ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಮಾರ್ಚ್ 18ರಂದು ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿ ಮುಂದಿನ ಪದವಿ ಶಿಕ್ಷಣಕ್ಕೆ ಎದುರು ನೋಡುತ್ತಿರುವ ವಿದ್ಯಾರ್ಥಿಗಳಿಗೊಸ್ಕರ ನಡೆಸಿದ ಓಪನ್ ಡೇ ಮುಕ್ತ ದಾಖಲಾತಿ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಸಂಪನ್ನವಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಮಾಹೆ ಮಣಿಪಾಲ್ ನ ಉಪ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ ವೆಂಕಟೇಶ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮುಂಬರುವ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ, ಪದವಿ ಶಿಕ್ಷಣ ಮೂಲಭೂತ ಅಗತ್ಯತೆ ಆಗಲಿದ್ದು, ಅದು ಕೌಶಲ್ಯಾಧಾರಿತವಾಗಿ ರೂಪುಗೊಳ್ಳಬೇಕಾದ ಅನಿವಾರ್ಯತೆ ಇದೆ, ಶಿಕ್ಷಣ ಪಡೆಯಲು ಯಾವುದೇ ಮಿತಿಯಿಲ್ಲ, ಜೀವನಪರ್ಯಂತ ಪಡೆಯಲು ವಿಫುಲ ಅವಕಾಶಗಳಿವೆ ಎಂದು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಉಡುಪಿ ಜಿಲ್ಲೆಯ ಡಯಟ್ ನ ಪ್ರಾಚಾರ್ಯರು ಹಾಗೂ ಉಪನಿರ್ದೇಶಕರಾದ ಡಾ. ಅಶೋಕ್ ಕಾಮತ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಯಾವುದೇ ಕೆಲಸ ಮಾಡುವಾಗ ಶ್ರದ್ಧೆ ಮತ್ತು ನಿಷ್ಠೆ ಇರಬೇಕು, ಅಂದಿನ ಕೆಲಸ ಅದೇ ದಿನದಲ್ಲಿ ನೆರವೇರಿಸಬೇಕು, ಮನಸ್ಸಿಟ್ಟು ಮಾಡುವ ಕೆಲಸಗಳು ಖಂಡಿತವಾಗಿ ಫಲ ನೀಡುತ್ತವೆ ಎಂದು ತಿಳಿಸಿದರು.
ಎಂ ಎಸ್ ಡಿ ಸಿ ಮಣಿಪಾಲ್ ಮುಖ್ಯಸ್ಥರಾದ ಬ್ರಿಗೇಡಿಯರ್ (ಡಾ) ಎಸ್.ಎಸ್. ಪಾಬ್ಲಾ, ಭಕ್ತಿ ಟ್ಯುಟೋರಿಯಲ್ ಉಡುಪಿ ಇದರ ಸಂಸ್ಥಾಪಕರು ಹಳೆ ವಿದ್ಯಾರ್ಥಿ ಶ್ರೀಮತಿ ಶಾಂಭವಿ ಭಂಡಾರ್ಕರ್, ಯುಪಿಎಂಸಿಯ ಪ್ರವೇಶಾತಿ ಮತ್ತು ಉದ್ಯೋಗ ಮಾರ್ಗದರ್ಶನದ ನಿರ್ದೇಶಕಿ ಡಾ. ಪದ್ಮಲತಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಪ್ರಭಾ ಕಾಮತ್ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಕಲಿಕೆ ಮತ್ತು ಗಳಿಕೆ, ವೃತ್ತಿ ಮಾರ್ಗದರ್ಶನ ತರಬೇತಿ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಹನಾ ಎಂ. ಜಿ ನಿರೂಪಿಸಿದರು.

0 ಕಾಮೆಂಟ್‌ಗಳು