ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆ, ಬ್ರಹ್ಮಾವರ ಇವರ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಪಿಎಂಇಜಿಪಿ ತರಬೇತಿಯ ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತುಳುನಾಡ ಧ್ವನಿ ಪತ್ರಿಕೆಯ ಸಂಪಾದಕಿ ಹಾಗೂ ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಯಶೋಧ ಕೇಶವ್ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಲು ಸಾಮರ್ಥ್ಯ ಹೊಂದಿದ್ದಾರೆ. ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶಗಳಿದ್ದು, ಯಾವುದೇ ಕಾರಣಕ್ಕೂ ಸೋಲನ್ನು ಒಪ್ಪಿಕೊಳ್ಳಬಾರದು ಎಂದು ಅವರು ಹೇಳಿದರು.
ಮನೆಯ ನಿರ್ವಹಣೆ ಮತ್ತು ಖರ್ಚು-ವೆಚ್ಚಗಳನ್ನು ಸಮರ್ಪಕವಾಗಿ ನಿರ್ವಹಿಸುವ ಚಾಕಚಕ್ಯತೆ ಮಹಿಳೆಯರಲ್ಲಿ ಇರುವುದರಿಂದ ಉದ್ಯಮ ಕ್ಷೇತ್ರದಲ್ಲೂ ಅವರು ಯಶಸ್ವಿಯಾಗಬಹುದು. ಆತ್ಮವಿಶ್ವಾಸ, ಶ್ರದ್ಧೆ ಮತ್ತು ದೃಢಸಂಕಲ್ಪದಿಂದ ಉದ್ಯಮವನ್ನು ಪ್ರಾರಂಭಿಸಿ ಯಶಸ್ವಿ ಉದ್ಯಮಿಗಳಾಗಿ ಸದೃಢ ದೇಶವನ್ನು ನಿರ್ಮಿಸೋಣ ಎಂದು ಅವರು ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ ಅವರು ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ, ಅತಿಥಿಗಳು ತಿಳಿಸಿದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿ ಉದ್ಯಮಿಗಳಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರುಡ್‌ಸೆಟ್ ಸಂಸ್ಥೆಯಲ್ಲಿ ತರಬೇತಿ ಪಡೆದು ಯಶಸ್ವಿಯಾದ ಐದು ಉದ್ಯಮಿಗಳಾದ ಶ್ರೀಮತಿ ಮಮತಾ ಬಿ.ಎಸ್., ಶ್ರೀಮತಿ ರಂಜಿತಾ, ಶ್ರೀಮತಿ ಲಲಿತಾ, ಶ್ರೀಮತಿ ದೀಪಿಕಾ ಹಾಗೂ ಶ್ರೀಮತಿ ಬಬಿತಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉಪನ್ಯಾಸಕರಾದ ಶ್ರೀಮತಿ ಚೈತ್ರ ಕೆ ಅವರು ನಿರೂಪಿಸಿದರು. ಹಿರಿಯ ಉಪನ್ಯಾಸಕರಾದ ಶ್ರೀ ಸಂತೋಷ್ ಶೆಟ್ಟಿ ಸ್ವಾಗತಿಸಿದರು. ಹಿರಿಯ ಕಚೇರಿ ಸಹಾಯಕರಾದ ಶ್ರೀ ರವಿ ವಂದಿಸಿದರು.

0 ಕಾಮೆಂಟ್‌ಗಳು