ನಾವುಂದ : ನಿಂತಿದ್ದ ಕಂಟೈನರ್‌ಗೆ ಕಾರು ಡಿಕ್ಕಿ; ಇಬ್ಬರು ಸಾವು, ಮೂವರ ಸ್ಥಿತಿ ಗಂಭೀರ!

ನಿಂತಿದ್ದ ಕಂಟೈನರ್‌ಗೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದದ ಬಳಿ ನಡೆದಿದೆ. ಈ ಘಟನೆಯಲ್ಲಿ ತಾಯಿ ಮತ್ತು ಮಗಳು ಮೃತಪಟ್ಟಿದ್ದಾರೆ.

ಪತಿ, ಇಬ್ಬರು ಮಕ್ಕಳು ಹಾಗೂ ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿದೆ. ಮಮತಾ (36) ಹಾಗೂ ಮಗಳು ಧೃತಿಕಾ (14) ಸಾವಿಗೀಡಾಗಿದ್ದು, ಪತಿ ರಾಘು (40), ಮಕ್ಕಳಾದ ಜಾಹ್ನವಿ (12), ಚಾರ್ವಿ (10) ಹಾಗೂ ಕಾರು ಚಾಲಕ ಕಿರಣ್‌ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತಪಟ್ಟವರು ಬೆಂಗಳೂರು ಮೂಲದ ನಿವಾಸಿಗಳು ಎಂದು ವರದಿಯಾಗಿದೆ.

ಪ್ರವಾಸಕ್ಕೆ ಬಂದ ಕುಟುಂಬ ಉಡುಪಿ ಜಿಲ್ಲೆಯ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿತ್ತು. ನಂತರ ಮುರುಡೇಶ್ವರ ಮತ್ತು ಗೋಕರ್ಣ ಕ್ಷೇತ್ರಗಳ ದರ್ಶನದ ಉದ್ದೇಶದಿಂದ ಬೈಂದೂರು ಮಾರ್ಗವಾಗಿ ಪ್ರಯಾಣ ನಡೆಸುತ್ತಿದ್ದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಗಾಯಗೊಂಡ ತಂದೆ ಮತ್ತು ಇಬ್ಬರು ಮಕ್ಕಳಿಗೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೆ, ಕಾರು ಚಾಲಕ ಕಿರಣ್‌ನ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು