ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ವಡೇರ ಸ್ವಾಮೀಜಿಯವರು ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ (ರಿ.),ಉಡುಪಿ ಜಿಲ್ಲೆ ಇದರ ಮಹತ್ವಾಕಾಂಕ್ಷಿ ಯೋಜನೆ "ವಯೋವಂದನಾ ಆತಿಥ್ಯ ಗೃಹದ" ಕಟ್ಟಡ ವಿನ್ಯಾಸ ಮತ್ತು ಸಮಗ್ರ ವಿವರಗಳನ್ನು ಒಳಗೊಂಡ ಸಚಿತ್ರ ಸಂಚಿಕೆಯನ್ನು ಡಿಸೆಂಬರ್ 21 ಆದಿತ್ಯವಾರದಂದು ಗೋವಾದ ಶ್ರೀ ಸಂಸ್ಥಾನ ಪರ್ತಗಾಳಿ ಗೋಕರ್ಣ ಜೀವೋತ್ತಮ ಮಠದಲ್ಲಿ ಆಶೀರ್ವಚಿಸಿ ಲೋಕಾರ್ಪಣೆಗೈದರು.
ಸಮಾಜ ಸಂಘಟನೆ ಮತ್ತು ಸಮಾಜಮುಖಿ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ವರೆಗೆ ಮುಟ್ಟಿಸುವ ಗುರುತರ ಜವಾಬ್ದಾರಿಯ ಜೊತೆಗೆ, ತೀರಾ ಅವಶ್ಯಕತೆಯುಳ್ಳ ಸಮಾಜ ಬಾಂಧವರಿಗೆ ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ವಯೋವಂದನ ಆತಿಥ್ಯ ಗೃಹ ನಿರ್ಮಾಣದ ಮೂಲಕ ಹಿರಿಯ ಜೀವಗಳ ಶಾಂತಿ ಸಮಾಧಾನದ ಬದುಕಿಗೆ ಆಸರೆಯಾಗಿ ನೆಮ್ಮದಿಯ ತಾಣವಾಗಲಿ ಎಂದು ಪೂಜ್ಯರು ಶುಭ ಹಾರೈಸಿದರು.
ಹೆತ್ತವರ ಗೌರವಯುತ ಬದುಕಿಗೆ ಕೊನೆಯವರೆಗೂ ಆಸರೆಯಾಗಿ ನಿಲ್ಲುವುದು ಮಕ್ಕಳ ಆದ್ಯ ಕರ್ತವ್ಯವಾಗಿದ್ದು, ಮಕ್ಕಳಿಲ್ಲದ ಹಿರಿಯರಿಗೆ ವೃದ್ಧಾಪ್ಯದಲ್ಲಿ ಗೌರವಯುತ ಜೀವನ ನಡೆಸಲು ಸಮಾಜದ ಸಹಾಯ ಹಸ್ತ ನೀಡಿ ಅಗತ್ಯ ಸೌಕರ್ಯಗಳನ್ನು ಪ್ರಶಾಂತ ಪರಿಸರದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಯೋಜನೆಯು ಶ್ರೀ ಗುರುದೇವತಾ ಅನುಗ್ರಹ ಮತ್ತು ಸಮಾಜದ ದಾನಿಗಳ ನೆರವಿನಿಂದ ಶೀಘ್ರವಾಗಿ ಸಂಪನ್ನಗೊಳ್ಳಲಿ ಎಂದು ಆಶೀರ್ವದಿಸಿ ಶುಭ ಹಾರೈಸಿದರು.
ಮಣಿಪಾಲದ ಉದ್ಭವ್ ಡೆವಲಪರ್ಸ್ ಸಂಸ್ಥೆಯ ಇಂಜಿನಿಯರ್ ಕುಂದಾಪುರದ ಶ್ರೀ ಸಚಿತ್ ಪೈ ಯವರು ವಯೋ ವಂದನ ಕಟ್ಟಡ ಸಮುಚ್ಛಯದ ವಾಸ್ತು ವಿನ್ಯಾಸ,ಪರಿಸರ ಸ್ನೇಹಿ ಮತ್ತು ಹಿರಿಯ ನಾಗರಿಕರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ಯೋಜನಾ ವಿವರಗಳನ್ನು ನೀಡಿದರು.
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಖರೀದಿಸಿರುವ 1.11 ಎಕ್ರೆ ಜಾಗದಲ್ಲಿ, " ವಯೋವಂದನ ಆತಿಥ್ಯ ಗೃಹದ " ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ಧಾರ್ಮಿಕ ವಿಧಿ ವಿಧಾನಗಳು ಪರಮಪೂಜ್ಯ ಕಾಶಿ ಮಠಾಧೀಶರಾಗಿದ್ದ ಶ್ರೀ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ನಕ್ಷತ್ರ(ಸ್ವಾತಿ ನಕ್ಷತ್ರ)ದ ದಿನದ ಫೆಬ್ರವರಿ 8 ಆದಿತ್ಯವಾರ 2026 ರಂದು ನಡೆಸುವುದೆಂದು ನಿಶ್ಚಯಿಸಲಾಗಿದೆ ಎಂದು ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆ (ರಿ .)ಇದರ ಸಂಚಾಲಕರಾದ ಶ್ರೀ ಆರ್ ವಿವೇಕಾನಂದ ಶೆಣೈಯವರು ತಿಳಿಸಿದರು.
ಗೋವಾದ ಶ್ರೀ ಪರ್ತಗಾಳಿ ಮಠಕ್ಕೆ ಉಡುಪಿ, ದ.ಕ ,ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಸಾವಿರಾರು ಮಂದಿ ಹಿತ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮತ್ತು ಭಕ್ತಾದಿಗಳು ಶ್ರೀ ಗುರುವರ್ಯಯರ ಭಿಕ್ಷಾ ಸೇವೆ ಯಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು, ಫಲಮಂತ್ರಾಕ್ಷತೆಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಜಿ .ಸತೀಶ್ ಹೆಗ್ಡೆ, ಕೋಟ,ಪ್ರಧಾನ ಕಾರ್ಯದರ್ಶಿ ಶ್ರೀ ಸಾಣೂರು ನರಸಿಂಹ ಕಾಮತ್, ಕೋಶಾಧ್ಯಕ್ಷರಾದ ಶ್ರೀ ಕಲ್ಯಾಣಪುರ ವಿನೋದ್ ಕಾಮತ್,ವಿದ್ಯಾಪೋಷಕ ನಿಧಿಯ ಅಧ್ಯಕ್ಷರಾದ ಸಿಎ ಎಸ್ ಎಸ್ ನಾಯಕ್, ಸಂಚಾಲಕರಾದ ಶ್ರೀ ವಿಜಯಕುಮಾರ್ ಶೆಣೈ, ಪ್ರಮುಖರಾದ ಶ್ರೀ ನಾಗೇಶ್ ಕಾಮತ್, ಶ್ರೀ ಉಪೇಂದ್ರ ಕಾಮತ್, ಶ್ರೀ ಅನಂತ ಪೈ, ಶ್ರೀ ಸಿದ್ದಾಪುರ ವಾಸುದೇವ ಪೈ, ಶ್ರೀ ಪಾಂಡುರಂಗ ಪೈ, ಶ್ರೀ ಮೋಹನ್ ದಾಸ್ ಶಾನ್ಭಾಗ್, ಕಾರ್ಕಳ ಗೋಪಾಲಕೃಷ್ಣ ಜೋಶಿ, ಮಣೇಲ್ ವಾಮನ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

0 ಕಾಮೆಂಟ್‌ಗಳು