Header Ads Widget

ಮೂಡುಪೆರಂಪಳ್ಳಿ ನವಚೈತನ್ಯ ಯುವಕ ಮಂಡಲದ 40 ನೇ ವಾರ್ಷಿಕೋತ್ಸವ : ಡಾ. ತಲ್ಲೂರು ಅವರಿಗೆ ವಜ್ರ ಚೈತನ್ಯ ಪ್ರಶಸ್ತಿ ಪ್ರದಾನ

ಉಡುಪಿ: ಸಂಘ ಸಂಸ್ಥೆಗಳಿಂದ ಉತ್ತಮ ಕಾರ್ಯಗಳು ನಡೆದರೆ ಅದು ಸಮಾಜದ ಉನ್ನತಿ ಕಾರಣ ಆಗುತ್ತದೆ ಎಂದು ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಅವರು ಶುಕ್ರವಾರ ಮೂಡುಪೆರಂಪಳ್ಳಿಯ ವಿಶ್ವಪ್ರಿಯ ಬಯಲು ರಂಗಮಂಟಪದಲ್ಲಿ ನಡೆದ ನವ ಚೈತನ್ಯ ಯುವಕ ಮಂಡಲದ 40ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಎಲ್ಲಿ ಸಜ್ಜನರಿಗೆ ಗೌರವ ಆದರಗಳು ನಡೆಯುತ್ತಿವೆ ಎಂದಾದರೆ ಆ ಸಂಘಗಳು ಉತ್ತಮ ಕಾರ್ಯಗಳನ್ನು ನಡೆಸುತ್ತಿವೆ ಎಂದರ್ಥ. ಮೂಡುಪೆರಂಪಳ್ಳಿ ನವಚೈತನ್ಯ ಯುವಕ ಮಂಡಲದ 40 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವುದು ದೊಡ್ಡ ಸಾಧನೆಯೇ ಸರಿ. ಆರಂಭದಿಂದಲೂ ಈ ಸಂಘ ಅದಮಾರು ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದೆ. ನಮ್ಮ ಗುರುಗಳಿಗೂ ಈ ಸಂಘದ ಮೇಲೆ ವಿಶೇಷ ಆಧಾರ ಅಭಿಮಾನ ಇದೆ, ಮುಂದೆಯೂ ಈ ಸಂಘಟನೆ ಉತ್ತಮ ಕಾರ್ಯಗಳನ್ನು ಮಾಡಿಕೊಂಡು ಸಮಾಜಕ್ಕೆ ಮಾದರಿ ಆಗಲಿ ಎಂದು ಅವರು ಹಾರೈಸಿದರು. 

ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ, ಮೂಡು ಪೆರಂಪಳ್ಳಿ ಯುವಕ ಮಂಡಲ ಹೆಸರಿಗೆ ತಕ್ಕಂತೆ ನವ ಚೈತನ್ಯದಿಂದ ಬೆಳೆಯುತ್ತಿರುವುದು ಸಂತೋಷದ ಸಂಗತಿ. ಈ ಸಂಘದ ಉತ್ತಮ ಕಾರ್ಯಗಳು ಸಮಾಜ ಮುಖಿ ಆಗಿರುವುದರಿಂದಲೇ ಅದಮಾರು ಶ್ರೀಗಳು 5 ಸೆಂಟ್ಸ್ ಜಾಗ ಕೇಳಿದಾಗ 42 ಸೆಂಟ್ಸ್ ಜಾಗವನ್ನು ನೀಡಿ ಔದಾರ್ಯವನ್ನು ತೋರಿದ್ದಾರೆ.

ಅದಮಾರು ಮಠದ ಸಾಮಾಜಿಕ ಸ್ಪಂದನೆ ಹಾಗೂ ಸಾಮಾಜಿಕ ಕಾರ್ಯಗಳು ಅಗ್ರಗಣ್ಯವಾಗಿವೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸಂಘದ ವತಿಯಿಂದ *ವಜ್ರ ಚೈತನ್ಯ ಪ್ರಶಸ್ತಿ* ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ನವಚೈತನ್ಯ ಯುವಕ ಮಂಡಳ ನಡೆಸುತ್ತಿರುವ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಇತರ ಯುವಕ ಮಂಡಲಗಳಿಗೆ ಮಾದರಿಯಾಗಿವೆ. ಉತ್ತಮ ಸೇವೆ ಸಲ್ಲಿಸುವ ಯುವಕ ಸಂಘಗಳಿಗೆ ಸಮಾಜದ ಪ್ರೋತ್ಸಾಹ ಸದಾ ಸಿಗುತ್ತದೆ ಎಂದರು. 

ಜಿಲ್ಲೆಯಲ್ಲಿ ಜನಪ್ರಿಯವಾಗಿರುವ ಯಕ್ಷಗಾನ ತರಬೇತಿ ಯೋಜನೆ ಮಕ್ಕಳಿಗೆ ಇಷ್ಟೊಂದು ವ್ಯಾಪಕವಾಗಲು ಕಾರಣ ಮಾಜಿ ಶಾಸಕ ರಘುಪತಿ ಭಟ್ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಪ್ರಾರಂಭಿಸಿದ ಯಕ್ಷ ಶಿಕ್ಷಣ. ಅವರ ದೂರದೃಷ್ಟಿತ್ವದ ಕಾರಣದಿಂದ ಅತೀ ಹೆಚ್ಚು ವಿದ್ಯಾರ್ಥಿಗಳು ಯಕ್ಷಗಾನವನ್ನು ಕಲಿಯುತ್ತಿದ್ದಾರೆ. ಇದರ ಶ್ರೇಯಸ್ಸು ರಘುಪತಿ ಭಟ್ ಹಾಗೂ ಯಕ್ಷಗಾನ ಕಲಾರoಗಕ್ಕೆ ಸಲ್ಲಬೇಕು ಎಂದ ಅವರು ರಘುಪತಿ ಭಟ್ ಅವರ ಈ ಸಾಧನೆಯಿಂದ ಪ್ರೇರಣೆ ಪಡೆದ ಜಿಲ್ಲೆಯ ಅನ್ಯ ಶಾಸಕರು ಕೂಡ ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಯಕ್ಷಗಾನವನ್ನು ಮಕ್ಕಳಿಗೆ ಕಲಿಸಲು ಮುಂದಾಗಿರುವುದು ಸಂತೋಷದ ವಿಚಾರ. ಹಾಗೆಯೇ ಯಕ್ಷಗಾನದ ಇನ್ನೊಂದು ಪ್ರಕಾರವಾದ ಮೂಡಲಪಾಯ ಯಕ್ಷಗಾನಕ್ಕೂ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ ಎಂದರು.

ನವಚೈತನ್ಯ ಯುವಕ ಮಂಡಲದ ಅಧ್ಯಕ್ಷರಾದ ಜಿತೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಧರ್ಮಪತ್ನಿ ಗಿರಿಜಾ ಶಿವರಾಮ ಶೆಟ್ಟಿ, ಮಾಜಿ ನಗರಸಭಾ ಸದಸ್ಯರಾದ ಅನಿತಾ ಬೆಳಿಂಡ ಉಪಸ್ಥಿತರಿದ್ದರು.

ಮುಳುಗು ತಜ್ಞ ಈಶ್ವರ್ ಮಲ್ಪೆ, ಗೌರವಾರ್ಪಣೆ ನಡೆಯಿತು.

ಸಂಸ್ಥೆಯ ಉಪಾಧ್ಯಕ್ಷ ವಿಪಿನ್ ಹಾಗೂ ಕಾರ್ಯದರ್ಶಿ ವಿಶಾಲ್, ಕೋಶಾಧಿಕಾರಿ ಶಂಕರ್ ಕುಲಾಲ್ ಪೆರಂಪಳ್ಳಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು