ಕುಂದಾಪುರ: ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿಗೆ ಹೆಚ್ಚಿನ ಹಣ ಮತ್ತು ಚಿನ್ನಕ್ಕಾಗಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ, ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಪತಿ ಜುನೈದ್ ಮತ್ತು ಆತನ ಕುಟುಂಬಸ್ಥರ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ತಾಲೂಕಿನ ಗೋಪಾಡಿ ಮೂಲದ ಶ್ರೀಮತಿ ತಸ್ಮಾ (25) ಎಂಬುವವರು ಸಾಗರದ ಆವಿನ ಹಳ್ಳಿಯ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಜುನೈದ್ ಎಂಬುವವರನ್ನು ದಿನಾಂಕ 24-02-2022 ರಂದು ವಿವಾಹವಾಗಿದ್ದರು. ಮದುವೆ ಸಂದರ್ಭದಲ್ಲಿ ಆರೋಪಿಗಳ ಬೇಡಿಕೆಯಂತೆ 2 ಲಕ್ಷ ರೂ. ನಗದು ಹಾಗೂ 50 ಪವನ್ ಚಿನ್ನಾಭರಣವನ್ನು ನೀಡಲಾಗಿತ್ತು. ಆದರೆ, ಮದುವೆಯಾದ ನಂತರ ನೀವು ತಂದ ಹಣ ಮತ್ತು ಚಿನ್ನ ಕಡಿಮೆಯಾಯಿತು ಎಂದು ಹಂಗಿಸಿದ ಆರೋಪಿಗಳು, ಸಂತ್ರಸ್ತೆಗೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲು ಆರಂಭಿಸಿದ್ದರು ಎನ್ನಲಾಗಿದೆ.
ಸಂತ್ರಸ್ತೆಯ ಆರೋಪದಂತೆ, 2022ರ ಸೆಪ್ಟೆಂಬರ್‌ನಲ್ಲಿ ಪತಿ ಜುನೈದ್ ಹೆದರಿಸಿ 25 ಪವನ್ ಚಿನ್ನಾಭರಣವನ್ನು ತೆಗೆದುಕೊಂಡು ಹೋಗಿದ್ದಲ್ಲದೆ, ಮತ್ತೆ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದನು. ಸಂತ್ರಸ್ತೆಯ ತಂದೆ ಬ್ಯಾಂಕಿನಿಂದ ಸಾಲ ಮಾಡಿ 5 ಲಕ್ಷ ರೂ. ನೀಡಿದರೂ, ಆರೋಪಿಗಳು ಮತ್ತೆ 5 ಲಕ್ಷ ರೂ. ಪಡೆದಿದ್ದರು. ಇಷ್ಟಕ್ಕೇ ತೃಪ್ತರಾಗದ ಪತಿ ಜುನೈದ್, ಕಳೆದ ಫೆಬ್ರವರಿ 12 ರಂದು ಹೊಸ ಪೆಟ್ರೋಲ್ ಬಂಕ್ ಮಾಡಲು 10 ಲಕ್ಷ ರೂಪಾಯಿ ತನ್ನಿ ಎಂದು ಪೀಡಿಸಿ, ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಉಳಿದ ಆರೋಪಿಗಳು ಹಲ್ಲೆಗೆ ಪ್ರಚೋದನೆ ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೊಲೆ ಬೆದರಿಕೆ ಮತ್ತು ತಲಾಖ್ ಒತ್ತಡ: ಮಾರ್ಚ್ 8 ರಂದು ಸಂತ್ರಸ್ತೆಯ ಮನೆಗೆ ಬಂದ ಆರೋಪಿಗಳಾದ ಜುನೈದ್, ಹಸೈನಾರ್ ಮತ್ತು ಸಲೀಂ 10 ಲಕ್ಷ ರೂಪಾಯಿ ನೀಡಬೇಕು, ಇಲ್ಲವಾದಲ್ಲಿ ನೀನೇ ತಲಾಖ್ ನೀಡಬೇಕು ಇಲ್ಲದಿದ್ದರೆ ಕೊಂದು ಹಾಕುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ. ಮೇ 2 ರಂದು ಸಂತ್ರಸ್ತೆ ಸಾಗರದ ಅಜ್ಜಿ ಮನೆಗೆ ಹೋದಾಗಲೂ ಅಲ್ಲಿಗೆ ಬಂದ ಆರೋಪಿಗಳು ನಿನ್ನನ್ನು ಇಲ್ಲೇ ಕೊಂದು ಹೂತು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಸಂತ್ರಸ್ತೆಯ ದೂರಿನ ಮೇರೆಗೆ ಕುಂದಾಪುರ ಪೊಲೀಸರು ಪತಿ ಜುನೈದ್ ಸೇರಿದಂತೆ ಹಸೈನಾರ್, ಅಲೀಮಾಬಿ, ಸಲೀಂ, ಉಮೈಮಾ ಮತ್ತು ರಶ್ಮೀಲಾ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

0 ಕಾಮೆಂಟ್‌ಗಳು