ಶ್ರೀ ಪ್ರಸನ್ನ ಇವರಿಗೆ “ರಂಗಭೂಮಿ ಪ್ರಶಸ್ತಿ-೨೦೨೬”

ರಂಗಭೂಮಿ (ರಿ) ಉಡುಪಿ ಸಂಸ್ಥೆಯು ೧೯೬೫ರಲ್ಲಿ ಆರಂಭವಾಗಿದ್ದು, ೧೯೬೭ರಿಂದ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಯನ್ನು ಮಾಡಿದ್ದ ಗಣ್ಯರನ್ನು ಸನ್ಮಾನಿಸಿ, ಗೌರವಿಸುತ್ತಾ ಬಂದಿದೆ. ಈ ಬಾರಿಯ ವಾರ್ಷಿಕ “ರಂಗಭೂಮಿ ಪ್ರಶಸ್ತಿ-೨೦೨೬”ಯನ್ನು ಹಿರಿಯ ರಂಗಕರ್ಮಿ, ನಾಟಕಕಾರ, ಲೇಖಕ, ಅಂಕಣಕಾರ, ದೇಸಿ ಚಿಂತನೆಗಳ ರಾಯಭಾರಿ ಶ್ರೀ ಪ್ರಸನ್ನ ಇವರಿಗೆ ನೀಡಲಾಗುವುದು. 

 ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ ೧೯೫೧ರಲ್ಲಿ ಜನನ. ಶಿವಮೊಗ್ಗ, ಚಿತ್ರದುರ್ಗ ಮತ್ತು ಬೆಂಗಳೂರಲ್ಲಿ ಅವರ ವಿದ್ಯಾಭ್ಯಾಸ. ಓದಿದ್ದು ಎಂಎಸ್ಸಿ. ಆಸಕ್ತಿಯಿಂದ ಗಳಿಸಿದ್ದು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ತರಬೇತಿ. ಕನ್ನಡ, ಹಿಂದಿ, ಇಂಗ್ಲೀಷ್ ನಾಟಕಗಳ ನಿರ್ದೇಶನ. ರಷ್ಯಾ ಹಾಗೂ ಜರ್ಮನಿ ದೇಶಗಳ ರಂಗಭೂಮಿಯ ಅಧ್ಯಯನ. ೧೯೭೫ರಲ್ಲಿ ಎಮರ್ಜೆನ್ಸಿಗೆ ರಂಗಭೂಮಿಯ ಪ್ರತಿಕ್ರಿಯೆಯಂತೆ ’ಸಮುದಾಯ’ದ ಕಟ್ಟುವಿಕೆ ಮತ್ತು ಸಮುದಾಯದ ವಾರ್ತಾ ಪತ್ರಿಕೆಯ ಸಂಪಾದಕರಾಗಿಯೂ ನಿರ್ವಹಣೆಗಿಳಿದ ಪ್ರಸನ್ನರ ಚಟುವಟಿಕೆಗಳ ಬಹುತ್ವ ಸೀಮಾತೀತವಾದುದು. ಸಮುದಾಯದ ಕುರಿ, ತಾಯಿ ಮೊದಲಾದ ನಾಟಕಗಳ ಪ್ರದರ್ಶನದ ಮೂಲಕ ಸಂಘಟನೆಯ ದಿಕ್ಕನ್ನು ಮಾತ್ರವಲ್ಲ, ಕನ್ನಡ ರಂಗಭೂಮಿಯ ದಿಕ್ಕನ್ನು ಬದಲಿಸುವ ಕೆಲಸಕ್ಕೆ ಕಾರಣರಾದರು. ಗೆಲಿಲಿಯೋ, ಹುತ್ತವ ಬಡಿದರೆ, ತದ್ರೂಪಿ, ಕದಡಿದ ನೀರು, ದಂಗೆಯ ಮುಂಚಿನ ದಿನಗಳು ಮೊದಲಾದ ನಾಟಕಗಳ ನಿರ್ದೇಶನ. ಮೈಸೂರಿನ ರಂಗಾಯಣದ ನಿರ್ದೇಶಕರಾಗಿ ಹೊಸ ಚಿಂತನೆಯ ಮೂಲಕ ಪ್ರೇಕ್ಷಕರ ಜಾಗೃತಿಗೆ ಕಾರಣರಾದರು. ಪ್ರಸನ್ನರ ಮಾರ್ಗದರ್ಶನದಲ್ಲಿ ಭೂಮಿಗೀತ, ವನರಂಗ, ಶ್ರೀರಂಗ ಸ್ಟೂಡಿಯೋ, ಲಂಕೇಶ್ ಆರ್ಟ್ ಗ್ಯಾಲರಿ, ರಾಷ್ಟ್ರೀಯ ನಾಟಕೋತ್ಸವ ಬಹುರೂಪಿ, ಗ್ರೀಷ್ಮ ರಂಗೋತ್ಸವ ಮೊದಲಾದ ಹೊಸ ಅಧ್ಯಾಯಗಳು ತೆರೆದುಕೊಂಡವು. ನಮ್ಮ ನಡುವೆ ಜಡ್ಡುಗಟ್ಟಿದ ವ್ಯವಸ್ಥೆಯ ಕೊಳೆತೆಗೆಯುವ ಕ್ರಿಯೆಯನ್ನು ಒಂದು ವ್ರತವಾಗಿ ಸ್ವೀಕರಿಸಿರುವ ಪ್ರಸನ್ನರು ಅವಿರತವಾಗಿ ನೀಡುತ್ತಾ ಬಂದಿರುವ ತರಬೇತಿಯು ಅಸಂಖ್ಯ ಬಹುಭಾಷಾ ಕಲಾವಿದರನ್ನು ನೀಡಿ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರವನ್ನು ಸಂಪನ್ನಗೊಳಿಸಿದೆ. ಪ್ರಸನ್ನರು ಲೇಖಕರಾಗಿಯೂ ಮಹತ್ವದ ಕೆಲಸ ಮಾಡಿದ್ದಾರೆ. ಗೋವಿಂದ ನಿಹಲಾನಿ ದೂರದರ್ಶನಕ್ಕೆಂದು ನಿರ್ಮಿಸಿದ ಭೀಷ್ಮ ಸಹಾನಿಯವರ ತಮಸ್ ಕಾದಂಬರಿ ಆಧಾರಿತ ಚಿತ್ರದ ಚಿತ್ರಕಥೆ ಪ್ರಸನ್ನರದ್ದು. ನೌಟಂಕಿ, ಸ್ವಯಂವರ, ತದ್ರೂಪಿ, ನಾಶವಾಯ್ತೆ ಲಂಕಾದ್ರಿಪುರ ಮೊದಲಾದ ನಾಟಕಗಳನ್ನೂ ಪ್ರಸನ್ನರು ರಚಿಸಿದ್ದಾರೆ. ಹೆಗ್ಗೋಡಿನ ’ಕವಿ ಕಾವ್ಯ ಟ್ರಸ್ಟ್’ ಮೂಲಕ ಅವರು ಕನ್ನಡದ ಸಾಂಸ್ಕೃತಿಕ ಕೆಲಸಕ್ಕೆ ಬಿಸುಪನ್ನೂ ಕೊಟ್ಟರು. ಕೆ ವಿ ಸುಬ್ಬಣ್ಣನವರ ಜೊತೆಗೂಡಿ ರುಜುವಾತು ಪತ್ರಿಕೆಗೆ ಹೊಸರೂಪ ನೀಡಲೂ ನೆರವಾಗಿದ್ದರು.

 ನಮಗೆ ಪ್ರಸನ್ನ ಇವತ್ತು ಅತ್ಯಂತ ಪ್ರಸ್ತುತರಾಗುವುದು ಕೇವಲ ರಂಗಚಟುವಟಿಕೆಗಳಿoದ ಮಾತ್ರವಲ್ಲ; ಅಷ್ಟೇ ಮಹತ್ವದ ಸಾಂಸ್ಕೃತಿಕ ಚಟುವಟಿಕೆಗಳಿಂದ ಮತ್ತು ಸಾಮಾಜಿಕ ಚಳುವಳಿಗಳಿಂದ. ನಾಟಕಕಾರನಾಗಿ ಮತ್ತು ರಂಗ ನಿರ್ದೇಶಕನಾಗಿ ಹೇಗೋ ಹಾಗೇ, ಲೇಖಕನಾಗಿ, ಅಂಕಣಕಾರನಾಗಿ, ಕೈಮಗ್ಗದ ಉತ್ಪನ್ನಗಳ ವಕ್ತಾರನಾಗಿ, ಗ್ರಾಮ ಸೇವಾಸಂಸ್ಥೆಯ ಚಟುವಟಿಕೆಗಳನ್ನು ಒಳಗೊಂಡು, ದೇಸೀ ಚಿಂತನೆಗಳ ರಾಯಭಾರಿಯಾಗಿ ಬಹುರೂಪಿಯಾಗಿರುವ ಅವರು ನಿಜ ಅರ್ಥದ ಅನಿಕೇತನರು. ಅವರು ನಾಡಿನಾದ್ಯಂತ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಳುವಳಿಗಳಲ್ಲಿ ಮತ್ತು ಪರಿಸರ ಸಂರಕ್ಷಣೆಯ ನಿಟ್ಟಿನ ಚಿಂತನೆ ಮತ್ತು ಹೋರಾಟಗಳ ದಿಕ್ಸೂಚಿಯೂ ಹೌದು. ಹೆಗ್ಗೋಡಿನ ಬಳಿ ಅವರೇ ಆರಂಭಿಸಿದ ಚರಕ ಸಂಸ್ಥೆಯ ಮೂಲಕ ಕೈಮಗ್ಗದ ಉತ್ಪನ್ನಗಳಿಗೆ ನೀಡಿದ ಚಾಲನೆಯ ಮೂಲಕ ಮಹಿಳಾ ಸಬಲೀಕರಣ, ದೇಶಿವಾದ ಮತ್ತು ಗ್ರಾಮೋದ್ಯೋಗ ಚಟುವಟಿಕೆಗಳಿಗೆ ಮತ್ತು ದೇಸಿ ಮಾರುಕಟ್ಟೆಗೆ ಒತ್ತು ನೀಡುವ ಮೂಲಕ ಅವರನ್ನು ಗಾಂಧೀಚಿAತನೆಯ ನಿಜ ವಾರಸುದಾರರನ್ನಾಗಿಸಿದೆ. ಗಾಂಧಿ ಪ್ರತಿಪಾದಿಸುತ್ತಿದ್ದ ಗ್ರಾಮಸ್ವರಾಜ್ಯದ ಚಿಂತನೆಗಳನ್ನು ಪ್ರಸನ್ನರು ತಮ್ಮ ದೇಶಿ ಆಹಾರ ಪದ್ಧತಿ, ದೇಶಿ ಜೀವನ ಪದ್ಧತಿ, ಯಂತ್ರಗಳನ್ನು ಕಳಚೋಣ ಬನ್ನಿ, ಶೂದ್ರರಾಗೋಣ ಬನ್ನಿ ಮೊದಲಾದ ಕೃತಿಗಳ ಮೂಲಕವೂ ದಾಖಲಿಸಿದ್ದಾರೆ.

ಇಂತಹ ಬಹುರೂಪಿ ಪ್ರಸನ್ನರಿಗೆ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಫೆಲೋಶಿಪ್, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಭೋಪಾಲ್ ನ ಭಾರತ ಭವನದ ಫೆಲೋಶಿಪ್, ಪುತಿನ ಟ್ರಸ್ಟ್ ಪುರಸ್ಕಾರ, ಚದುರಂಗ ಪ್ರಶಸ್ತಿ ಮೊದಲಾದ ಪುರಸ್ಕಾರಗಳು ಸಂದಿವೆ. ಪ್ರಸ್ತುತ ರಂಗಭೂಮಿ (ರಿ) ಉಡುಪಿಯು ವಾರ್ಷಿಕ ಪ್ರಶಸ್ತಿಯ ಮೂಲಕ ಅವರನ್ನು ಗೌರವಿಸಿ ತನ್ನ ಅರವತ್ತು ವರ್ಷಗಳ ಇತಿಹಾಸಕ್ಕೆ ಮತ್ತೊಂದು ಸಾರ್ಥಕ ಪುಟವನ್ನು ಸೇರಿಸಿಕೊಳ್ಳುತ್ತಿದೆ.

 ರಂಗಭೂಮಿ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಅವರು ಸಲ್ಲಿಸಿದ ಕೊಡುಗೆಯನ್ನು ಗುರುತಿಸಿ, ಗೌರವಿಸಿ ರಂಗಭೂಮಿ (ರಿ) ಉಡುಪಿ ಸಂಸ್ಥೆಯು ಶ್ರೀ ಪ್ರಸನ್ನರವರನ್ನು “ರಂಗಭೂಮಿ ಪ್ರಶಸ್ತಿ” ನೀಡಿ ೨೦೨೬ರ ಮಾರ್ಚ್ ೪ ಬುಧವಾರದಂದು ಸಂಜೆ ೫.೩೦ಕ್ಕೆ ಉಡುಪಿ ಎಂಜಿಎA ಕಾಲೇಜಿನ ಮುದ್ದಣ ಮಂಟಪದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಿದೆ ಎಂದು "ರಂಗಭೂಮಿ" ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು