ಬೆಂಗಳೂರಿನಲ್ಲಿ ಯಶಸ್ವಿಯಾದ "ಭಾರತ ರಂಗ ಮಹೋತ್ಸವ"

ಘನ ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ "ಸಂಗೀತ ನಾಟಕ ಅಕಾಡೆಮಿ" ಯು "ವಂದೇ ಮಾತರಂ" ನ 150ನೇ ವರ್ಷದ ಸವಿ ನೆನಪಿಗಾಗಿ ಹಾಗೂ ' ಮಹಾಕವಿ ಕಾಳಿದಾಸ ಜಯಂತಿ'ಯ ಈ ಸಂದರ್ಭದಲ್ಲಿ ಜುಲೈ 15 ನೇ ತಾರೀಕಿನಂದು ಭಾರತದಂತ್ಯ 150ಕ್ಕೂ ಹೆಚ್ಚು ವೇದಿಕೆಗಳಲ್ಲಿ 150ಕ್ಕೂ ಹೆಚ್ಚು ತಂಡಗಳಿಂದ 39ಕ್ಕೂ ಮಿಕ್ಕಿ ಭಾಷೆಗಳಲ್ಲಿ ನಾಲ್ಕು ಸಾವಿರ ಕಲಾವಿದರಿಂದ 150 ವೇದಿಕೆಗಳಲ್ಲಿ "ರಾಷ್ಟ್ರೀಯ ರಂಗಮಹೋತ್ಸವ" ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಈ ಪ್ರಯುಕ್ತ ಕರ್ನಾಟಕದ ರಾಜಧಾನಿ ಬೆಂಗಳೂರಿನ ಎನ್.ಆರ್ .ಕಾಲೋನಿಯ ಸಿ. ಅಶ್ವತ್ಥ್ ಕಲಾಮಂದಿರದಲ್ಲಿ ಬೆಂಗಳೂರಿನ "ಯಕ್ಷಕಲಾ ಅಕಾಡೆಮಿ (ರಿಜಿಸ್ಟರ್ಡ್)" ಯಿಂದ ರಾಣಿ ಕಿತ್ತೂರ ಚೆನ್ನಮ್ಮ ಎಂಬ ಯಕ್ಷಗಾನ ಪ್ರಸಂಗ ಜುಲೈ 15ನೇ ತಾರೀಖಿನ ಬುಧವಾರ ಸಂಜೆ 6 ಗಂಟೆಗೆ ಸರಿಯಾಗಿ ಕಾರ್ಯಕ್ರಮ ಆರಂಭಗೊಂಡಿತು.

ಹಿರಿಯ ಯಕ್ಷ ಕವಿ ಶ್ರೀಧರ್ ಡಿಎಸ್ ಅವರಿಂದ ರಚಿಸಲ್ಪಟ್ಟ ರಾಣಿ ಕಿತ್ತೂರು ಚೆನ್ನಮ್ಮ ಪ್ರಸಂಗವು ಯುವ ನಿರ್ದೇಶಕಿ ಚಿಕ್ಕಲಾ ಕೆ ತುಂಗ ಇವರ ದಕ್ಷ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.

ಕಿತ್ತೂರ ದೇಸಾಯಿ ಮಲ್ಲಪ್ಪ ಸರ್ಜನಿಂದ ಕಥಾನಕ ಆರಂಭಗೊಂಡಿತು. ಬೇಟೆಯಲ್ಲಿ ಭೇಟಿಯಾದ ಚೆನ್ನಮ್ಮ , ಹುಲಿಯನ್ನು ಕೊಂದ ಮಲ್ಲಸರ್ಜರನ್ನು ತನ್ನ ಸಂಸ್ಥಾನ, ಕಾಕತಿಗೆ ಆಹ್ವಾನಿಸುತ್ತಾಳೆ. ಜೊತೆಯಲ್ಲಿ ಬಂದ ಮಲ್ಲಸರ್ಜರನ್ನು ತನ್ನ ತಂದೆ, ಧೂಳಪ್ಪ ದೇಸಾಯಿಗೆ ಪರಿಚಯಿಸುವುದರೊಂದಿಗೆ ಭವಿತವ್ಯದಲ್ಲಿ ತಾನು ಮಲ್ಲಸರ್ಜರನ್ನೇ ವಿವಾಹವಾಗುವುದಾಗಿ ಅಲವತ್ತುಕೊಳ್ಳುತ್ತಾಳೆ. ಇದಕ್ಕೊಪ್ಪಿದ ಧೂಳಪ್ಪ ದೇಸಾಯಿ ಮಲ್ಲಸರ್ಜ ನಲ್ಲಿ ಮಗಳ ಅಭಿಪ್ರಾಯವನ್ನು ಬಿತ್ತರಿಸುತ್ತಾನೆ. ಮಂತ್ರಿ ಗುರುಸಿದ್ದಪ್ಪನ ದೂರಾಲೋಚನೆಗೆ ಮಣಿದು, ಮಲ್ಲಸರ್ಜ ಚೆನ್ನಮ್ಮಳನ್ನು ವಿವಾಹವಾಗುತ್ತಾನೆ.

ಸವತಿಯನ್ನು ಸಂತೋಷದಿಂದ ಮನೆತುಂಬಿಸಿಕೊಂಡ ರುದ್ರಮ್ಮ (ರುದ್ರಾಂಬೆ), ಮಗ ಶಿವಲಿಂಗ ರುದ್ರ ಸರ್ಜನ ಹೊಣೆಗಾರಿಕೆಯನ್ನು ಅವಳಿಗೆ ಒಪ್ಪಿಸುತ್ತಾಳೆ. ಮರಾಠ ಬಾಜೀರಾಯನು ಮೋಸದಿಂದ ಮಲ್ಲಸರ್ಜನನ್ನು ಕೊಲ್ಲುತ್ತಾನೆ. ಯುವರಾಜ ಶಿವಲಿಂಗ ರುದ್ರಸರ್ಜನಿಗೆ ಚೆನ್ನಮ್ಮ ಪಟ್ಟಕಟ್ಟುತ್ತಾಳೆ. ಅವನೂ ನಿಗೂಢ ರೋಗಕ್ಕೆ ತುತ್ತಾಗಿ ಶಿವಪದವನ್ನೈದುತ್ತಾನೆ.

   ಬ್ರಿಟಿಷರ ದತ್ತು ಪುತ್ರನಿಗೆ ಅಧಿಕಾರವಿಲ್ಲ ಎಂಬ ಕಾನೂನನ್ನು ಮೀರಿ ಚೆನ್ನಮ್ಮ ದತ್ತು ಪುತ್ರನನ್ನು ಪಟ್ಟಾಭಿಷೇಕಗೊಳಿಸುತ್ತಾಳೆ. ಈ ವಿಷಯವನ್ನು ಕಿತ್ತೂರ ಸಂಸ್ಥಾನದ ದ್ರೋಹಿಗಳಾದ ಮಲ್ಲಪ್ಪ ಶೆಟ್ಟಿ ಹಾಗೂ ವೆಂಕಟರಾಯರು ಧಾರವಾಡದ ಥ್ಯಾಕರೆ ಗೆ ದೂರನ್ನು ನೀಡುತ್ತಾರೆ.

 ದಂಡೆತ್ತಿ ಬಂದ ಥ್ಯಾಕರೆಯನ್ನು ಚೆನ್ನಮ್ಮಳ ಬಲಗೈ ಬಂಟ ಬಾಳಪ್ಪ ಕೊಲ್ಲುತ್ತಾನೆ. ಇದರಿಂದ ಕ್ರುದ್ಧರಾದ ಚಾಪ್ಲಿನ್ ಮತ್ತಷ್ಟು ಸೈನ್ಯದೊಂದಿಗೆ ಬಂದು ಮಲ್ಲಪ್ಪ ಶೆಟ್ಟಿ ಹಾಗೂ ವೆಂಕಟರಾಯರ ಮೋಸದ ಬಲದೊಂದಿಗೆ ಚೆನ್ನಮ್ಮಳನ್ನು ವಂಚನೆಯಿಂದ ಸೆರೆ ಹಿಡಿಯುತ್ತಾನೆ.

 ಸಂಗೊಳ್ಳಿ ರಾಯಣ್ಣ ಬಂದು ಚೆನ್ನಮ್ಮಳ ಆಶೀರ್ವಾದವನ್ನು ಪಡೆದು, ಮತ್ತಷ್ಟು ಯುವಕರ ಸೈನ್ಯವನ್ನು ಕಟ್ಟಿ, ಛತ್ರಪತಿ ಶಿವಾಜಿಯವರ ಗೆರಿಲ್ಲ ಮಾದರಿಯ ಯುದ್ಧದಂತೆ ಕೂಟಯುದ್ಧದಿಂದ ಬ್ರಿಟಿಷರಿಗೆ ತಲೆ ನೋವಾಗಿ ಪರಿಣಮಿಸುತ್ತಾನೆ ಆಗ ಚಾಪ್ಲಿನ್ ,ರಾಯಣ್ಣನ ಮಾವ ಲಕ್ಕಪ್ಪನು ನೊಂದಿಗೆ ಕೈಜೋಡಿಸಿ, ಸ್ನಾನ ಮಾಡುತ್ತಿದ್ದ ರಾಯಣ್ಣನನ್ನು ಮೋಸದಿಂದ ಹಿಡಿದು ಸೆರೆಮನೆಗೆ ತಳ್ಳುತ್ತಾನೆ. ಈ ವಿಷಯವನ್ನು ಕೇಳಿ ತಿಳಿದ ಚೆನ್ನಮ್ಮ ತನ್ನ ಕಿತ್ತೂರಿನ ಸ್ವಾತಂತ್ರ್ಯದ ಆಶಾ ಜ್ಯೋತಿ ನಂದಿತೆಂದು ದುಃಖಿಸಿ ಮರಣವನ್ನ ಪ್ಪುತ್ತಾಳೆ" ಎಂಬಲ್ಲಿಗೆ ಕಿತ್ತೂರ ರಾಣಿ ಚೆನ್ನಮ್ಮ ಆಖ್ಯಾನ ಮುಗಿಯುತ್ತದೆ.

 ಪ್ರಸಂಗದ ಮುಖ್ಯ ಪಾತ್ರ ಚೆನ್ನಮ್ಮಳಾಗಿ ಕುಮಾರಿ ಪೂಜಾ ಆಚಾರ್ಯ ತಮ್ಮ ಉತ್ತಮ ಅಭಿನಯ ಹಾಗೂ ಸ್ವರಗಳ ಏರಿಳಿತಗಳಿಂದ ಜನಮನ ರಂಜಿಸಿದರು.

 ರಾಘವೇಂದ್ರ ಐತಾಳ್ ಮಲ್ಲಸರ್ಜನಾಗಿ ತಮ್ಮ ಅಭಿನಯ ಸಾಮರ್ಥ್ಯವನ್ನು ಪ್ರಕಟಿಸಿದರು.

 ಸಂಗೊಳ್ಳಿ ರಾಯಣ್ಣನಾಗಿ ಅಭಿನವ ತುಂಗ ಅವರು ತಮ್ಮ ಚುರುಕಿನ ನೃತ್ಯಗಳಿಂದ ರಂಗವನ್ನು ಮುನ್ನಡೆಸಿದರು. ಕೊನೆಯಲ್ಲಿ 16 ಕಲಾವಿದರ ಒಂದೇ ಮಾತರಂ ಪದ್ಯಕ್ಕೆ ಅಭಿನಯ ಮನೋಜ್ನವಾಗಿ ಮೂಡಿ ಬಂತು ಕಾರ್ಯಕ್ರಮವನ್ನು ಸಂಘಟಿಸಿದ ಸಂಗೀತ ನಾಟಕ ಅಕಾಡೆಮಿಯ ಪ್ರಯತ್ನ ಸಾರ್ಥಕವಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು