ಜುಲೈ 11ನ್ನು ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಹಿಂದೆ 1989ರ ಜುಲೈ 11ರಂದು ವಿಶ್ವದ ಜನಸಂಖ್ಯೆ ಐದು ಬಿಲಿಯನ್ ದಾಟಿತು, ಆ ದಿನವನ್ನು ಬಿಲಿಯನ್ ದಿನವಾಗಿ ಆಚರಿಸಲಾಗಿತ್ತು. ಅಂದಿನಿಂದ ಪ್ರತಿ ಜುಲೈ 11ರಂದು ವಿಶ್ವ ಸಂಸ್ಥೆ, ಜನಸಂಖ್ಯಾ ವಿಶೇಷತೆಗಳನ್ನು ದಾಖಲಿಸಿ, ಸರ್ವರಿಗೂ ಸುಸ್ಥಿರ ಆರೋಗ್ಯ, ಆರ್ಥಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ನೀಡುವತ್ತ ಗಮನಹರಿಸಲು ಆ ದಿನವನ್ನು ವಿಶ್ವ ಜನಸಂಖ್ಯಾ ದಿನವಾಗಿ ಆಚರಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿನ ಜನಸಂಖ್ಯೆಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಗಮನಿಸಿದಾಗ, ಹಲವಾರು ಕುತೂಹಲಕಾರಿ ವಿಷಯಗಳು ಬೆಳಕಿಗೆ ಬರುತ್ತವೆ. ಪ್ರಪಂಚದ ಜನಸಂಖ್ಯೆ 8 ಮಿಲಿಯನ್ ದಾಟಿದ್ದರೂ, ಜನಸಂಖ್ಯೆಯ ಹೆಚ್ಚುವಿಕೆಯ ಪ್ರಮಾಣ ಪ್ರತಿವರ್ಷ 1.1% ದಂತೆ ಕಡಿಮೆಯಾಗುತ್ತಿದೆ. ಪ್ರಪಂಚದಾದ್ಯಂತ ಜನನ ಪ್ರಮಾಣ ಕುಸಿ ಯುತ್ತಿದ್ದರೂ 2080ರ ತನಕ ವಿಶ್ವ ಜನಸಂಖ್ಯೆ 10.4 ಬಿಲಿಯನ್ ದಾಟಬಹುದು ಎಂದು ಅಂದಾಜು ಮಾಡಲಾಗಿದೆ. ಯುರೋಪ್ ಮತ್ತು ಪೂರ್ವ ಏಷ್ಯಾದ ರಾಷ್ಟ್ರಗಳಲ್ಲಿ ಜನಸಂಖ್ಯಾ ಸ್ಫೋಟ ಇಳಿಮುಖವಾಗುತ್ತಿದ್ದರೆ, ಆಫ್ರಿಕಾ ಹಾಗೂ ಏಷ್ಯಾದ ಇತರ ರಾಷ್ಟ್ರಗಳಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಆಫ್ರಿಕಾದ ಜನಸಂಖ್ಯೆ 2050 ರ ಒಳಗಾಗಿ ದ್ವಿಗುಣಗೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಜಪಾನ್ ನಲ್ಲಿ ಜನನ ಪ್ರಮಾಣ ಕಡಿಮೆಯಾಗಿ ಕಾರ್ಮಿಕ ವ್ಯವಸ್ಥೆ ಸಂಕಷ್ಟದಲ್ಲಿ ಸಿಲುಕಿದೆ. ಆರ್ಥಿಕ ಪ್ರಗತಿಗೆ ತೊಡಕಾಗುತ್ತಿದೆ. ಭಾರತದ ಜನಸಂಖ್ಯೆ 1.46 ಬಿಲಿಯನ್ ಚೀನಾದ ಜನಸಂಖ್ಯೆಯಾದ 1.41 ಬಿಲಿಯನ್ನು ಹಿಂದಕ್ಕೆ ಹಾಕಿ ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರವಾಗುವ ದಾಪುಗಾಲು ಹಾಕಿದೆ.
ಭಾರತದ ಒಟ್ಟಾರೆ ಜನಸಂಖ್ಯಾ ಸ್ಪೋಟ ದ ಪ್ರಮಾಣ ಇಳಿಮುಖವಾಗುತ್ತಿದರೂ ಪ್ರಾಂತ್ಯವಾರು ವ್ಯತ್ಯಾಸಗಳಿವೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಇಂದಿಗೂ ಜನನ ಪ್ರಮಾಣ ಅಧಿಕವಾಗಿದೆ. ಇತರ ಪ್ರದೇಶಗಳಲ್ಲಿ ಜನನ ಪ್ರಮಾಣ ಕಡಿಮೆಯಾಗುತ್ತಿದ್ದರೂ ಹಲವು ಹೊಸ ಸಮಸ್ಯೆಗಳು ಕಂಡುಬರುತ್ತಿವೆ.
ಇಂದಿನ ಜನಸಂಖ್ಯೆಯಲ್ಲಿ ತೋರಿ ಬರುತ್ತಿರುವ ಪ್ರಮುಖ ವಿಶೇಷತೆ ಎಂದರೆ ಹೆಚ್ಚುತ್ತಿರುವ ಯುವ ಜನಾಂಗ ಹಾಗೂ ಹಿರಿಯ ನಾಗರಿಕರು. ಇದರಿಂದಾಗಿ ಹೊಸ ಆರೋಗ್ಯ ಸಮಸ್ಯೆಗಳು, ಆರೋಗ್ಯದ ಸೌಲಭ್ಯಗಳ ಅವಶ್ಯಕತೆಗಳು ತೋರಿ ಬರುತ್ತಿವೆ. ಹೆಚ್ಚುತ್ತಿರುವ ಕೈಗಾರೀಕರಣ, ಔದ್ಯೋಗೀಕರಣ, ನಗರಗಳಿಗೆ ವಲಸೆ ಹಾಗೂ ಜಾಗತೀಕರಣದಿಂದಾಗಿ ಪ್ರಾಥಮಿಕ ಅವಶ್ಯಕತೆಗಳಾದ ಆಹಾರ, ನೀರು, ನೈರ್ಮಲ್ಯ, ವಸತಿ, ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಗಳ ಮೇಲಿನ ಒತ್ತಡ ಹೆಚ್ಚುತ್ತಿದೆ.
ಬದಲಾದ ಜನಸಂಖ್ಯಾ ಸೂಚ್ಯಂಕಗಳು ಹಲವು ಸಾಮಾಜಿಕ ಅಸಮತೋಲನಗಳಿಗೆ ನಾಂದಿ ಹಾಡಿವೆ. ಹೆಚ್ಚುತ್ತಿರುವ ಯುವ ಜನಾಂಗಕ್ಕೆ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಕಾಳಜಿ ನೀಡಬೇಕಾಗುತ್ತದೆ. ಜೊತೆಗೆ ಬಡತನ, ನಿರುದ್ಯೋಗ, ಮಾದಕ ದ್ರವ್ಯಗಳ ವ್ಯಸನ, ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಗಲಭೆಗಳು ಹೆಚ್ಚುತ್ತಿದೆ. ಗ್ರಾಮೀಣ ಯುವ ಜನಾಂಗ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಹದಿಹರೆಯದ ತರುಣ ತರುಣಿಯರು ಲೈಂಗಿಕವಾಗಿ ಸಕ್ರಿಯರಾಗಿದ್ದು ಹದಿಹರೆಯದ ಗರ್ಭಧಾರಣೆ ಹೆಚ್ಚಾಗಿ ಕಂಡುಬರುತ್ತಿದೆ. ಭಾರತದಲ್ಲಿ ಗರ್ಭಪಾತ ನ್ಯಾಯಯುತ ಹಕ್ಕಾಗಿದ್ದು , ಇತ್ತೀಚಿನ ಗರ್ಭಪಾತ ಕಾಯ್ದೆಯಲ್ಲಿನ ತಿದ್ದುಪಡಿಗಳು ಅವಿವಾಹಿತ ಮಹಿಳೆಯರಿಗೂ ಗರ್ಭಪಾತದ ಅವಕಾಶವನ್ನು ನೀಡಿದೆ. ಆದಾಗ್ಯ್ಯೂ ಯುವತಿಯರು ಅಸಮರ್ಪಕ ವಿಧಾನಗಳನ್ನು ಬಳಸಿ, ತಮಗೆ ತಾವೇ ಗರ್ಭಪಾತದ ಗುಳಿಗೆಗಳನ್ನು ಸೇವಿಸಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಈ ವಯಸ್ಸಿನಲ್ಲಿ ಅನಿಯಮಿತ ವಾಗಿರುವುದರಿಂದ ಕೆಲವೊಮ್ಮೆ ಗರ್ಭಧಾರಣೆ ಪತ್ತೆಯಾಗುವಾಗ ಐದರಿಂದ ಆರು ತಿಂಗಳೇ ಕಳೆದಿರುತ್ತದೆ ಈ ನಿಟ್ಟಿನಲ್ಲಿ ಯುವ ಜನಾಂಗಕ್ಕೆ ಗರ್ಭಧಾರಣೆ, ಗರ್ಭಪಾತ ಹಾಗೂ ಸಂತಾನ ನಿರೋಧಕ ವಿಧಾನಗಳ ಬಗ್ಗೆ ಸಮರ್ಪಕ ಮಾಹಿತಿ ದೊರಕಿಸಿ ಕೊಡುವುದು ಅತಿ ಅಗತ್ಯವಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿನ ಮಾಹಿತಿಯಿಂದ ಯುವಜನತೆ ದಾರಿ ತಪ್ಪದಂತೆ, ಮಾಹಿತಿ ನೀಡುವವರು ಜವಾಬ್ದಾರಿ ವಹಿಸಬೇಕಾಗುತ್ತದೆ.
ಈ ಪರಿಸ್ಥಿತಿಗೆ ವಿಭಿನ್ನವಾದ ಇನ್ನೊಂದು ಸಾಮಾಜಿಕ ಬದಲಾವಣೆ ಮದುವೆಯಾಗುವ ವಯಸ್ಸು ಮುಂದೂಡಲ್ಪಡುತ್ತಿರುವುದು. ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ ಸ್ವಾವಲಂಬನೆಯಿಂದಾಗಿ ತರುಣಿಯರು ವಿವಾಹವಾಗುವ ವಯಸ್ಸು 30ರ ಹರೆಯವನ್ನು ದಾಟುತ್ತಿದ್ದು ಆನಂತರ ಗರ್ಭಧಾರಣೆ ಕಷ್ಟ ಸಾಧ್ಯವಾಗುತ್ತಿದೆ. ಸಂತಾನ ಹೀನತೆಯ ಸಮಸ್ಯೆಯೂ ಉಲ್ಬಣಿಸುತ್ತಿದೆ. ಜೊತೆಗೆ ಇಬ್ಬರ ಸಂಬಳ, ಮಕ್ಕಳಿಲ್ಲದ ಜೀವನವನ್ನು (DINK) ಇಂದಿನ ಜನಾಂಗ ಆಯ್ದುಕೊಳ್ಳುತ್ತಿರುವುದರಿಂದ ಜನನ ಪ್ರಮಾಣವೂ ಕಡಿಮೆಯಾಗುತ್ತಿದೆ.
ಆಯುಸ್ಸು ಹೆಚ್ಚು ತ್ತಿದ್ದಂತೆ ಹಿರಿಯ ನಾಗರಿಕರ ಸಂಖ್ಯೆಯು ಏರಿ, ವೃದ್ದಾಪ್ಯದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಕ್ಯಾನ್ಸರ್, ಮರೆಗುಳಿತನ, ಮಾನಸಿಕ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಮಕ್ಕಳು ಉದ್ಯೋಗಕ್ಕಾಗಿ ಪರಸ್ಥಳಗಳಿಗೆ ವಲಸೆ ಹೋಗಿ, ವೃದ್ಧ ತಂದೆ ತಾಯಿಯರು ವೃದ್ಧಾಶ್ರಮಗಳನ್ನು ಆಶ್ರಯಿಸುವಂತಾಗಿದೆ. ಅಸಾಂಕ್ರಾಮಿಕ ಕಾಯಿಲೆಗಳಾದ ಅತಿ ರಕ್ತದೊತ್ತಡ, ಮಧುಮೇಹ, ಹೃದ್ರೋಗಗಳು ಹೆಚ್ಚಿ ಹಿರಿಯ ವಯಸ್ಕರ ಆರೈಕೆಗಾಗಿ ವೈದ್ಯಕೀಯ ವೆಚ್ಚವು ಹೆಚ್ಚಾಗುತ್ತಿದೆ.
ಉದ್ಯೋಗಕ್ಕಾಗಿ ವಲಸೆಯಿಂದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಶೈಕ್ಷಣಿಕ, ಆರ್ಥಿಕ ಮತ್ತು ಜೀವನಶೈಲಿಯ ಸಮತೋಲನ ಕುಸಿಯುತ್ತಿದೆ. ಪಟ್ಟಣಗಳಲ್ಲಿ ಜನಸಂಖ್ಯೆ ಹೆಚ್ಚಿದಂತೆ ಕಟ್ಟಡಗಳು ಹೆಚ್ಚಿ, ಪ್ರಾಥಮಿಕ ಸೌಲಭ್ಯಗಳಾದ ಸ್ವಚ್ಛತೆ, ನಗರ ನಿರ್ಮಾಣ, ತ್ಯಾಜ್ಯ ನಿರ್ವಹಣೆ ಹಾಗೂ ಆರೋಗ್ಯ ವ್ಯವಸ್ಥೆಗಳ ಮೇಲಿನ ಜವಾಬ್ದಾರಿ ಹೆಚ್ಚುತ್ತಿದೆ.
ಹೆಚ್ಚುತ್ತಿರುವ ಜನಸಂಖ್ಯೆಯ ಮೂಲಭೂತ ಸೌಲಭ್ಯಗಳಿಗಾಗಿ ಕೈಗಾರೀಕರಣ, ನಗರೀಕರಣ ಅಧಿಕವಾಗುತ್ತಿದ್ದಂತೆ ಕಾಡು ಕಡಿದು ನಾಡಾಗಿ ಪರಿವರ್ತಿತವಾಗುತ್ತಿದೆ. ಕಾಂಕ್ರೀಟ್ ಕಾಡು ಹೆಚ್ಚುತ್ತಿದೆ. ಇದರಿಂದಾಗಿ ಪರಿಸರ ಮಾಲಿನ್ಯ, ಪರಿಸರ ಅಸಮತೋಲನ, ಜಾಗತಿಕ ತಾಪಮಾನ ಏರಿಕೆ, ಶಾಖಾಘಾತ, ಅಕಾಲಿಕ ಮಳೆ, ನೈಸರ್ಗಿಕ ವಿಕೋಪಗಳು ಮುಂತಾದ ಆಧುನಿಕ ಸಮಸ್ಯೆಗಳು ಉದ್ಭವಿಸುತ್ತಿವೆ.
ಜನಸಂಖ್ಯಾ ಸೂಚ್ಯಂಕಗಳಲ್ಲಿ ಕಂಡು ಬರುತ್ತಿರುವ ಅಸಮತೋಲನವನ್ನು ಸರಿಪಡಿಸಲು, ವ್ಯತ್ಯಾಸಗಳನ್ನು ಸರಿದೂಗಿಸಲು ನಾವೇನು ಮಾಡಬಹುದು??
: ಯುವ ಜನರಿಗಾಗಿ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿಯಲ್ಲಿ ಆರ್ಥಿಕ ಹೂಡಿಕೆಯನ್ನು ಹೆಚ್ಚಿಸಿ ಜನಸಂಖ್ಯೆಯ ಒತ್ತಡವನ್ನು ಅಭಿವೃದ್ಧಿಯ ಅವಕಾಶವನ್ನಾಗಿ ಪರಿವರ್ತಿಸುವುದು.
: ಕುಟುಂಬ ನಿಯಂತ್ರಣ ಯೋಜನೆ , ಪುನರುತ್ಪಾದಕ ಆರೋಗ್ಯ ಸೇವೆ (Reproductive health care) ಗಳ ಮೂಲಕ ತಾಯಂದಿರು ಹಾಗೂ ಮಕ್ಕಳ ಆರೋಗ್ಯ ಸುಧಾರಿಸಿ ಜನನ ಪ್ರಮಾಣವನ್ನು ಸುಸ್ಥಿರಗೊಳಿಸುವುದು.
: ಸಣ್ಣ ಕುಟುಂಬ, ಮಕ್ಕಳ ಜನನದ ನಡುವೆ ಅಂತರ, ವಿವಾಹಕ್ಕೆ ಸೂಕ್ತ ವಯಸ್ಸು ಇವೆ ಮುಂತಾದವುಗಳ ಕುರಿತು ಸಾಮಾಜಿಕ ಜಾಗೃತಿ ಮೂಡಿಸುವುದು.
: ಹಿರಿಯ ನಾಗರಿಕರಿಗೆ ಸುಸಜ್ಜಿತ ಆರೋಗ್ಯ ಮತ್ತು ಆರೈಕೆಯ ವ್ಯವಸ್ಥೆಯನ್ನು ಪೂರೈಸಿ ಸುಸ್ಥಿರ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಕೈಜೋಡಿಸುವುದು. ವೃತ್ತಿ ನಿವೃತ್ತಿಯ ನಂತರವೂ ನೆಮ್ಮದಿಯ ಬದುಕು ನಡೆಸಿಕೊಂಡು ಸ್ವಾವಲಂಬಿಗಳಾಗುವ ಅವಕಾಶ ಕಲ್ಪಿಸಿ ಜೀವನದುದ್ದಕ್ಕೂ ಕಲಿಕೆಗೆ ಉತ್ತೇಜನ ನೀಡುವುದು. ಹಿರಿಯ ನಾಗರಿಕರ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಚಿಂತನೆ ನಡೆಸುವುದು.
: ಸಮಾಜದ ಆರ್ಥಿಕ ವ್ಯವಸ್ಥೆ ಯಾವುದೇ ಒಂದು ವಯೋವರ್ಗದ ಮೇಲೆ ಅವಲಂಬಿತ ವಾಗಿರದಂತೆ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸುವುದು.
: ಜನಸಂಖ್ಯಾ ಸ್ಫೋಟದ ಬಗ್ಗೆ ಮಾತ್ರ ಗಮನವಿಡದೆ ಸಂಪನ್ಮೂಲಗಳ ಜಾಗೃತ ಬಳಕೆ, ಮರುಬಳಕೆ ಮತ್ತು ಮರು ಸಂಸ್ಕರಣೆಯತ್ತ ಗಮನಹರಿಸಿ ಪರಿಸರವನ್ನು ಸಂರಕ್ಷಿಸುವುದು.
: ಯುವಕರಿಗೆ ಕೌಶಲ್ಯ ಹಿರಿಯರಿಗೆ ಆರೈಕೆ ನೀಡಿ ಜನಸಂಖ್ಯಾ ಅಸಮತೋಲನವನ್ನು ಸಮದೋಗಿಸುವುದು.
: ಸುಸ್ಥಿರ ಸಮಾಜದ ನಿರ್ಮಾಣಕ್ಕಾಗಿ ನಿಯೋಜಿತ ಕುಟುಂಬ ಹಾಗೂ ಸಂತೃಪ್ತ ಜೀವನದ ಧ್ಯೇಯವನ್ನು ರೂಡಿಸಿಕೊಳ್ಳುವುದು.
: ಯುವ ಜನಾಂಗಕ್ಕೆ ಸಮರ್ಪಕ ಮಾಹಿತಿ ನೀಡಿ ಅವರು ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಿಕೊಳ್ಳುವಂತೆ , ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುವುದು.
ಅಬ್ರಹಾಂ ಲಿಂಕನ್ ಹೇಳಿದಂತೆ ದೇಶ ತನಗೇನು ಮಾಡಿದೆ? ಸಮಾಜ ತನಗೇನು ನೀಡಿದೆ ಎಂದು ಪ್ರಶ್ನಿಸದೆ ತಾನು ಸಮಾಜಕ್ಕೆ ನೀಡಿರುವ ದೇಣಿಗೆ ಏನು ಎಂದು ಪರಾಮರ್ಶಿಸಿ ಪ್ರತಿಯೊಬ್ಬ ನಾಗರಿಕನು ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿದಾಗ ಸುಸ್ಥಿರ ಸುದೃಢ ಸಮಾಜದ ನಿರ್ಮಾಣದ ಕನಸು ನನಸಾಗುತ್ತದೆ.
~ಡಾ ರಾಜಲಕ್ಷ್ಮಿ
ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞರು
ಸದಸ್ಯರು, ಸಾಮಾಜಿಕ ಆರೋಗ್ಯ ಉಪಸಮಿತಿ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆ
ಕಾರ್ಯದರ್ಶಿ, ಸಾಮಾಜಿಕ ಆರೋಗ್ಯ ಅರಿವು ಸಮಿತಿ, ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞರ ಸಂಘ ಕರ್ನಾಟಕ ರಾಜ್ಯ ಶಾಖೆ
0 ಕಾಮೆಂಟ್‌ಗಳು