ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಬಹಳಷ್ಟು ಜನರಿಗೆ ಬದುಕು ಕಟ್ಟಿಕೊಟ್ಟ ಸಂಸ್ಥೆ. ಶ್ರೀ ಶ್ರೀ ವಿಭುದೇಶ ತೀರ್ಥ ಶ್ರೀಪಾದರ ದೂರದೃಷ್ಟಿತ್ವದಿಂದ ರೂಪುಗೊಂಡ ಈ ಸಂಸ್ಥೆಯು ಗುಣಮಟ್ಟದ ವಿದ್ಯೆ, ಸಂಸ್ಕಾರ ಹಾಗೂ ಸಂಸ್ಕೃತಿಯ ಅರಿವನ್ನು ನೀಡುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಯ ನಿರ್ಮಾಣ ಮಾಡಲು ಸದಾ ಶ್ರಮಿಸುತ್ತಿದೆ ನಾನು ಈ ಸಂಸ್ಥೆಯ ಹಳೆ ವಿದ್ಯಾರ್ಥಿ ಎಂಬುದಕ್ಕೆ ಬಹಳ ಹೆಮ್ಮೆಪಡುತ್ತಾ ಇಂದು ಈ ಸಂಸ್ಥೆಗೆ ಆಗಮಿಸಿದ ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿ ಒದಗಿಸಿಕೊಟ್ಟ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತಾ ಸದ್ವಿಚಾರಗಳನ್ನು ಮೈಗೂಡಿಸಿಕೊಂಡು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತಾಗಲಿಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಅಭಿಪ್ರಾಯ ಪಟ್ಟರು.
ಅವರು ಮಂಗಳವಾರದಂದು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವತಿಯಿಂದ ಆಯೋಜಿಸಲಾದ ವಿಶೇಷ ಕಾರ್ಯಕ್ರಮ ಜ್ಞಾನಂ 2025 ಇದರ ಉದ್ಘಾಟನೆಯನ್ನು ಮಾಡಿ ಮಾತನಾಡಿದರು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಅವರು ಮಾತನಾಡಿ, ದೇಶಕ್ಕೆ ಅತಿ ಹೆಚ್ಚು ಸಿಎಗಳನ್ನು ನೀಡಿದ ಸಂಸ್ಥೆಯಾಗಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜನ್ನು ಗುರುತಿಸಲೇಬೇಕು.
ಶ್ರೀಪಾದರ ಆಶಯದಂತೆ ಗಳಿಕೆಯೊಂದಿಗೆ ಕಲಿಕೆ ಎನ್ನುವ ಪರಿಕಲ್ಪನೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ. ದೇಶದ ವ್ಯವಸ್ಥೆಯನ್ನು ಬದಲಾಯಿಸುವ ಶಕ್ತಿ ಹೊಂದಿದ ವಿದ್ಯಾರ್ಥಿಗಳು ಇಂತಹ ಸಂಸ್ಥೆಗಳು ನೀಡುವ ಸದವಕಾಶಗಳನ್ನು ಬಳಸಿಕೊಳ್ಳುತ್ತಾ ಸಮಾಜದ ಧ್ವನಿಯಾಗಿ ದೇಶಕ್ಕೆ ಮತ್ತು ಸಂಸ್ಥೆಗೆ ಕೀರ್ತಿ ತರುವಂತಾಗಲಿ* ಎಂದು ಆಶಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಗೌರವ ಕಾರ್ಯದರ್ಶಿ ಸಿಎ.ಟಿ. ಪ್ರಶಾಂತ್ ಹೊಳ್ಳ ಅವರು ಮಾತನಾಡುತ್ತಾ, *ವೃತ್ತಿ ಬದುಕು, ವಿವಿಧ ಕೋರ್ಸ್ ಗಳ ಕಲಿಕೆ, ಸಿಎ ಅಧ್ಯಯನದ ನಡುವೆಯೂ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳು ಪಿಯು ವಿದ್ಯಾರ್ಥಿಗಳಿಗಾಗಿ ಇಂಥದ್ದೊಂದು ಕಾರ್ಯಕ್ರಮವನ್ನು ಆಯೋಜಿಸಿರುವುದು ಪ್ರಶಂಸನೀಯ. ಅವರಿಂದ ಇನ್ನಷ್ಟು ಇಂತಹ ಒಳ್ಳೆಯ ಕಾರ್ಯಕ್ರಮಗಳು ನಡೆಯುವಂತಾಗಲಿ* ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಕಾಂತ್ ಭಟ್ ಅವರು ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕ ಡಾ. ರಾಘವೇಂದ್ರ ಎಲ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಾದ ವಿನಾಯಕ್ ಪೈ ಬಿ, ಡಾ. ಪ್ರಜ್ಞಾ ಮಾರ್ಪಳ್ಳಿ ಕಾರ್ಯಕ್ರಮ ಸಂಯೋಜಕರಾದ ಗೌರಿ ಶೆಣೈ ಉಪಸ್ಥಿತರಿದ್ದರು.
ರಾನಿಯ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಗಗನ್ ಜೆ. ಸುವರ್ಣ ಸ್ವಾಗತಿಸಿ, ಎನ್ಎಸ್ಎಸ್ ಘಟಕ ನಾಯಕ ವಿಶ್ವಾಸ್ ವಂದಿಸಿದರು.

0 ಕಾಮೆಂಟ್‌ಗಳು