Header Ads Widget

ಇದೇನಿದು ಪ್ರಕೃತಿಯೋ ವಿಕೃತಿಯೋ ~ಡಾ ಎ ಪಿ ಭಟ್ ಉಡುಪಿ

ಎಲ್ಲಿಕಂಡರೂ ಭೂಕಂಪ, ಜ್ವಾಲಮುಖಿಗಳು. ಚಂಡ ಮಾರುತಗಳು. ಅತಿವೃಷ್ಟಿ ಅಂತೆನುವಷ್ಟು ಮಳೆ , ಅದರಲ್ಲೂ ಎಲ್ಲಾ ಕಡೆ ಮೇಘಸ್ಫೋಟ. ಎನಿದು ? ಪ್ರಕೃತಿ ಮುನಿದಳೇ? 

ಸೂರ್ಯನದಾದಾದರೂ ಕಥೆಯೇ ಬೇರೆ. 25ನೇ ಆವೃತ್ತಿಯ 11ವರ್ಷದ ಸೂರ್ಯ ನ ಕುಣಿತ “ ಸನ್ ಸ್ಫಾಟ್ ಸೈಕಲ್ “ ವಿಜ್ಞಾನಿಗಳ ಲೆಕ್ಕಾಚಾರಗಳನ್ನು ಮೀರಿ ಮುಂದುವರಿಯುತ್ತಿದೆ. ಈ ವರ್ಷದ ಜನವರಿಗೆ ಮುಗಿಯುತ್ತದೆ ಎಂದು ತಿಳಿದಿದ್ದರು. ಆದರೆ ಈಗ ಇನ್ನೂ ಬೃಹತ್ ಸೌರ ಜ್ವಾಲೆಗಳ ಉತ್ಸರ್ಜನೆ, ಹೆಚ್ಚುತ್ತಾ ಹೆಚ್ಚುತ್ತಾ , 

ನೂರುವರ್ಷದಲ್ಲಿ ಕಾಣದ ಶಕ್ತಿಯುತ ಸೌರ ಜ್ವಾಲೆಗಳು (ಕಾಸ್ಮಿಕ್ ಮಾಸ್ ಇಜೆಕ್ಷನ್ ) ಸಿಡಿಯುತ್ತಲೇ ಇವೆ. 

ಸೂರ್ಯನ ಈ ವಿಪರೀತ ನರ್ತನಕ್ಕೂ ಭೂಮಿಯಲ್ಲಿ ಸಂಭವಿಸುತ್ತಿರುವ ಪ್ರಕೃತಿ ವಿಕೋಪಕ್ಕೂ ಸಂಬಂಧವಿದೆಯೇ? 

ಹೌದು . ಎನ್ನುತ್ತಿದ್ದಾರೆ ವಿಜ್ಞಾನಿಗಳು.

ಇಂದು ಕಾರ್ತೀಕದ ದೀಪೋತ್ಸವದ ಕಾಲದಲ್ಲಿ ದಕ್ಷಿಣ ಭಾರತದ ಇಕ್ಕೆಲೆಗಳಲ್ಲಿ ಎರಡೆರಡು ಚಂಡ ಮಾರುತಗಳು. ಬಂಗಾಳಕೊಲ್ಲಿಯಲ್ಲಿ ಹಾಗೂ ಹಿಂದೂ ಮಹಾಸಾಗರದಿಂದ ಹೊರಟು ಭಾರತದ ಪಶ್ಚಿಮ ಕರಾವಳಿಯಲ್ಲಿ ದೀಪಾವಳಿ ಹಬ್ಬದ ನೆಲಚಕ್ರ ಸುರು ಸುರು ಸುತ್ತುವಂತೆ ತಿರುಗುತ್ತಾ ಸಾಗುತ್ತಿವೆ. ಬಂಗಾಳಕೊಲ್ಲಿಯಲ್ಲಿ ಈ ಸಮಯದಲ್ಲಿ ನಡೆಯುವುದು ಮಾಮೂಲಿ ಚಂಡಮಾರತವಿದ್ದರೂ ಅರಬೀ ಸಮುದ್ರದ ಚಂಡಮಾರುತ ಆಶ್ಚರ್ಯ .ಈಗ ಇದು ಪ್ರತೀ ವರ್ಷ ಸರ್ವೇ ಸಾಮಾನ್ಯವಾಗುತ್ತಿವೆ. ಒಂದು ಕಾಲದಲ್ಲಿ ಪರಶುರಾಮ ಸೃಷ್ಟಿಯ ಪಶ್ಚಿಮ ಕರಾವಳಿತೀರದಲ್ಲಿ ಚಂಡಮಾರುತವೇಳುವುದಿಲ್ಲ ಅಂತಿತ್ತು. ಆದರೆ ಈಗೀಗ ಎಲ್ಲವೂ ತಲೆಕೆಳಗಾಗಿದೆ. ಅದೇನು ಅದೃಷ್ಟವೂ ಪಶ್ಚಿಮ ಕರಾವಳಿ ತೀರದವರದು. ಪಶ್ಚಿಮ ಘಟ್ಟ, ಪಶ್ಚಿಮ ಸಮುದ್ರದಿಂದ ಬರುವ ಚಂಡಮಾರುತವನ್ನು ಒಳ ಬರಬಿಡದೇ ಉತ್ತರದ ಮುಂಬಯಿ ಹಾಗೂ ಗುಜರಾತಿಗೆ ರಾಚಿಸುತ್ತಿದೆ.

ರಿಂಗ್ ಆಫ್ ಫಯರ್ : ಆಸ್ಟ್ಲೇಲಿಯಾ ಪೂರ್ವ ಕರಾವಳಿಂದ ಪ್ರಾರಂಭಿಸಿ ಜಪಾನ್ , ಚೈನಾ ಮೇಲಿಂದ ರಶ್ಯ ಸವರಿಕೊಂಡು ಅಲಾಸ್ಕಾದ ಮೂಲಕ ಕೆನೆಡಾ ಹಾಗೂ ದಕ್ಷಿಣ ಅಮೇರಿಕಾದ ಪಶ್ಚಿಮ ಭಾಗದವರೆಗೆ ಅಬ್ಬಾ ಅದೆಷ್ಟು ಭೂಕಂಪನಗಳು ಈ ವರ್ಷ. ಈ ಪಥವನ್ನು “ ರಿಂಗ್ ಆಫ್ ಫಯರ್ “ ಎನ್ನುವರು. ಇದೊಂದು ತೇಲುವ ಸುಮಾರು 50 ಕಿಮೀ ದಪ್ಪದ ಭೂ ಮೇಲ್ಪದರದ ಪ್ಲೇಟ್. ಪ್ಲೇಟ್ ಟೆಕ್ಟೋನಿಕ್ಸ್ . ಹೀಗೆ ಅನೇಕ ಪ್ಲೇಟ್ಗಳಂದ ಭೂಮಿ ಆವೃತವಾಗಿದೆ . ಈ ತೇಲುವ ಪ್ಲೇಟ್ಗಳು ತಾಗಿ ಘರ್ಷಣೆ ಯಾದಾಗ ಭೂಮಿ ಆ ಸ್ಥಳದಲ್ಲಿ ಕಂಪಿಸುತ್ತದೆ. ಕಂಪನದಿಂದ ಚಿಮ್ಮುವ ಪ್ಲಾಸ್ಮಾದ ಜ್ವಾಲಾಮುಖಿ. ದಶದಿಶೆಗೆ ಹಾರುವ ಶಕ್ತಿಯುತ ಕಣ ಗಳ ಪ್ರವಾಹ. ಈ ಪದರಗಳ ಕಂಪನದ ಘರ್ಶಣೆ ಸಮುದ್ರದಲ್ಲಿ ಆದರೆ ಸುನಾಮಿ ಸೃಷ್ಟಿ. 

ಭೂಮಿಯಲ್ಲಿ ನಡೆಯುತ್ತಿರುವ ಈ ಕ್ರಿಯೆಗಳಿಗೂ ಸೂರ್ಯನ ಕಲೆಗಳ ಆವರ್ತಕ್ಕೂ ಸಂಬಂಧವಿರಬಹುದೆಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸೂರ್ಯನ ಕಲೆಗಳು ಹೆಚ್ಚಿದ್ದಾಗ ಭೂ ಕಂಪನಗಳೂ ಹೆಚ್ಚು.ಸದ್ಯ ಈಗ ಅದು ತೀವ್ರತರವಾಗಿ ನಡೆಯುತ್ತಿದೆ.


ಇದೇನಿದು ಕಂಡಕಂಡಲ್ಲಿ ಮೇಘಸ್ಫೋಟ: 

ಹಿಮಾಲಯ ತಪ್ಪಲಲ್ಲಿ ಮೇಘಸ್ಫೋಟ ಆಗಾಗ ಕೇಳಿ ಬರುತ್ತಿತ್ತು . ಈಗ ದಕ್ಷಿಣ ಭಾರತದಲ್ಲೂ ಅಲ್ಲಲ್ಲಿ ಮೇಘ ಸ್ಫೋಟ ಕಂಡುಬರುತ್ತಿದೆ. ಕುಶಾಲನಗರದಲ್ಲಿ ಮಳೆ ಇಲ್ಲ , ಶಿರಾಡಿ ಘಾಟಿಕೆಳಗೂ ಮಳೆ ಇಲ್ಲ, ಘಾಟಿಯ ಮಧ್ಯದಲ್ಲಿ ಧಾರಾಕಾರಛಡಿಮಳೆ, ರಸ್ತೆಯಲ್ಲಿ ನೆರೆ.

ಬರೇ 5 ಕಿಮೀ ಆಚೆ ಈಚೆ ಎಲ್ಲೂ ಮಳೆ ಇರುವುದಿಲ್ಲ ಮಧ್ಯದಲ್ಲಿ ನೀರೇ ನೀರು. ಧಾರಾಕಾರ ಮಳೆ. ಈ ಮೇಘಸ್ಫೋಟಗಳಿಗೆ ಕಾರಣ ಆಶ್ಚರ್ಯ , ಈಗ ಅಲ್ಲಲ್ಲಿ ನಡೆಯುತ್ತಿರುವ ಜ್ವಾಲಾಮುಖಿಗಳು, ಅವುಗಳಿಂದ ಚಿಮ್ಮಿದ ಕಣಗಳ ಪ್ರವಾಹ. ಅವು ಸಾವಿರ ಸಾವಿರ ಕಿಮೀ ದೂರದಲ್ಲೂ ಗುಂಪು ಗುಂಪಾಗಿದ್ದಲ್ಲಿ ಅಲ್ಲೇ ಮೋಡ ಕೇಂದ್ರೀಕರಿಸಿ ಮೇಘ ಸ್ಫೋಟ ಎರ್ಪಡಿಸುತ್ತಿವೆ. 

ಈ ಎಲ್ಲ ಪೃಕೃತಿಯ ಕುಣಿತದಲ್ಲಿ ಸೂತ್ರಧಾರ ಸೂರ್ಯ, ನಟ ನಮ್ಮ ಭೂಮಿ. 

“ನಮಸವಿತ್ರೇ ಜಗದೇಕ ಚಕ್ಷುಶೇ, ಜಗತ್ ಪ್ರಸೂತಿ ಸ್ಥಿತಿ ನಾಶ ಹೇತವೇ. 

ಏ ಸೂರ್ಯದೇವ, ನಮ್ಮ ಮೇಲೆ ಕರುಣೆ ಇರಲಿ ತಂದೆ.

~ಡಾ ಎ ಪಿ ಭಟ್ ಉಡುಪಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು