ರೇಬಿಸ್ ರೋಗವು ಪ್ರಾಣಿಗಳು ಕಚ್ಚುವುದರಿಂದ ಹರಡುವುದು. ದನದ ಹಲ್ಲು ತಾಗುವುದರಿಂದಲೂ ರೋಗ ಹರಡುತ್ತದೆ. ದನ ಕೂಡಾ ರೇಬಿಸ್ ರೋಗಕ್ಕೆ ಸಿಲುಕುತ್ತದೆ. ಆದರೆ ದನದ ಹಾಲನ್ನು ಕುದಿಸಿ ಕುಡಿಯುವುದರಿಂದ ರೋಗ ಹರಡುವುದಿಲ್ಲ. ಹುಚ್ಚು ಹಿಡಿದಿರುವ ನಾಯಿ ನೀರಿಗೆ ಹೆದರುತ್ತದೆ ಎಂಬುದು ತಪ್ಪು ಕಲ್ಪನೆ. ಹೈಡ್ರೋಫೋಬಿಯವು [ಜಲ ದ್ವೇಷ] ಮನುಷ್ಯನಲ್ಲಿ ಮಾತ್ರ ಕಾಣಸಿಗುವ ರೋಗ ಲಕ್ಷಣ. ಬೆಕ್ಕು, ನಾಯಿ ಕಚ್ಚಿದರೆ ಅಥವಾ ಪರಚಿದ್ರೆ ಮೊದಲಿಗೆ ಬಟ್ಟೆ ಒಗೆಯುವ ಸಾಬೂನಿನಿಂದ ತೊಳೆಯಬೇಕು. ನಂತರ ಟಿಟಿ ಇಂಜೆಕ್ಷನ್ ತೆಗೆದುಕೊಳ್ಳಬೇಕು. ಜೋನೋಟಿಕ್ ರೋಗಗಳು ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಹರಡುವ ಸಾಂಕ್ರಾಮಿಕ ರೋಗಗಳಾಗಿವೆ. ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗವು, ಬ್ರುಸೆಲ್ಲೋಸಿಸ್ ರೋಗವು ದನಗಳಲ್ಲಿಯೂ, ಅಂಥ್ರಾಕ್ಸ್ ರೋಗ ಮೇಕೆಗಳಿಂದ ಮನುಷ್ಯರಿಗೆ ಹರಡುತ್ತದೆ. ಟೋಕ್ಸೋಪ್ಲಾಸ್ಮೋಸಿಸ್ ಬೆಕ್ಕಿನಲ್ಲಿ ಕಂಡುಬರುತ್ತದೆ ಎಂಬುದಾಗಿ ಮಣಿಪಾಲದ ಮುಖ್ಯ ಪಶುವೈದ್ಯಾಧಿಕಾರಿಯಾದ ಡಾ|ಪ್ರಶಾಂತ್ ಶೆಟ್ಟಿಯವರು ಹೇಳಿದರು. ಅವರು ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಇಕೋ ಕ್ಲಬ್‌ನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರೇಬಿಸ್ ಮತ್ತು ಜೊನೋಟಿಕ್ ರೋಗಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪಶುವೈದ್ಯೆ ಡಾ|ಪುಷ್ಪ ಜಿ ಮಾಲಗಿತ್ತಿಮಠ್ ಇವರು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಪಶುವೈದ್ಯಕೀಯ ಕೋರ್ಸ್ಗಳಿಗೆ ಸೇರುವಂತೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಸಿ.ಸುರೇಶ್ ತುಂಗ ಅಧ್ಯಕ್ಷತೆಯನ್ನು ವಹಿಸಿದ್ದರು. ಇಕೋ ಕ್ಲಬ್‌ನ ಸಂಯೋಜಕರಾದ ಪದ್ಮ ಎ ಆಚಾರ್ಯ, ಉಪನ್ಯಾಸಕಿಯರಾದ ವೀಣಾ ಜಿ ಪ್ರಭು, ಲಕ್ಷ÷್ಮಣನ್ ಹಾಗೂ ಪಾವನ ಕಶ್ಯಪ್ ಉಪಸ್ಥಿತರಿದ್ದರು. ಇಕೋ ಕ್ಲಬ್‌ನ ಕಾರ್ಯದರ್ಶಿ ಸಾನ್ವಿ ವಿ ಸ್ವಾಗತಿಸಿದರೆ ಅಮಿರತ್ ನಿರೂಪಿಸಿದರು. ಬಿಂದಿಯಾ ವಂದಿಸಿದರು.
