ರಾಷ್ಟ್ರೀಯ ಹೆದ್ದಾರಿ 169 ಎ ಕರಾವಳಿ ಜಂಕ್ಷನ್ ನಿಂದ ಕಲ್ಮಾಡಿ ಸೇತುವೆ ವರೆಗಿನ ಇಕ್ಕೆಲಗಳಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯನ್ನು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳೊಂದಿಗೆ ವೀಕ್ಷಣೆ ನಡೆಸಿದರು.
ಕಾಮಗಾರಿ ವೇಗವಾಗಿ ನಡೆಯುತ್ತಿದ್ದರೂ ಭೂ ಮಾಲಿಕರಿಗೆ ಪರಿಹಾರ ನೀಡದಿರುವುದು, ಭಾಗಶಃ ಸ್ವಾಧೀನವಾದ ಭೂಮಿಗಳಿಗೆ ಪೋಡಿ ರಚನೆಯಲ್ಲಾದ ವಿಳಂಬದಿಂದ ಹಣ ಪಾವತಿಯ ಸಮಸ್ಯೆ, ವಿದ್ಯುತ್ ಕಂಬಗಳ ಸ್ಥಳಾಂತರದ ಸಮಸ್ಯೆಯಿಂದ ಮರಗಳ ತೆರವಿಗೆ ಅಡಚಣೆ, ಮುಂತಾದ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿದ ಸಂಸದ ಕೋಟ ಹಾಗೊಂದು ವೇಳೆ ಭೂ ಮಾಲಿಕರ ಖಾತಾ ಸಮಸ್ಯೆಗಳಿದ್ದಲ್ಲಿ ಅಥವಾ ವ್ಯಾಜ್ಯ, ತಕರಾರುಗಳಿದ್ದಲ್ಲಿ ಪರಿಹಾರದ ಹಣವನ್ನು ಅವರ ಹೆಸರಲ್ಲಿ ಠೇವಣಿ ಇರಿಸುವಂತೆ ಸೂಚಿಸಿದರು. ಮತ್ತು ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮರಗಳ ತೆರವಿಗೆ ಅನುಮತಿ ನೀಡುವಂತೆ ಸ್ಥಳದಲ್ಲೇ ತಿಳಿಸಿದರು.
ಹಲವು ದಿನಗಳಿಂದ ಕಂಬಗಳ ಸ್ಥಳಾಂತರಕ್ಕೆ ಕಾಯುತ್ತಿದ್ದೇವೆ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿ ಎಂದು ಸ್ಥಳೀಯರು ತಿಳಿಸಿದಾಗ, ಶಾಲಾ ಮಕ್ಕಳ ಪರೀಕ್ಷೆ ಅವಧಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಸ್ಥಗಿತಗೊಳಿಸಿ ಕಂಬಗಳ ತೆರವಿಗೆ ಅವಕಾಶ ಕಲ್ಪಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸುಮಾರು 2 ಕಿ.ಮೀ ರಸ್ತೆಯಲ್ಲಿ ಸಂಚರಿಸಿದ ಸಂಸದ ಕೋಟ ಅಧಿಕಾರಿಗಳ ತಂಡಕ್ಕೆ ಸಮರ್ಪಕ ದಾಖಲೆ ನೀಡಿದವರಿಗೆ ಒಂದು ವಾರದಲ್ಲಿ ಹಣ ಪಾವತಿ ಮಾಡುವಂತೆ, 3ಡಿ ಅಪೂರ್ಣವಾದವರಿಗೆ 15 ದಿನಗಳ ಒಳಗೆ ಪರಿಹಾರ ನೀಡುವಂತೆ ತಿಳಿಸಿ ಯಾವುದೇ ಕಾರಣಕ್ಕೂ ವಿಳಂಬವಿಲ್ಲದೆ ರಸ್ತೆ ಕೆಲಸ ಮಳೆಗಾಲದೊಳಗೆ ಪೂರ್ಣಗೊಳಿಸುವಂತೆ ತಾಕಿತು ಮಾಡಿದರು.
ಸಂಸದರೊಂದಿಗೆ ಕುಂದಾಪುರದ ಸಹಾಯಕ ಕಮಿಷನರ್ ಶ್ರೀಮತಿ ರಶ್ಮಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಸುಧಾಕರ್ ನಾಯಕ್, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾದ ಶ್ರೀ ಲೋಕೇಶ್ ಶಶಿಧರ್ ನವೀನ್, ಗ್ರಾಮ ಆಡಳಿತ ಅಧಿಕಾರಿ ಶ್ರೀ ಕಾರ್ತಿಕೇಯ, ಮಾಜಿ ನಗರಸಭಾ ಸದಸ್ಯರಾದ ಸುಂದರ ಕಲ್ಮಾಡಿ, ಹರೀಶ್ ರಾಂ, ಮಲ್ಪೆ ಠಾಣಾಧಿಕಾರಿ ಈರಣ್ಣ ಶಿರಗುಪ್ಪಿ ಮುಂತಾದವರಿದ್ದರು.

0 ಕಾಮೆಂಟ್‌ಗಳು