ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ತನ್ನ 33ನೇ ಘಟಿಕೋತ್ಸವಕ್ಕೆ ಸಜ್ಜಾಗಿದ್ದು, ಸಮಾರಂಭವು ಇದೇ ನವೆಂಬರ್ 21 ರಿಂದ 23ರವರೆಗೆ ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ನಡೆಯಲಿದೆ. ಎರಡನೇ ಹಂತದ ಘಟಿಕೋತ್ಸವ ಸಮಾರಂಭವು ಬೆಂಗಳೂರು ಕ್ಯಾಂಪಸ್‌ನಲ್ಲಿ ನವೆಂಬರ್ 29 ಮತ್ತು 30 ರಂದು ನಡೆಯಲಿದೆ. ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯಾದ ಮಾಹೆಯು ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (NIRF) 2025ರಲ್ಲಿ ವಿಶ್ವವಿದ್ಯಾಲಯ ವಿಭಾಗದಲ್ಲಿ 3ನೇ ಸ್ಥಾನ ಪಡೆದಿದೆ.
ಮಣಿಪಾಲ ಮತ್ತು ಬೆಂಗಳೂರು ಕ್ಯಾಂಪಸ್‌ನಲ್ಲಿ ನಡೆಯುವ ಈ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಹಲವು ಶೈಕ್ಷಣಿಕ ದಿಗ್ಗಜರು, ಕ್ಷೇತ್ರ ಪರಿಣತರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಮಣಿಪಾಲದಲ್ಲಿ 6,148 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ನವೆಂಬರ್ 29 ರಂದು ಬೆಂಗಳೂರಿನಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಮಾಹೆ ಬೆಂಗಳೂರು ಕ್ಯಾಂಪಸ್‌ನ 917 ವಿದ್ಯಾರ್ಥಿಗಳಿಗೆ ಹಾಗೂ ನವೆಂಬರ್ 30ರ ಕಾರ್ಯಕ್ರಮದಲ್ಲಿ ಮಾಹೆ ಆನ್‌ಲೈನ್‌ನ 1,385 ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುವುದು. ಸಮಾರಂಭದಲ್ಲಿ ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಿ, ಚಿನ್ನದ ಪದಕಗಳನ್ನು ನೀಡುವುದರ ಜೊತೆಗೆ ಸಂಶೋಧನಾ ವಿಭಾಗದಲ್ಲಿ ಗಣನೀಯ ಕೊಡುಗೆ ನೀಡಿದ ಸಾಧಕರಿಗೆ ಡಾಕ್ಟರೇಟ್ ಪ್ರದಾನವನ್ನೂ ಮಾಡಲಾಗುವುದು.
ಮಣಿಪಾಲದಲ್ಲಿ ನಡೆಯುವ 3 ದಿನಗಳ ಸಮಾರಂಭದಲ್ಲಿ ದೆಹಲಿ ಎನ್‌ಸಿಆರ್‌ನ ಶಿವ ನಾದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅನನ್ಯಾ ಮುಖರ್ಜಿ, ದೆಹಲಿಯ ಗೂಗಲ್ ಕ್ಲೌಡ್‌ನ ಏಷ್ಯಾ ಪೆಸಿಫಿಕ್ ಸ್ಟ್ರಾಟಜೀಸ್ ಇನಿಶಿಯೇಟಿವ್ಸ್‌ನ ಉಪಾಧ್ಯಕ್ಷ ಶ್ರೀ ಬಿಕ್ರಮ್ ಸಿಂಗ್ ಬೇಡಿ ಮತ್ತು ಗ್ಲಾಸ್ಗೊದ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಅಂಡ್ ಸರ್ಜನ್ಸ್‌ನ ಅಧ್ಯಕ್ಷರಾದ ಪ್ರೊಫೆಸರ್ ಹ್ಯಾನಿ ಎಟೀಬಾ ಅವರು ಮುಖ್ಯ ಅತಿಥಿಗಳಾಗಿ ಭಾಗಿಯಾಗಿ ಸಂದರ್ಭದ ಸೊಗಸು ಹೆಚ್ಚಿಸಲಿದ್ದಾರೆ. ಇದೇ ರೀತಿ ಬೆಂಗಳೂರು ಕ್ಯಾಂಪಸ್‌ನಲ್ಲಿ ನಡೆಯಲಿರುವ ಎರಡು ದಿನಗಳ ಸಮಾರಂಭದಲ್ಲಿ ಆಕ್ಸಿಸ್ ಬ್ಯಾಂಕ್‌ನ ಸಮೂಹ ಕಾರ್ಯನಿರ್ವಾಹಕಿ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥೆ ಶ್ರೀಮತಿ ರಾಜ್‌ಕಮಲ್ ವೆಂಪತಿ ಮತ್ತು ಬೆಂಗಳೂರಿನ ರೆವೊಲ್ಯೂಟ್‌ನ ಸಿಇಒ ಶ್ರೀಮತಿ ಪರೋಮಾ ಚಟರ್ಜಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮಣಿಪಾಲದಲ್ಲಿ ಈ ಕುರಿತು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಮಾಹೆಯ ಉಪಕುಲಾಧಿಪತಿ ಡಾ ಎಚ್ ಎಸ್ ಬಲ್ಲಾಳ್, ʼವಿವಿಧ ವಿಭಾಗಗಳಲ್ಲಿನ ವಿಶೇಷ ಸಾಧನೆಗಳನ್ನು ಗುರುತಿಸುವ ಹಾಗೂ ಬದಲಾಗುತ್ತಿರುವ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಮಾಹೆಯ ಬದ್ಧತೆಯನ್ನು ಈ ಸಮಾರಂಭ ಪ್ರತಿಬಿಂಬಿಸಲಿದೆʼ ಎಂದರು.
ಮೂರು ದಶಕಗಳಿಂದ ಮಾಹೆಯ ವಿದ್ಯಾರ್ಥಿಗಳು ತೋರುತ್ತಾ ಬಂದಿರುವ ಶೈಕ್ಷಣಿಕ ಸಾಧನೆ, ಬದ್ಧತೆ, ದೃಢತೆ, ಕಲ್ಪನಾಶೀಲತೆಗಳ ಸಂಭ್ರಮಾಚರಣೆಯೇ ಈ ಘಟಿಕೋತ್ಸವʼ ಎಂದು ವಿಎಸ್‌ಎಂ ನಿವೃತ್ತ, ಕುಲಪತಿ ಲೆ. ಜ. (ಡಾ.) ಎಂ ಡಿ ವೆಂಕಟೇಶ್ ಹೇಳಿದರು.
ಮೂರೂ ದಿನವೂ ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ ಸಮಾರಂಭ ಶುರುವಾಗಲಿದೆ. ಪ್ರಾರ್ಥನೆ, ಬಳಿಕ ಮುಖ್ಯ ಅತಿಥಿಗಳ ಭಾಷಣ, ಪದವಿ ಪ್ರದಾನ ನಡೆಯಲಿವೆ. ನಂತರ ವಿಶ್ವವಿದ್ಯಾಲಯದ ಪ್ರಮುಖರಿಂದ ಅಭಿನಂದನಾ ಸಂದೇಶ ಇರುತ್ತದೆ. ನಿಪುಣ ವೃತ್ತಿಪರರನ್ನು ಮತ್ತು ನಾಳೆಯ ನಾಯಕರನ್ನು ರೂಪಿಸುತ್ತಿರುವ ಮಾಹೆಯ ಶೈಕ್ಷಣಿಕ ಹಿರಿಮೆ, ಅದ್ವಿತೀಯ ಶೈಕ್ಷಣಿಕ ಪರಿಸರ ಹಾಗೂ ಜಾಗತಿಕ ದೃಷ್ಟಿಕೋನಗಳತ್ತ ಈ ಸಮಾರಂಭವು ಬೆಳಕು ಚೆಲ್ಲಲಿದೆ.
ಪ್ರತಿ ಪದವಿಯ ಹಿಂದೆಯೂ ಇರುವ ಶ್ರಮ, ಕಲಿಕೆ ಹಾಗೂ ಅರ್ಥಪೂರ್ಣ ಶೈಕ್ಷಣಿಕ ಬೆಳವಣಿಗೆಯನ್ನು ಗುರುತಿಸಿ ಗೌರವಿಸಲಿರುವ ಮೂರು ದಿನಗಳ ಘಟಿಕೋತ್ಸವದಲ್ಲಿಈ ವರ್ಷ 4,950 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದು ಪದವಿ ಪಡೆಯುತ್ತಿದ್ದರೆ, 1,198 ವಿದ್ಯಾರ್ಥಿಗಳು ಪೋಸ್ಟಲ್ ಮೂಲಕ ಸ್ವೀಕರಿಸುತ್ತಿದ್ದಾರೆ. ಬೆಂಗಳೂರು ಕ್ಯಾಂಪಸ್‌ನ ಘಟಿಕೋತ್ಸವದಲ್ಲಿ 728 ವಿದ್ಯಾರ್ಥಿಗಳು ನೇರವಾಗಿ ಹಾಗೂ 189 ವಿದ್ಯಾರ್ಥಿಗಳು ಪೋಸ್ಟ್‌ನಲ್ಲಿ ಪದವಿ ಸ್ವೀಕರಿಸಲಿದ್ದಾರೆ. ಇನ್ನು ಮಾಹೆ ಆನ್‌ಲೈನ್‌ನ 625 ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗಿಯಾಗಿ ಪದವಿ ಪಡೆಯುತ್ತಿದ್ದರೆ, 760 ಪೋಸ್ಟಲ್ ಮೂಲಕ ಸ್ವೀಕರಿಸುತ್ತಿದ್ದಾರೆ. ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಮ್ಯಾನೇಜ್ ಮೆಂಟ್, ಸಮಾಜಶಾಸ್ತ್ರ ಹೀಗೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಮಾಡಿರುವ ಸಾಧನೆ ಮಾಹೆಯ ಶೈಕ್ಷಣಿಕ ಪರಿಸರದ ಆಳ ಅಗಲಗಳನ್ನು ಪರಿಚಯಿಸುತ್ತದೆ. ಈ ಘಟಿಕೋತ್ಸವ ಬರೀ ವಿದ್ಯಾರ್ಥಿಗಳು ಪದವಿ ಮುಗಿಸಿದ್ದರ ಸಂಕೇತವಷ್ಟೇ ಅಲ್ಲದೆ, ಮಾಹೆ ನೀಡಿದ ಸಮಗ್ರ ಜ್ಞಾನದ ಬಲದಲ್ಲಿ ವಿದ್ಯಾರ್ಥಿಗಳು ಮುಂದೆ ಹಿಡಿಯಲಿರುವ ವೃತ್ತಿಪರ ಅಥವಾ ಸಂಶೋಧನಾ ದಾರಿಗಳಿಗೆ ಚೆಲ್ಲಿದ ಬೆಳಕೂ ಆಗಿರಲಿದೆ.
ಮುಖ್ಯ ಅತಿಥಿಗಳ ಪರಿಚಯ
ಪ್ರೊ. ಅನನ್ಯಾ ಮುಖರ್ಜಿ, ಕುಲಪತಿ, ಶಿವ ನಾದರ್ ವಿಶ್ವವಿದ್ಯಾಲಯ, ದೆಹಲಿ-ಎನ್‌ಸಿಆರ್
ಉನ್ನತ ಶಿಕ್ಷಣದಲ್ಲಿ ಪರಿವರ್ತನಾ ನಾಯಕತ್ವಕ್ಕಾಗಿ 2024ರ CREATE ಗ್ಲೋಬಲ್ ಲೀಡರ್‌ಶಿಪ್ ಪ್ರಶಸ್ತಿ ಮತ್ತು ದೂರದೃಷ್ಟಿಯ ನಾಯಕತ್ವಕ್ಕಾಗಿ 2025ರ ಎಕನಾಮಿಕ್ ಟೈಮ್ಸ್ ಎಜುಕೇಶನ್ ಎಕ್ಸಲೆನ್ಸ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಮನ್ನಣೆಗಳನ್ನು ಪ್ರೊ. ಮುಖರ್ಜಿ ಪಡೆದಿದ್ದಾರೆ. 2024 ಮತ್ತು 2022 ಎರಡರಲ್ಲೂ ಬಿಸಿನೆಸ್ ವರ್ಲ್ಡ್ ಶಿಕ್ಷಣದಲ್ಲಿ 15 ಅತ್ಯಂತ ಪ್ರಭಾವಶಾಲಿ ಮಹಿಳೆಯರಲ್ಲಿ ಮತ್ತು 2021ರಲ್ಲಿ ಕೆನಡಾದ 100 ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಇವರು ಸ್ಥಾನ ಪಡೆದಿದ್ದಾರೆ. ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಮತ್ತು ಜಾದವ್‌ಪುರ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಬಿಎ ಮತ್ತು ಎಂಎ ಪದವಿಗಳನ್ನು ಪಡೆದಿದ್ದಾರೆ. ಅವರ ಶೈಕ್ಷಣಿಕ ಕೆಲಸವು ಅಂತರರಾಷ್ಟ್ರೀಯ ಅಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಒಳಗೊಂಡಿದೆ, ಇದು ಭಾರತ ಮತ್ತು ದಕ್ಷಿಣ ಏಷ್ಯಾವನ್ನು ಕೇಂದ್ರೀಕರಿಸಿದ್ದಾಗಿದೆ.
ಶ್ರೀ ಬಿಕ್ರಮ್ ಸಿಂಗ್ ಬೇಡಿ, ಏಷ್ಯಾ ಪೆಸಿಫಿಕ್ ಸ್ಟ್ರಾಟೆಜಿಕ್ ಇನಿಶಿಯೇಟಿವ್ಸ್, ಗೂಗಲ್ ಕ್ಲೌಡ್, ದೆಹಲಿ
ಪ್ರಸಿದ್ಧ ತಂತ್ರಜ್ಞಾನ ನಾಯಕ ಮತ್ತು ಮಾಹೆಯ ಹೆಮ್ಮೆಯ ಹಳೆಯ ವಿದ್ಯಾರ್ಥಿಯಾದ ಬೇಡಿ ಅವರು, ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನದಲ್ಲಿ ತಮ್ಮ ಬಿಇ ಪದವಿಯನ್ನು ಪಡೆದಿದ್ದಾರೆ (1989–1993). ಏಷ್ಯಾ-ಪೆಸಿಫಿಕ್ ಪ್ರದೇಶದಾದ್ಯಂತ ಕಾರ್ಯತಂತ್ರದ ನಾವೀನ್ಯತೆ ಮತ್ತು ಕ್ಲೌಡ್ ತಂತ್ರಜ್ಞಾನಗಳಲ್ಲಿ ಅವರಿಗೆ ವ್ಯಾಪಕ ಅನುಭವವಿದೆ. ಗೂಗಲ್‌ಗೆ ಸೇರುವ ಮೊದಲು, ಅವರು ಭಾರತದಲ್ಲಿ AWS ವ್ಯವಹಾರವನ್ನು ಸ್ಥಾಪಿಸಿದರು ಮತ್ತು ಆರು ವರ್ಷಗಳ ಕಾಲ ಭಾರತ ಮತ್ತು ದಕ್ಷಿಣ ಏಷ್ಯಾದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಅವರು IBM ಮತ್ತು Oracle ನಲ್ಲಿ ವಿವಿಧ ನಾಯಕತ್ವ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾರತದಲ್ಲಿ ಅಮೆಜಾನ್ ವೆಬ್ ಸೇವೆಗಳನ್ನು ಸ್ಥಾಪಿಸಿ ಮತ್ತು ಆರು ವರ್ಷಗಳ ಕಾಲ ಅದನ್ನು ಮುನ್ನಡೆಸಿದ್ದಾರೆ.
ಪ್ರೊ. (ಡಾ.) ಹ್ಯಾನಿ ಎಟೀಬಾ, ಗ್ಲ್ಯಾಸ್ಗೋದ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಅಂಡ್ ಸರ್ಜನ್ಸ್ ಅಧ್ಯಕ್ಷರು
ಪ್ರೊ. ಎಟೀಬಾ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಮತ್ತು ಗ್ಲಾಸ್ಗೊದ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಅಂಡ್ ಸರ್ಜನ್ಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮೊದಲ ಅಂತರರಾಷ್ಟ್ರೀಯ ವೈದ್ಯಕೀಯ ಪದವೀಧರರು. 20 ವರ್ಷಗಳಿಗೂ ಹೆಚ್ಚು ಕಾಲದ ಸೇವೆಯಲ್ಲಿ ಅವರು ಅಂತರರಾಷ್ಟ್ರೀಯ ನಿರ್ದೇಶಕ ಮತ್ತು ಉಪಾಧ್ಯಕ್ಷ (ವೈದ್ಯಕೀಯ) ಸ್ಥಾನಗಳನ್ನು ನಿರ್ವಹಿಸಿದ್ದಾರೆ. ಅವರು ಸ್ಕಾಟಿಷ್ ಕಾರ್ಡಿಯಾಕ್ ಸೊಸೈಟಿಯ ಅಧ್ಯಕ್ಷರು ಸೇರಿದಂತೆ ವಿವಿಧ ನಾಯಕತ್ವ ಸ್ಥಾನಗಳನ್ನು ಸಹ ಹೊಂದಿದ್ದಾರೆ. ಪ್ರಸ್ತುತ ಗೋಲ್ಡನ್ ಜುಬಿಲಿಯ ಅಸೋಸಿಯೇಟ್ ಮೆಡಿಕಲ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಜತೆಗೆ ಗ್ಲಾಸ್ಗೊ ವಿಶ್ವವಿದ್ಯಾಲಯದಲ್ಲಿ ಗೌರವ ಪ್ರಾಧ್ಯಾಪಕರಾಗಿದ್ದಾರೆ. ಮೂಲತಃ ಕೈರೋದವರಾದ ಇವರು ಕೈರೋದ ಅಲ್-ಅಝರ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದಿದ್ದಾರೆ.
ರಾಜ್‌ಕಮಲ್ ವೆಂಪತಿ, ಆಕ್ಸಿಸ್ ಬ್ಯಾಂಕ್‌ನ ಗ್ರೂಪ್ ಎಕ್ಸಿಕ್ಯೂಟಿವ್ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥರು
ಶ್ರೀಮತಿ ರಾಜ್‌ಕಮಲ್ ವೆಂಪತಿ ಅವರು ಆಕ್ಸಿಸ್ ಬ್ಯಾಂಕಿನಲ್ಲಿ ಗ್ರೂಪ್ ಎಕ್ಸಿಕ್ಯೂಟಿವ್ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದು, ನಿರ್ವಹಣಾ ಸಮಿತಿಯ ಸದಸ್ಯರೂ ಆಗಿದ್ದಾರೆ. ಭವಿಷ್ಯಕ್ಕೆ ಪೂರಕವಾದ ಕೆಲಸದ ಸ್ಥಳವನ್ನು ಸೃಷ್ಟಿಸುವ ಆಶಯ ಹೊಂದಿದ್ದಾರೆ. ಅವರು ಆಕ್ಸಿಸ್ ಬ್ಯಾಂಕಿನ ವೈವಿಧ್ಯತೆ, ಇಕ್ವಿಟಿ ಮತ್ತು ಸೇರ್ಪಡೆ ಕಾರ್ಯಕ್ರಮಗಳು ಮತ್ತು ಗಿಗಾ ಸೇರಿದಂತೆ ವಿವಿಧ ಕಾರ್ಯವನ್ನು ಮುನ್ನಡೆಸಿದ್ದಾರೆ. ಶ್ರೀಮತಿ ರಾಜ್‌ಕಮಲ್ ಅವರು ಈ ಹಿಂದೆ ಐಸಿಐಸಿಐ ಲೊಂಬಾರ್ಡ್, ಹೆವಿಟ್ ಅಸೋಸಿಯೇಟ್ಸ್, ಜಿಇ ಕ್ಯಾಪಿಟಲ್ ಮತ್ತು ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್‌ನಲ್ಲಿ ಪ್ರಮುಖ ಹುದ್ದೆಯನ್ನು ನಿರ್ವಹಿಸಿದ್ದಾರೆ ನಾಯಕತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯ ಮತ್ತು ಎಕ್ಸ್‌ಎಲ್‌ಆರ್‌ಐ ಜಮ್ಶೆಡ್‌ಪುರದಲ್ಲಿ ವಿದ್ಯಾಭ್ಯಾಸ ಮಾಡಿರುವ ಇವರು ಎಕ್ಸ್‌ಎಲ್‌ಆರ್‌ಐ ಡಿಸ್ಟಿಂಗ್ವಿಶ್ಡ್ ಅಲುಮ್ನಸ್ ಪ್ರಶಸ್ತಿಯನ್ನು ಪಡೆದಿದ್ದಾರೆ ಮತ್ತು ಮಾನವ್ ರಚನಾ ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಿಸರ್ಚ್ ಅಂಡ್ ಸ್ಟಡೀಸ್‌ನಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.
ಪರೋಮಾ ಚಟರ್ಜಿ, ಸಿಇಒ - ರೆವೊಲುಟ್ ಇಂಡಿಯಾ
ಶ್ರೀಮತಿ ಪರೋಮಾ ಚಟರ್ಜಿ ಅವರು ರೆವೊಲ್ಯೂಟ್ ಇಂಡಿಯಾದ ಸಿಇಒ ಆಗಿದ್ದು, ಕಂಪನಿಯ ಉತ್ಪನ್ನ ಕಾರ್ಯತಂತ್ರ ಸೇರಿದಂತೆ ಅನೇಕ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಭಾರತವು ರೆವೊಲ್ಯೂಟ್‌ಗೆ (Revolut) ಪ್ರಮುಖ ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರವಾಗಿ ಹೊರಹೊಮ್ಮಲು ಹಾಗೂ ಅದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವತ್ತಾ ಕಾರ್ಯಪ್ರವೃತ್ತರಾಗಿದ್ದಾರೆ. ಫಿನ್‌ಟೆಕ್, ಟೆಲಿಕಾಂ ಮತ್ತು ಇ-ಕಾಮರ್ಸ್‌ನಲ್ಲಿ ಸುಮಾರು 20 ವರ್ಷಗಳ ನಾಯಕತ್ವದ ಅನುಭವವನ್ನು ಹೊಂದಿದ್ದಾರೆ, ಲೆಂಡಿಂಗ್‌ಕಾರ್ಟ್, ಏರ್‌ಟೆಲ್ ಮನಿ, ಫ್ಲಿಪ್‌ಕಾರ್ಟ್ ಮತ್ತು ವಯಾ.ಕಾಮ್‌ನಲ್ಲಿ ಹಿರಿಯ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಐಐಎಂ ಲಕ್ನೋ ಮತ್ತು ಕೋಲ್ಕತ್ತಾದ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಿಂದ ಪದವಿ ಪಡೆದಿರುವ ಇವರು, ಭಾರತದಲ್ಲಿ ಡಿಜಿಟಲ್ ಹಣಕಾಸು ರೂಪಿಸುವಲ್ಲಿ ಮತ್ತು ಆರ್ಥಿಕ ಸೇರ್ಪಡೆ ಮತ್ತು ತಂತ್ರಜ್ಞಾನ-ನೇತೃತ್ವದ ಬೆಳವಣಿಗೆಗೆ ಕಾರಣವಾಗುವ ಬಲವಾದ ತಂಡಗಳನ್ನು ಕಟ್ಟುವಲ್ಲಿ ನಿಪುಣರು.

0 ಕಾಮೆಂಟ್‌ಗಳು