದರ್ಶಿ ಚಂದ್ರಕಾಂತ್ ಕುಂದರ್, ದಯಾನಂದ್ ಕರ್ಕೇರ, ಕಾರ್ಯಕ್ರಮದ ಉಸ್ತುವಾರಿಗಳಾದ ಪ್ರವೀಣ್ ಚಂದ್ರ ತೋನ್ಸೆ, ದಿವಾಕರ್ ಕಟೀಲ್ ಉಪಸ್ಥಿತರಿದ್ದರು.
