Header Ads Widget

ಬಳೆ ತೊಡುವುದು ದೌರ್ಬಲ್ಯದ ಸಂಕೇತವೆಂಬಂತೆ ಬಿಂಬಿಸಿ ಹಿಂದೂ ಮಹಿಳೆಯರನ್ನು ಅವಮಾನಿಸಿರುವ ವೆರೋನಿಕಾ : ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್ ಆಕ್ರೋಶ


ಅತ್ತ ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿ ಸ್ವದೇಶವನ್ನು ತೆಗಳುತ್ತಾ ಭಾರತದಲ್ಲಿ ಮಹಿಳೆಯರಿಗೆ ಸಮಾನತೆ ಇಲ್ಲ ಎಂದು ಬೊಬ್ಬಿರಿದರೆ, ಉಡುಪಿಯಲ್ಲಿ ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ 'ಬಿಜೆಪಿ ಪುಂಡಾಟ ಕಣ್ಣು ಮುಚ್ಚಿ ಒಪ್ಪಲು ಕಾಂಗ್ರೆಸ್ ಕಾರ್ಯಕರ್ತರು ಕೈಗೆ ಬಳೆ ತೊಟ್ಟು ಕುಳಿತಿಲ್ಲ' ಎನ್ನುವ ಮೂಲಕ ಬಳೆ ತೊಡುವುದನ್ನು ದೌರ್ಬಲ್ಯದ ಸಂಕೇತವೆಂಬಂತೆ ಬಿಂಬಿಸಿ ಹಿಂದೂ ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಉಡುಪಿ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರದ ಪ್ರಾಂಶುಪಾಲರಿಗೆ ಒಲಿದು ಬಂದಿರುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಓಲೈಕೆ ರಾಜಕಾರಣಕ್ಕಾಗಿ ತಡೆ ಹಿಡಿದಿರುವುದು ನಾಚಿಕೆಗೇಡು. ಈ ಅನ್ಯಾಯವನ್ನು ವಿರೋಧಿಸಿ ಪ್ರತಿಭಟನೆ ನಡೆಸಿರುವ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿರುವುದು ಸಂವಿಧಾನ ವಿರೋಧಿ ಕೃತ್ಯವಾಗಿದೆ.

ರಾಜ್ಯಪಾಲರು ಕುರಿತು ಅವಹೇಳನಕಾರಿ ದೇಶ ವಿರೋಧಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಪೊಲೀಸ್ ಇಲಾಖೆ ಪ್ರತಿಭಟನೆಯ ನೆಪದಲ್ಲಿ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರ ವಿರುದ್ಧ ತರಾತುರಿಯಲ್ಲಿ ಎಫ್ಐಆರ್ ದಾಖಲಿಸಿರುವ ಮರ್ಮವೇನು? ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಏಕ ವಚನದಲ್ಲಿ ಸಂಭೋಧಿಸಿ ವ್ಯಂಗ್ಯವಾಡಿರುವುದು ಅವಮಾನವಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಗೊಂದಲದ ಗೂಡಾಗಿರುವ ಕಾಂಗ್ರೆಸ್ಸಿನ ದಾರುಣ ಸ್ಥಿತಿಯಿಂದ ಹತಾಶರಾಗಿರುವ ವೆರೋನಿಕಾ ಪಕ್ಷದಲ್ಲಿ ಮೂಲೆಗುಂಪಾಗುವ ಭಯದಿಂದ ಕೇವಲ ಪ್ರಚಾರದ ತೆವಲಿಗಾಗಿ ಬೇಕಾಬಿಟ್ಟಿ ಹೇಳಿಕೆ ನೀಡುವ ಮೊದಲು ಈ ಹಿಂದೆ ಭಾರತ್ ಬಂದ್ ಸಂದರ್ಭದಲ್ಲಿ ಉಡುಪಿಯ ಕೆಲವು ಕಾಂಗ್ರೆಸ್ ಮುಖಂಡರು ಬಲವಂತದ ಬಂದ್ ನಡೆಸುವ ನಿಟ್ಟಿನಲ್ಲಿ ಪುಂಡಾಟಿಕೆ ತೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಲಾಠಿ ಏಟಿನ ರುಚಿ ಅನುಭವಿಸಿರುವುದನ್ನು ಮೊದಲು ನೆನಪಿಸಿಕೊಳ್ಳಲಿ ಎಂದು ಅವರು ತಿಳಿಸಿದ್ದಾರೆ.

ತಂದೆ-ತಾಯಿಯಷ್ಟೇ ಗೌರವಕ್ಕೆ ಪಾತ್ರರಾಗಿರುವ ಶಿಕ್ಷಕರಿಗೆ ಅಪಮಾನ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯನ್ನು ಪುಂಡಾಟ ಎನ್ನುವ ಮೂಲಕ ವೆರೋನಿಕಾ ಅವರ ಪ್ರಜಾಪ್ರಭುತ್ವ ವಿರೋಧಿ ಮಾನಸಿಕತೆ ಬಟ್ಟಾಬಯಲಾಗಿದೆ. ಹಿಂದೂ ಧರ್ಮದಲ್ಲಿ ಮಹಿಳೆಯರ ಪಾಲಿಗೆ ತಿಲಕ ಮತ್ತು ಬಳೆಗೆ ವಿಶಿಷ್ಟ ಗೌರವವಿದ್ದು, ರಾಜಕೀಯ ಹೇಳಿಕೆಗಳಿಗೆ ಬಳೆಯನ್ನು ದೌರ್ಬಲ್ಯದ ಸಂಕೇತವೆಂದು ಬಿಂಬಿಸಿ ಮಹಿಳೆಯರಿಗೆ ಅಪಮಾನ ಮಾಡಿರುವ ವೆರೋನಿಕಾ ಉಡುಪಿ ಶಾಸಕರ ವಿರುದ್ಧ ಹೇಳಿಕೆ ನೀಡುವ ಮೂಲಕ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪೇಚಾಟ ನಡೆಸುತ್ತಿರುವುದು ಶೋಚನೀಯ.

ಹಿಂದುತ್ವ, ಅಭಿವೃದ್ದಿ, ರಾಷ್ಟ್ರೀಯತೆ ವಿಚಾರದಲ್ಲಿ ಎಂದಿಗೂ ರಾಜಿಯಾಗದ ವ್ಯಕ್ತಿತ್ವದೊಂದಿಗೆ ಹೊಂದಾಣಿಕೆ ರಾಜಕೀಯಕ್ಕೆ ಮಾರುಹೋಗದೆ ಮತಾಂತರ ಚಟುವಟಿಕೆಗಳ ವಿರುದ್ಧ ಗಟ್ಟಿ ನಿಲುವು ಹೊಂದಿರುವ ಉಡುಪಿ ಶಾಸಕರ ಕಾರ್ಯವೈಖರಿ ವೆರೋನಿಕಾ ಅವರಂತಹ ಹಲವಾರು ಕಾಂಗ್ರೆಸ್ ನಾಯಕರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಇನ್ನಾದರೂ ವೆರೋನಿಕಾ ಅವರು ಇಂತಹ ಕೀಳು ಅಭಿರುಚಿಯ ಹೇಳಿಕೆಗಳನ್ನು ನೀಡುವ ಮೊದಲು ನೂರು ಬಾರಿ ಯೋಚಿಸುವುದು ಉತ್ತಮ.

ರಾಜ್ಯ ಸರಕಾರ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ನೊಂದ ಶಿಕ್ಷಕರಿಗೆ ನ್ಯಾಯ ಒದಗಿಸುವ ಜೊತೆಗೆ ಉಡುಪಿ ಶಾಸಕರು ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ದಾಖಲಿಸಿರುವ ಪ್ರಕರಣವನ್ನು ತಕ್ಷಣ ಹಿಂಪಡೆದು ಆಗಿರುವ ಪ್ರಮಾದವನ್ನು ಸರಿಪಡಿಸಬೇಕು. ತಪ್ಪಿದಲ್ಲಿ ಕಾಂಗ್ರೆಸ್ಸಿನ ದಮನ ನೀತಿಯನ್ನು ಖಂಡಿಸಿ ಬಿಜೆಪಿಯ ಹೋರಾಟದ ಜೊತೆಗೆ ಜನತೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸಂಧ್ಯಾ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.