ಸಂಸ್ಕೃತವು ಲೋಕಹಿತವನ್ನು ಬಯಸುವ ಭಾಷೆ ~ಡಾ. ರಾಮನಾಥ ಆಚಾರ್ಯ

ದಿನಾಂಕ 05-03-2026ರಂದು ಪೂರ್ವಾಹ್ನ 10.30 ಗಂಟೆಗೆ ಕಾಲೇಜಿನ ಸಂಸ್ಕೃತ ವಿಭಾಗವು ಆಯೋಜಿಸಿದ್ದ ವಿಶೇಷೋಪನ್ಯಾಸ ಮತ್ತು ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಉಡುಪಿಯ ಪ್ರಖ್ಯಾತ ವಿದ್ವಾಂಸರು, ಶತಾವಧಾನಿಗಳು, ಮಹಾಮಹೋಪಾಧ್ಯಾಯ ಡಾ. ರಾಮನಾಥ ಆಚಾರ್ಯ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಂಸ್ಕೃತ ಭಾಷೆಯ ಮತ್ತು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿರುವ ಮೌಲ್ಯಗಳ ಶಾಸ್ತ್ರೀಯ ಅಂಶಗಳನ್ನು ತಿಳಿಸಿದರು. 

 ಲೋಕಹಿತಂ ಮಮ ಕರಣೀಯಂ ಎನ್ನುವ ಸಂಸ್ಕೃತ ಗೀತೆಯ ಹಿನ್ನೆಲೆಯನ್ನು ಇಟ್ಟುಕೊಂಡು ವಿದ್ಯಾರ್ಥಿಗಳೊಂದಿಗೆ ಚರ್ಚೆಯನ್ನು ನಡೆಸುತ್ತಾ ಮಾನವನಿಗಿಂತ ಪೂರ್ವದಲ್ಲಿ ಈ ಲೋಕದಲ್ಲಿದ್ದ ವೃಕ್ಷಗಳು, ಜೀವಜಂತುಗಳ ಜೀವನಕ್ರಮವನ್ನು ತಿಳಿಸುತ್ತಾ ಮನುಷ್ಯನು ಲೋಕಕ್ಕೆ ಒಳಿತನ್ನು ಮಾಡುವ ಊರ್ಧ್ವಮುಖಿ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಉದಾಹರಣಸಹಿತ ವಿವರಿಸಿದರು.

 ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಅರಿಷಡ್ವರ್ಗಗಳನ್ನು ಗೆಲ್ಲುವ ಮಾರ್ಗವನ್ನು ವಿಶಿಷ್ಟ ಕಥೆಗಳ ಮೂಲಕ ಮನವರಿಕೆ ಮಾಡಿ ಕೊಟ್ಟರು. ಕಾರ್ಯಕ್ರಮದ ಆರಂಭದಲ್ಲಿ ದ್ವಿತೀಯ ಬಿ.ಕಾಂ. ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯನ್ನು ಹಾಡಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಪಿ.ಬಿ ಪ್ರಸನ್ನ ರವರು ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಕೃತ ವಿಭಾಗ ಉಪನ್ಯಾಸಕರಾದ ಡಾ. ಅರವಿಂದ ಶ್ಯಾನಭಾಗ ರವರು ಅತಿಥಿಗಳನ್ನು ಪರಿಚಯಿಸಿದರು.

 ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿಯರು ಮನಸಾ ಸತತಂ ಸ್ಮರಣೀಯಂ ಸಮೂಹ ಗೀತೆಯನ್ನು ಸು‍ಶ್ರಾವ್ಯವಾಗಿ ಹಾಡಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸೋಜನ್‌ ಕೆ.ಜಿ. ರವರು ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ನಿಕೇತನ ರವರು ಧನ್ಯವಾದ ಸಮರ್ಪಣೆಯನ್ನು ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶತಾವಧಾನಿಯಾದ ಡಾ. ರಾಮನಾಥ ಆಚಾರ್ಯ ಇವರನ್ನು ಕಾಲೇಜಿನ ಪರವಾಗಿ ಪ್ರಾಂಶುಪಾಲರು ಶಾಲು ಹೊದಿಸಿ ಸನ್ಮಾನಿಸಿದರು. ಪ್ರಥಮ ಬಿ.ಸಿ.ಎ. ವಿದ್ಯಾರ್ಥಿಗಳು ಶಾಂತಿಮಂತ್ರವನ್ನು ಪಠಿಸಿದರು. ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿಯಾದ ಕು. ಭವ್ಯಶ್ರೀ ಇವರು ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು