ಶ್ರೇಷ್ಠ ನಾಟಕಗಾರ ಕವಿ ಸಾಹಿತಿ ರಂಗನಥ ನಿರ್ದೇಶಕರಾದ ಉಡುಪಿಯ ಪ್ರೊಫೆಸರ್ ರಾಮದಾಸ್ (86) ಇಂದು ಮುಂಜಾನೆ ದೈವಾಧೀನರಾದರು.
ರಂಗಭೂಮಿ ಉಡುಪಿಯ ರಂಗನಟರಾಗಿ ನಿರ್ದೇಶಕರಾಗಿ ಇವರ ಕೊಡುಗೆ ಅಪಾರವಾದುದು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಇವರು ಕಾಲೇಜಿನ ಹಾಗೂ ಉಡುಪಿಯ ಸಾಂಸ್ಕೃತಿಕ, ಸಾಹಿತ್ಯ ರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದರು.
ರಂಗಭೂಮಿ (ರಿ.) ಉಡುಪಿಯ ಓರ್ವ ಮುಖ್ಯ ಕಲಾವಿದರಾಗಿ ವೀರ ಪುರೂರವ, ಧರ್ಮಚಕ್ರ, ಸಂಕ್ರಾಂತಿ, ನಾಯೀಕತೆ, ಹರಕೆಯ ಕುರಿ , ಓಡೀಸ್ಸಿ, ಸಾಕ್ಷಾತ್ಕಾರ, ಸೂರ್ಯ ಶಿಕಾರಿ .. ಹಾಗೂ ಇನ್ನೂ ಹಲವು ನಾಟಕಗಳಲ್ಲಿ ಮುಖ್ಯ ಭೂಮಿಕೆಯನ್ನು ನಿರ್ವಹಿಸಿದ್ದರು.
ತಲೆದಂಡ, ನಾಯೀಕತೆ, ಓಡೀಸ್ಸಿ, ಸೂರ್ಯ ಶಿಕಾರಿ ನಾಟಕಗಳ ನಿರ್ದೇಶನವನ್ನು ಹಾಗೂ ಜೋಕುಮಾರ ಸ್ವಾಮಿ, ಸಂಕ್ರಾಂತಿ ನಾಟಕವನ್ನು ಕುತ್ಪಾಡಿ ಆನಂದ ಗಾಣಿಗರ ಜೊತೆ ಜಂಟಿಯಾಗಿ ನಿರ್ದೇಶನ ಮಾಡಿದ್ದರು.
ಇವರು ರಚಿಸಿದ "ಸಾಕ್ಷಾತ್ಕಾರ" ನಾಟಕ ಕೃತಿಗೆ ಕರ್ನಾಟಕ ನಾಟಕ ಅಕಾಡೆಮಿಯ ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗೊಳಿಸಿತ್ತು ಹಾಗೂ ರಂಗಭೂಮಿ ತಂಡ ಇದನ್ನು ಪ್ರೊ. ಉದ್ಯಾವರ ಮಾಧವ ಆಚಾರ್ಯರ ನಿರ್ದೇಶನದಲ್ಲಿ ರಂಗಕ್ಕೆ ತಂದಿತ್ತು. ಪ್ರೊ. ರಾಮದಾಸರ ಸಂಕ್ರಾಂತಿ ನಾಟಕದ ' ಉಜ್ಜ' ಪಾತ್ರ, ಸೂರ್ಯ ಶಿಕಾರಿ ಯ ರಾಜ, ಹರಕೆಯ ಕುರಿ ನಾಟಕದ 'ರಾಜಕಾರಣಿ' ಇದೆಲ್ಲ ಇಂದಿಗೂ ಪ್ರೇಕ್ಷಕರ ಮನದಲ್ಲಿ ಚಿರಸ್ಥಾಯಿಯಾಗಿದೆ.
ಕಥಾಸಂಕಲನಗಳು, ಕವನ ಸಂಕಲನಗಳು, ಕಾದಂಬರಿಗಳು, ನಾಟಕಗಳು.... ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಇವರ ಕೊಡುಗೆ ಅಪಾರವಾದುದು. ಉಡುಪಿಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ರಂಗಭೂಮಿ ರಿ. ಉಡುಪಿ ಸಂಸ್ಥೆಯು "ರಂಗ ವಿಭೂಷಣ" ಬಿರುದಿನೊಂದಿಗೆ 2000ದಲ್ಲಿ ರಂಗಭೂಮಿ ಪ್ರಶಸ್ತಿ ನೀಡಿ ಗೌರವಿಸಿತ್ತು ಹಾಗೂ 2015ರ "ರಂಗಭೂಮಿ ಆನಂದೋತ್ಸವ" ದ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಿತ್ತು.
ಅಗಲಿದ ಹಿರಿಯ ಚೇತನಕ್ಕೆ ರಂಗಭೂಮಿ ಉಡುಪಿಯ ಶ್ರದ್ಧಾಂಜಲಿ.

0 ಕಾಮೆಂಟ್‌ಗಳು