ಪೇಜಾವರ ಶ್ರೀ ವಿಶ್ವೇಶತೀರ್ಥರ ಸಂಸ್ಮರಣೆ-ಆರನೇ ಆರಾಧನಾ ಮಹೋತ್ಸವ

ಸುದೃಢವಾಗಿ ಬೆಳೆದು ನಿಂತ ವಿಶ್ವೇಶತೀರ್ಥರು ಎಂದೆಂದಿಗೂ ವಿಶ್ವಮಾನ್ಯ ಸಂತರು ಆಗಿಯೇ ಇರುವರು. ಅವರ ತಪಸ್ಸಿನ ಫಲವೇ ಈ ಆರಾಧನೋತ್ಸವವಾಗಿದೆ. ಅವರಲ್ಲಿನ ಆಧ್ಯಾತ್ಮಿಕ, ಸಾಮಾಜಿಕ ಚಿಂತನೆಗಳನ್ನು ನಾವು ಅರಿತು ಪೇಜಾವರ ಶ್ರೀಪಾದರನ್ನು ಗುರುತಿಸುವಂತಹದ್ದು ಹೆಮ್ಮೆಯದ್ದಾಗಿದೆ. ಉಡುಪಿ ಸ್ವಾಮೀಜಿಗಳೆಂದರೆ ಅದು ವಿಶ್ವೇಶತೀರ್ಥರು ಅನ್ನುವ ಮಟ್ಟಕ್ಕೆ ಅವರ ಹೆಸರು ಜಗತ್ಪ್ರಸಿದ್ಧವಾಗಿ ಉಳಿದಿದೆ. ಅಖಂಡ ಹಿಂದೂ ಸಮಾಜವು ಮತ್ತೆಮತ್ತೆ ನೆನಪು ಮಾಡತಕ್ಕಂತಹ ಹೆಸರೇ ಪೇಜಾವರಶ್ರೀ ವಿಶ್ವೇಶತೀರ್ಥರದ್ದಾಗಿದೆ. ಇದು ಕರ್ತವ್ಯ ಕೂಡಾ. ಅವರ ಕಾಲಾವಧಿಯುದ್ದಕ್ಕೂ ಅವರು ಧರ್ಮಕ್ಕಾಗಿ ಮಾಡಿದ ತ್ಯಾಗ, ಪರಿಶ್ರಮ ಅದ್ವೈತವಾಗಿದ್ದು ಅವರೋವ ತಾರತಮ್ಯವಿಲ್ಲದ ಹಿಂದೂ ಪ್ರತಿನಿಧಿಗಳಾಗಿದ್ದರು ಎಂದು ತೀರ್ಥಹಳ್ಳಿ ದೂರ್ವಾಸಪುರ ಶ್ರೀ ಮದಚ್ಯುತಪ್ರೇಕ್ಷಾಚಾರ್ಯ ಮಹಾಸಂಸ್ಥಾನ ಶ್ರೀ ಭೀಮನಕಟ್ಟೆ ಮಠದ ಮಠಾಧೀಶ ಶ್ರೀ ೧೦೮ ಶ್ರೀ ರಘುವರೇಂದ್ರ ತೀರ್ಥ ಸ್ವಾಮೀಜಿ ನುಡಿದರು.

ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶರಾಗಿದ್ದು ಶ್ರೀ ಕೃಷ್ಣೈಕ್ಯರಾದ ಯತಿಕುಲ ಚಕ್ರವರ್ತಿ ಪರಮಪೂಜ್ಯ ಶ್ರೀ ಶ್ರೀ ೧೦೦೮ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಆರನೇ ಆರಾಧನಾ ಮಹೋತ್ಸವವನ್ನು ಇಂದಿಲ್ಲಿ ಮಂಗಳವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಮಧ್ವ ಭವನದ (ಪೇಜಾವರ ಮಠ) ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಆಚರಿಸಲಾಗಿದ್ದು ಧಾರ್ಮಿಕ ಸಭೆಯನ್ನುದ್ದೇಶಿಸಿ ರಘುವರೇಂದ್ರ ಶ್ರೀಪಾದಂಗಳವರು ಮಾತನಾಡಿದರು.

ಪೇಜಾವರಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ವಿಶ್ವೇಶತೀರ್ಥಶ್ರೀಗಳ ಆರನೇ ಮಹಾ ಸಮಾರಾಧನಾ ಮಹೋತ್ಸವದ ಪೂಜಾಧಿಗಳು ನಡೆಸಲಾಗಿದ್ದು, ಮಧ್ವ ಭವನದಲ್ಲಿ ಪಟ್ಟದ ದೇವರು ದಿಗ್ವಿಜಯ ಶ್ರೀರಾಮಚಂದ್ರ ದೇವರ ಪೂಜೆ ನೆರವೇರಿಸಿ ಬಳಿಕ ಮಠದ ಶಿಲಾಮಯ ಮಂದಿರದಲ್ಲಿನ ಶ್ರೀಕೃಷ್ಣ ಮುಖ್ಯಪ್ರಾಣ ದೇವರಿಗೆ ಮಹಾರತಿಗೈದು ಕೃಷ್ಣೈಕ್ಯ ಗುರುಗಳ ಸಂಸ್ಮರಣೆಗೈದು ರಘುವರೇಂದ್ರಶ್ರೀಗಳು ನೆರೆದ ಸದ್ಭಕ್ತರಿಗೆ ಅನುಗ್ರಹಿಸಿದರು.

ಬೃಹನ್ಮುಂಬಯಿಯಲ್ಲಿನ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ, ಪೇಜಾವರ ಮಠ ಹಾಗೂ ಯತಿವರೇಣ್ಯರ ಶಿಷ್ಯವೃಂದ ಸಹಯೋಗದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಠದ ಪ್ರಧಾನ ವ್ಯವಸ್ಥಾಪಕ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಸ್ವಾಗತಿಸಿ ಪ್ರಸ್ತಾವನೆಗೈದು ಭೀಮನಕಟ್ಟೆ ಮಠದ ಹಾಗೂ ರಘುವರೇಂದ್ರ ತೀರ್ಥರ ಬಗ್ಗೆ ತಿಳಿಸಿ, ವಿಶ್ವೇಶತೀರ್ಥರ ಸ್ಮರಣೆ ನಮ್ಮನಿಮ್ಮೆಲ್ಲರ ಭಾಗ್ಯವಾಗಿದೆ. ವಿಶ್ವೇಶತೀರ್ಥಶ್ರೀಪಾದರ ಈ ಆರಾಧನಾ ಮಹೋತ್ಸವದಲ್ಲಿನ ಶ್ರೀ ರಘುವರೇಂದ್ರರ ಉಪಸ್ಥಿತಿ ಸಾಕ್ಷಾತ್ ಶ್ರೀರಾಮ ದೇವರೇ ಬಂದಾಂತಾಗಿದೆ. ಇದು ಗುರುಗಳ ಕಾರುಣ್ಯ, ಔದಾರ್ಯ,ವಿಶೇಷ ಸದ್ಗುಣಕ್ಕೆ ಸಾಕ್ಷಿಯಾಗಿದೆ ಎಂದರು.

ಮಧ್ವೇಶ ಭಜನಾ ಮಂಡಳಿ ಸಾಂತಕ್ರೂಜ್, ವಾಗ್ದೇವಿ ಭಜನಾ ಮಂಡಳಿ ಬೋರಿವಿಲಿ, ಚಾರ್ಕೋಪ್ ಭಜನಾ ಮಂಡಳಿ, ಶ್ರೀ ಮಹಿಷಾಮರ್ಧಿನಿ ಮಂದಿರ ಜೈರಾಜ್‌ನಗರ್ ಬೋರಿವಿಲಿ ಭಜನಾ ಮಂಡಳಿಗಳು ವಿಶೇಷವಾಗಿ ತೀರ್ಥರು, ತೀರ್ಥರು, ಶ್ರೀ ವಿಶ್ವೇಶತೀರ್ಥರು ಗೀತೆಯನ್ನಾಡಿದರು ಹಾಗೂ ಅಪಾರ ಸಂಖ್ಯೆಯ ಗುರುಭಕ್ತರನ್ನೊಳಗೊಂಡು ಭಜನೆಗೈದರು. ವಿದ್ವಾನ್ ರಾಘವೇಂದ್ರ ಭಟ್ ಉಂಡಾರು ಶ್ರೀಕೃಷ್ಣ ದೇವರಿಗೆ ಪೂಜೆ ನೆರವೇರಿಸಿದರು. ಚೆಂಡೆವಾದ್ಯದ ನೀನಾದದಲ್ಲಿ ಶ್ರೀಗ ಆರಾಧನಾ ಮಹೋತ್ಸವ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸುಜತಾ ಆರ್.ಶೆಟ್ಟಿ (ಸಾಂತಕ್ರೂಜ್), ಶೇಖರ್ ಜೆ.ಸಾಲ್ಯಾನ್ ಇತರ ಗಣ್ಯರು, ಪೂರ್ಣಪ್ರ ಜ್ಞ ವಿದ್ಯಾಪೀಠ ಪ್ರತಿಷ್ಠಾನದ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ಪೇಜಾವರ ಮಠ ಮುಂಬಯಿ ಶಾಖಾ ವ್ಯವಸ್ಥಾಪಕರಾದ ವಿದ್ವಾನ್ ಹರಿ ಭಟ್ ಪುತ್ತಿಗೆ, ಆರ್ಚಕರಾದ ಸುಬ್ರಹ್ಮಣ್ಯ ಭಟ್ ವಿರಾರೋಡ್, ಗುರುರಾಜ ಆಚಾರ್ಯ ತೀರ್ಥಹಳ್ಳಿ, ಮುಕುಂದ ಬೈತ್ತ್‌ಮಂಗಳ್ಕರ್, ರಮೇಶ್ ಭಟ್, ವಿಷ್ಣುತೀರ್ಥ ಸಾಲಿ, ಪವನಕುಮಾರ್ ಅಣ್ಣಿಗೇರಿ, ಮಾಳ ವಾಸುದೇವ ರಾವ್, ಹರೀಶ್ ಭಟ್, ಸಂತೋಷ್ ಪ್ರಸಾದ್, ವಿದ್ಯಾಪತಿ ಶ್ರೀವತ್ಸ, ಭಾರ್ಗವ ತೀರ್ಥಹಳ್ಳಿ, ಶ್ರೀನಿವಾಸ ಭಟ್ ಪರೇಲ್ ಮತ್ತು ಮಠದ ಪುರೋಹಿತ ವರ್ಗವು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿತು.

*​ಸುದ್ಧಿ~ರೋನ್ಸ್ ಬಂಟ್ವಾಳ್*

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು