Header Ads Widget

ಶಿರ್ವ : ಮಾನಸ ಪುನರ್ವಸತಿ ವಿಶೇಷ ಶಾಲೆಗೆ ದಿನಸಿ ವಸ್ತುಗಳ ಹಸ್ತಾಂತರ


ಶಿರ್ವ : ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಎರಡನೇ ವರ್ಷಕ್ಕೆ ಪಾದಾರ್ಪಣೆಗೊಂಡ ಹಿನ್ನೆಲೆಯಲ್ಲಿ ಶಿರ್ವ ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಜೀವನ್ ಡಿಸೋಜರವರು ಮಾನಸ ಶಾಲೆಯ ಅಧ್ಯಕ್ಷರಿಗೆ ದಿನಸಿ ವಸ್ತುಗಳನ್ನು ಹಸ್ತಾಂತರಿಸಿ, ಇಂತಹ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ಮೂಲ ಪ್ರೇರಣೆ ಮತ್ತು ಮುಖ್ಯ ಉದ್ದೇಶ ದಿ. ಫಾ. ವಲೇರಿಯನ್ ಮೆಂಡೋನ್ಸಾ. ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಸಮಾಜಮುಖಿ ಚಿಂತನೆ ಮತ್ತು ಕಾರ್ಯಕ್ರಮದ ಬಗ್ಗೆ ತಿಳಿ ಹೇಳಿ ನಮ್ಮನ್ನು ಪ್ರೇರೇಪಿಸಿದ್ದರು. ಇವರ ಆಗಲುವಿಕೆ ನನಗೆ ತುಂಬಲಾಗದ ನಷ್ಟವನ್ನು ಮಾಡಿದೆ. ಅದರ ಸಲುವಾಗಿ ಈ ಕಾರ್ಯಕ್ರಮದ ಎಲ್ಲ ಶ್ರೇಯಸ್ಸು ದಿ. ಫಾ. ವಲೇರಿಯನ್ ಮೆಂಡೋನ್ಕಾ ಇವರಿಗೆ ಅರ್ಪಿಸುತ್ತೆನೆ. ಅವರಿಗೆ ಗೌರವ ಸಮರ್ಪಣೆಯಿಂದ ನಾವು ಇಂದು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸ್ಥಳೀಯ ಹೋಲಿ ಕ್ರಾಸ್ ದೇವಾಲಯ ಪಾಂಬೂರು ಇಲ್ಲಿಯ ಪ್ರಧಾನ ಧರ್ಮ ಗುರುಗಳಾದ ಫಾ. ಹೆನ್ರಿ ಮಸ್ಕರೇನ್ಹಸ್ ಇವರು ಮಾತನಾಡಿ, ಸಂಸ್ಥೆಯು ಮೊದಲ ವರ್ಷದಲ್ಲಿ ಸಾಮಾಜಿಕ ಸೇವೆಗೆ ಸಿದ್ಧರಾಗಿರುವುದು ಸಂತಸದ ಸಂಗತಿ ಮತ್ತು ಇಂತಹ ದೇವರ ಮಕ್ಕಳ ಕಲ್ಯಾಣ ಅಭಿವೃದ್ಧಿಯಿಂದ ಸಂಸ್ಥೆಗೆ ಓಳಿತಾಗಲಿ ಎಂದು ಶುಭ ಹಾರೈಸಿದರು.

ರೋಟರಿ ಕ್ಲಬ್ ಕಾರವಾರ ಅಧ್ಯಕ್ಷ ಶೈಲೇಶ್ ಆರ್ ಹಳ್ದಿಪುರ, ಸಾಮಾಜಿಕ ಕಾರ್ಯಕರ್ತ ಸ್ಟೀವನ್ ಕುಲಾಸೊ ಮಾತನಾಡಿ, ಸಂಸ್ಥೆಯು ವಿಶೇಷ ಮಕ್ಕಳ ಕಲ್ಯಾಣದ ಬಗ್ಗೆ ಕಾಳಜಿ ವಹಿಸಿರುವುದು ನಿಜಕ್ಕೂ ಮೆಚ್ಚುವಂಥದ್ದು ಎಂದು ಶುಭ ಹಾರೈಸಿದರು.

 ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಗ್ರಾಹಕರದ ಫೆಲಿಕ್ಸ್ ಫೆರ್ನಾಂಡಿಸ್, ಮೇರಿ ಡಿ ಸೋಜಾ ಮತ್ತು ಸೀಮಾ ಎಸ್ ಹಳ್ದಿಪುರ, ಡಾ. ಎಡ್ವರ್ಡ್ ಲೋಬೊ, ಮುಖ್ಯ ಶಿಕ್ಷಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಮಾನಸ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಹೆನ್ರಿ ಮಿನೇಜಸ್ ಸ್ವಾಗತಿಸಿದರೆ, ಶಿಕ್ಷಕಿ ರೀಮಾ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ ನ ಶಾಖಾ ವ್ಯವಸ್ಥಾಪಕರಾದ ಫೆಲ್ಸಿ ಡಿ ಸೋಜ ವಂದಿಸಿದರು. ಈ ಸಂಧರ್ಭದಲ್ಲಿ ಸಂಸ್ಥೆಯ ಲೆಕ್ಕ ವ್ಯವಸ್ಥಾಪಕರಾದ ಕುಮಾರ್ ಹೆಚ್ ಎನ್, ಕಿರಿಯ ಸಹಾಯಕರಾದ ದೀಕ್ಷಿತ್ ನಾಯ್ಕ್, ಪರಿಚಾರಕರಾದ ವಿವಿಯನ್ ಮರ್ವಿನ್ ನೊರೋನ್ಹ ಇವರು ಉಪಸ್ಥಿತರಿದ್ದರು.