Header Ads Widget

​ಶ್ರೀ ಶಿರೂರು ಪರ್ಯಾಯ : 13.07.2025ರ ಭಾನುವಾರ ಕಟ್ಟಿಗೆ ಮೂಹೂರ್ತ.

ರಜತಪೀಠವೆಂದೇ ಪ್ರಸಿದ್ಧಿಯಾದ ಉಡುಪಿಯಲ್ಲಿ ನೆಲೆನಿಂತು ಅನುದಿನವೂ ಭಕ್ತರನ್ನು ಅನುಗ್ರಹಿ ಸುತ್ತಿರುವ ಅನ್ನಬ್ರಹ್ಮನೆಂದೇ ಖ್ಯಾತಿ ಪಡೆದ ಶ್ರೀಕೃಷ್ಣ ಭಗವಂತನ ಪೂಜಾ ಕೈಂಕರ್ಯವನ್ನು ಕೈಗೊಳ್ಳುತ್ತಿರುವ ಭಾವೀ ಪರ್ಯಾಯ ಶ್ರೀ ಶಿರೂರು ಮಠದ  ವಿವಿಧ ಮೂಹೂರ್ತಗಳ ಪೈಕಿ ಮೂರನೇ ಮೂಹೂರ್ತ ಅದುವೇ ಕಟ್ಟಿಗೆ ಮೂಹೂರ್ತ.



2026 - 2028ರ ಶ್ರೀ ಶಿರೂರು ಮಠದ  ಪರ್ಯಾಯವಧಿಯಲ್ಲಿ ಭಕ್ತರಿಗೆ ಅನ್ನ ದಾನಕ್ಕಾಗಿ ಈಗಾಗಲೇ ಅಕ್ಕಿ ಮೂಹೂರ್ತ ನಡೆದಿದೆ. ಅಕ್ಕಿ ಮತ್ತು ಇನ್ನಿತರ ಧಾನ್ಯಗಳನ್ನು ಕಟ್ಟಿಗೆ ಉರಿಯಲ್ಲಿಯೇ ಬೇಯಿಸಿ ಭಗವಂತನಿಗೆ ನೈವೇದ್ಯವಾಗಿ ಸಮರ್ಪಿಸುವುದು ಮಠದ ನಿಯಮ. ಇದಕ್ಕೆ ಬೇಕಾಗುವ ಕಟ್ಟಿಗೆ ಸಂಗ್ರಹಣೆಯ ತಯಾರಿಯೇ ಕಟ್ಟಿಗೆ ಮುಹೂರ್ತ ಎಂದು ಪ್ರಸಿದ್ಧ.


ಪರಿಶುದ್ಧವಾದ ಆಹಾರವನ್ನು ಭಕ್ತರಿಗೆ ನೀಡುವುದಕ್ಕೋಸ್ಕರ ಅದರ ತಯಾರಿಕೆಗಾಗಿ ಕಟ್ಟಿಗೆಯನ್ನು ಮುಂಚಿತವಾಗಿ ಸಂಗ್ರಹಿಸುವುದು ಈ ಮುಹೂರ್ತದ ವಿಶೇಷತೆ. ಆ ಪ್ರಯುಕ್ತ ಈ ಬಾರಿಯ ಕಟ್ಟಿಗೆ ಮುಹೂರ್ತವು ದಿನಾಂಕ 13.07.2025 ರ ಭಾನುವಾರ ಬೆಳಿಗ್ಗೆ 9.15 ರ ಸಿಂಹ ಲಗ್ನದಲ್ಲಿ ನಡೆಯಲಿದೆ.


ಕಟ್ಟಿಗೆಯನ್ನು ಆಷಾಡ ಮಾಸದಲ್ಲಿಯೇ ಸಂಗ್ರಹಿಸುವ ನಿಯಮವಿದೆ. ಕಾರಣ ಆಗ ಮಳೆಗಾಲ ವಾದ್ದರಿಂದ ಕಡಿದ ಮರಗಿಡಗಳು ಮತ್ತೆ ಚಿಗುರಿ 16 ವರ್ಷಗಳ ತನಕ ಬೆಳೆಯಲು ಸಹಕಾರಿಯಾಗುತ್ತದೆ. ತುದಿ ಹೆಚ್ಚಿರುವ ಕರಿ (ಕರ್ಮಾರು) ಮರದ ಸುಮಾರು 25 ಲಾರಿಯಷ್ಟು ಕಟ್ಟಿಗೆಯನ್ನು ಸಂಗ್ರಹಿಸಿ ಅದನ್ನು ಮಧ್ವ ಸರೋವರದ ಈಶಾನ್ಯ ಮೂಲೆಯಲ್ಲಿ ಸುಮಾರು 50 ಅಡಿ ಎತ್ರರ 25 ಅಡಿ ಅಗಲದ ಕಲಾತ್ಮಕವಾದ ರಥದ ಮಾದರಿಯಲ್ಲಿ ಕಟ್ಟಿಗೆಯನ್ನು ಪೇರಿಸಿಡಲಾಗುತ್ತದೆ. ತುದಿಯಲ್ಲಿ ಶಿಖರ, ಪತಾಕೆಯನ್ನಿರಿಸಿ ಸಿಂಗರಿಸಲಾಗುತ್ತದೆ.


ಇದಕ್ಕೂ ಮುನ್ನ ಮಠದ ಪುರೋಹಿತರು ನಿಗದಿ ಪಡಿಸಿದ ದಿನದಂದು ಕಟ್ಟಿಗೆ ಪೇರಿಸಿಡುವ ಜಾಗದಲ್ಲಿ ನಡುಗಂಬವನ್ನು ನೆಟ್ಟು ಅದರ ಸಮ್ಮುಖದಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ. ಬೆಳಿಗ್ಗೆ 7.30 ಕ್ಕೆ ಶ್ರೀ ಶ್ರೀರೂರು ಮಠದಲ್ಲಿ ನವಗ್ರಹ ಇತ್ಯಾದಿ ಪ್ರಾರ್ಥನೆಯೊಂದಿಗೆ ವೇದಘೋಷ, ಕೊಂಬು, ಕಹಳೆ, ವಾದ್ಯ ಬಿರುದಾವಳಿಯ ಜೊತೆಯಲ್ಲಿ ಮಠದ ಪರಿಚಾರಕರು, ಭಕ್ತಾದಿಗಳು ಕಲ್ಸಂಕದ ಲಕ್ಷ್ಮೀ ತೋಟದಿಂದ ಕಟ್ಟಿಗೆಯನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗುತ್ತಾರೆ.



ವಿವಿಧ ಗಣ್ಯರು, ವಿದ್ವಾಂಸರು, ದಿವಾನರು, ಮತ್ತು ಭಕ್ತರ ಸಹಿತವಾಗಿ ಚಂದ್ರಮೌಳೀಶ್ವರ, ಶ್ರೀಆನಂತೇಶ್ವರ, ಶ್ರೀಕೃಷ್ಣ ಮುಖ್ಯಪ್ರಾಣ ಮಧ್ಯಗುರುಗಳ ಹಾಗೂ ಗರುಡನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಅಲ್ಲಿಂದ ನಿಗದಿಪಡಿಸಿದ ಸ್ಥಳದಲ್ಲಿ ಪೂಜಾದಿಗಳನ್ನು ಸಲ್ಲಿಸಿ ಪ್ರಾರ್ಥನೆಗೈದು ಕಟ್ಟಿಗೆ ರಥ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸುತ್ತಾರೆ. ಉಡುಪಿಯ ಈ ಧಾರ್ಮಿಕ ಪರಂಪರೆಯ ಕಲಾ ಸಂಪ್ರದಾಯವು ಶ್ರೀವಾದಿರಾಜರ ಕಾಲದಿಂದಲೇ ನಡೆದು ಬಂದಿರುವುದು ವಿಶೇಷ. ಈ ಕಟ್ಟಿಗೆ ರಥ ನಿರ್ಮಾಣ ಕಾರ್ಯವು ಸುಮಾರು ರೂ. 20 ಲಕ್ಷದ ಖರ್ಚಿನಲ್ಲಿ ನೆರವೇರವೇರಲ್ಪಡುತ್ತದೆ.


ಈ ಮುಹೂರ್ತದಲ್ಲಿ ಪಾಲ್ಗೊಳ್ಳುವ ಭಕ್ತ ಜನರಿಗೆ ಯಾವುದಾದರೂ ಅಗ್ನಿ ದೋಷವಿದ್ದರೆ ಪರಿಹಾರ ವಾಗುವುದು ಎಂಬ ನಂಬಿಕೆ. ಅಂದರೆ ಯಜ್ಞ ಯಾಗಾದಿಗಳಲ್ಲಿ ಆರ್ಪಿಸಿದ ಹವಿರ್ಭಾಗವು ಅಗ್ನಿ ಮೂಲಕ ಭಗವಂತನನ್ನು ತಲುಪಬೇಕಾದರೆ ಅಗ್ನಿ ಪ್ರಜ್ವಲನಕ್ಕೆ ಕಟ್ಟಿಗೆ ಹೇಗೆ ಉಪಯೋಗವಾಗುತ್ತದೊ ಹಾಗೇ ಭಕ್ತಜನರ ಜಠರಾಗ್ನಿ ತಣಿಸುವ ಯಜ್ಞದಲ್ಲಿ ಆಹಾರ ಖಾದ್ಯಗಳನ್ನು ತಯಾರಿಸುವುದಕ್ಕೆ ಈ ಕಟ್ಟಿಗೆಯು ಉಪಯೋಗವಾಗುತ್ತದೆ.


ಇದರಿಂದ ಈ ಮೂಹೂರ್ತದಲ್ಲಿ ಪಾಲ್ಗೊಂಡ ಭಕ್ತರ ಜಠರಾಗ್ನಿ ಸಮಸ್ಯೆಯು, ಅಗ್ನಿ ದೋಷಗಳಿದ್ದರೆ ಪರಿಹಾರ​ವಾಗುತ್ತದೆ ಎಂಬ ನಂಬಿಕೆಯೂ ಇದೆ. ಅಗ್ನಿ ಎಂಬ ಭಗವಂತ ರೂಪವನ್ನು ಪ್ರಜ್ವಲಿಸಲು ಸಹಕಾರಿಯಾದ ಈ ಕಟ್ಟಿಗೆ ಸಂಗ್ರಹಣೆಯ ಮುಹೂರ್ತದಲ್ಲಿ ಭಕ್ತಾದಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಗಳಾಗಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ​ಶ್ರೀ ಮಠದ ದಿವಾನರಾದ ಡಾ। ಉದಯ ಸರಳತ್ತಾಯ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು  

​ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಶಾಸಕ ಯಶಪಾಲ್ ಸುವರ್ಣ​ ಮಾತನಾಡಿ ನಗರಸಭೆ ವತಿಯಿಂದ ಪರ್ಯಾಯ ಸಂದರ್ಭದಲ್ಲಿ ದೀಪಾಲಂಕಾರಕ್ಕೆ 50ಲಕ್ಷ ನೀಡಲಾಗುವುದು. ಅಲ್ಲದೆ ಮುಂದಿನ ಪ್ರತೀ ಪರ್ಯಾಯಕ್ಕೂ ಈ  ಯೋಜನೆಯನ್ನು ನಗರ ಸಭೆಯಿಂದ ಮುಂದುವರಿಸಲಾಗುವುದು. ಕಟ್ಟಿಗೆ ಮುಹೂರ್ತದ ಬಳಿಕ ಪರ್ಯಾಯ ಸ್ವಾಗತ ಸಮಿತಿ ಕಚೇರಿಯನ್ನು ಉದ್ಘಾಟನೆ ಮಾಡಲಾಗುವುದು ಎಂದರು.  


 ​ಈ ಸಂದರ್ಭದಲ್ಲಿ ಮೋಹನ್ ಭಟ್, ​ನಂದನ್ ಜೈನ್​, ವಾಸುದೇವ ಆಚಾರ್ಯ ಉಪಸ್ಥಿತರಿದ್ದರು.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು