ಯಕ್ಷಗಾನದ ಮೇರು ಕಲಾವಿದ ಥಂಡಿಮನೆ ಶ್ರೀಪಾದ ತಿಮ್ಮಣ್ಣ ಭಟ್ (63) ನಿನ್ನೆ (14.10.26) ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ವೃದ್ಧ ತಂದೆ, ತಾಯಿ, ಪತ್ನಿ, ದತ್ತುಪುತ್ರ ಹಾಗು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಯಕ್ಷಗಾನ ವಲಯದಲ್ಲಿ ಥಂಡಿಮನೆ ಎಂದೇ ಪ್ರಸಿದ್ಧರಾಗಿದ್ದರು. ಹೊಸ್ತೋಟ ಮಂಜುನಾಥ ಭಾಗವತರಲ್ಲಿ ಯಕ್ಷಗಾನ ಅಭ್ಯಾಸ ಮಾಡಿ 20 ರ ಹರೆಯದಲ್ಲೇ ಯಕ್ಷರಂಗ ಪ್ರವೇಶಿಸಿದ್ದರು. ಸ್ವತಹ ಕಲಾವಿದರಾಗಿದ್ದ ತಂದೆ ತಿಮ್ಮಣ್ಣಭಟರ ಪ್ರೋತ್ಸಾಹವೂ ಇತ್ತು. ಎರಡನೆಯ ವೇಷಕ್ಕೆ ಬೇಕಾದ ಸ್ವರಭಾರ, ಆಳಂಗ, ರಂಗ ನಿರ್ವಹಣಾ ಕ್ರಮದಿಂದ ಸಮರ್ಥ ಕಲಾವಿದರೆಂದು ಖ್ಯಾತರಾಗಿದ್ಧರು. ಶಿರಶಸಿ ಪಂಚಲಿಂಗ, ಶಿರಸಿ ಮಾರಿಕಾಂಬ, ಸಾಲಿಗ್ರಾಮ, ಮಂದಾರ್ತಿ ಕೊನೆಯ ಕೆಲವು ವರ್ಷ ಪೆರ್ಡೂರು ಮೇಳದಲ್ಲಿ ಎರಡನೆಯ ವೇಷಧಾರಿಯಗಿ ಒಟ್ಟು ನಾಲ್ಕು ದಶಕಗಳ ಕಾಲ ಕಲಾಸೇವೆ ಗೈದಿದ್ದರು. ಈಶ್ವರ, ದಶರಥ, ಸಾಲ್ವ, ಭೀಷ್ಮ, ಕಾರ್ತವೀರ್ಯ, ಯಮ, ಶುಕ್ರಾಚಾರ್ಯ, ಯಯಾತಿ, ದುಷ್ಟಬುದ್ಧಿ, ರಕ್ತಜಂಘ, ವಲಲ, ಕಂಸ ಹೀಗೆ ಹಲವು ಪೌರಾಣಿಕ ಪಾತ್ರಗಳು ಕಲಾರಸಿಕರ ಮೆಚ್ಚುಗೆ ಗಳಿಸಿದ್ದವು. ಸಂಸ್ಥೆ ಎರಡು ವರ್ಷದ ಹಿಂದೆ ಅವರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.
