ಯಶಸ್ವಿ ಪ್ರಾಜೆಕ್ಟ್ಗಾಗಿ ಸ್ಪಷ್ಟ ಸಂಶೋಧನಾ ಸಮಸ್ಯೆ, ನಿರ್ದಿಷ್ಟ ಉದ್ದೇಶಗಳು, ಸೂಕ್ತ ಸಂಶೋಧನಾ ವಿನ್ಯಾಸ, ಸಾಹಿತ್ಯ ಪರಿಶೀಲನೆ ಹಾಗೂ ದತ್ತಾಂಶ ವಿಶ್ಲೇಷಣೆ ಅಗತ್ಯವೆಂದು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಗ್ರಾಫಿಕ್ ಎರಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ರಶ್ಮಿ ಕೊಡಿಕಲ್ ರವರು ಗುಣಮಟ್ಟದ ಶೈಕ್ಷಣಿಕ ಪ್ರಾಜೆಕ್ಟ್ ರೂಪಿಸುವ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಪರಿಶೀಲಿತ ವೈಜ್ಞಾನಿಕ ಪತ್ರಿಕೆಗಳು ಮತ್ತು ವಿಶ್ವಾಸಾರ್ಹ ದತ್ತಸಂಚಯಗಳ ಬಳಕೆ, ಮಾದರಿ ಆಯ್ಕೆ ವಿಧಾನಗಳು, ಪ್ರಾಥಮಿಕ ಮತ್ತು ದ್ವಿತೀಯ ದತ್ತಾಂಶ ಸಂಗ್ರಹ, ಮಾಪನ ಮಾಪಕಗಳು ಹಾಗೂ ವರದಿ ರಚನೆ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಯಿತು. ಸಂಶೋಧನಾ ಕಾರ್ಯದಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಸಾಧನಗಳ ಪರಿಣಾಮಕಾರಿ ಬಳಕೆ ಬಗ್ಗೆ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು, ಉಡುಪಿ ಇದರ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ವಿಭಾಗಗಳ ವತಿಯಿಂದ “ಅತ್ಯುತ್ತಮ ಬಿಬಿಎ/ಬಿ.ಕಾಂ ಪ್ರಾಜೆಕ್ಟ್ನ ರೂಪುರೇಖೆ” ಎಂಬ ವಿಷಯದ ಕುರಿತ ಕಾರ್ಯಾಗಾರವನ್ನು ಕಾಲೇಜಿನ ದೃಶ್ಯ–ಶ್ರವ್ಯ ಸಭಾಂಗಣದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ವಿ. ಗಾಂವ್ಕರ್ ವಹಿಸಿದ್ದರು.
ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಬಿಂದು ಟಿ ಸಂಯೋಜನೆ ಮಾಡಿದ್ದು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಿರ್ವಹಣಾ ವಿಭಾಗ ಸಂಚಾಲಕರಾದ ಡಾ. ರಘು ನಾಯ್ಕರವರು ಕಾರ್ಯಕ್ರಮ ನಿರೂಪಿಸಿ ಅತಿಥಿಗಳನ್ನು ಸ್ವಾಗತಿಸಿದರು. ತೃತೀಯ ಬಿಬಿಎ ವಿದ್ಯಾರ್ಥಿನಿ ಅಂಬಿಕಾ ಪ್ರಾರ್ಥನೆಯನ್ನು ನೆರವೇರಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಮರ್ವಿನ್ ಡಿಸೋಜಾ ಅವರು ಧನ್ಯವಾದಗಳನ್ನು ಅರ್ಪಿಸಿದರು.

0 ಕಾಮೆಂಟ್‌ಗಳು