ತಾಳಮದ್ದಲೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿ ಯಕ್ಷಗಾನ ಕಲಾರಂಗವು ಹಿರಿಯ ತಾಳಮದ್ದಲೆ ಅರ್ಥಧಾರಿಗಳಿಗೆ ಕಲಾಸಕ್ತ ಮಟ್ಟಿ ಮುರಳೀಧರ ರಾವ್ ಮತ್ತು ಹಿರಿಯ ಅರ್ಥಧಾರಿ ಪೆರ್ಲ ಕೃಷ್ಣ ಭಟ್ಟರ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಮಾಡುತ್ತಾ ಬಂದಿದ್ದು, ಈ ವರ್ಷದಿಂದ ಡಿ. ಬಿ. ವೆಂಕಟಸುಬ್ಬಾ ಜೋಯಿಸ್ ನೆನಪಿನ ಪ್ರಶಸ್ತಿಯೊಂದಿಗೆ ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 11, 2026 ಶನಿವಾರ ಸಂಜೆ 4.00 ಗಂಟೆಗೆ ಐವೈಸಿ ಸಭಾಭವನದಲ್ಲಿ ಜರುಗಲಿದೆ. ಹಿರಿಯ ಅರ್ಥಧಾರಿಗಳಾದ ಡಾ. ಜಿ. ಕೆ. ಹೆಗಡೆ ಹೊನ್ನಾವರ, ಕೋಟೆ ರಾಮ ಭಟ್ ಕಾರ್ಕಳ ಮತ್ತು ವೆಂಕಟರಾಮ ಭಟ್ಟ ಸುಳ್ಯ ಇವರಿಗೆ ಅನುಕ್ರಮವಾಗಿ ಮಟ್ಟಿ ಮುರಳೀಧರ ರಾವ್, ಪೆರ್ಲ ಕೃಷ್ಣ ಭಟ್ಟ ಹಾಗೂ ಡಿ. ಬಿ. ವೆಂಕಟಸುಬ್ಬಾ ಜೋಯಿಸ್ ನೆನಪಿನ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದು. ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರು ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಡಾ. ಟಿ. ಶ್ಯಾಮ ಭಟ್ ವಹಿಸಲಿದ್ದಾರೆ. ಪುತ್ತೂರಿನ ವಿಶ್ರಾಂತ ಪ್ರಾಧ್ಯಾಪಕರೂ, ಹಿರಿಯ ವಿದ್ವಾಂಸರೂ ಆದ ಡಾ. ತಾಳ್ತಜೆ ವಸಂತ ಕುಮಾರ್ ಶುಭಾಶಂಸನೆಗೈಯಲಿದ್ದು, ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್‍ನ ನಿರ್ದೇಶಕರಾದ ಮೋಹನ ಭಾಸ್ಕರ ಹೆಗಡೆ, ಕುಂಭಾಶಿಯ ಹಿರಿಯ ಸಾಮಾಜಿಕ ಧುರೀಣರಾದ ಕೃಷ್ಣಪ್ರಸಾದ ಅಡ್ಯಾಂತಾಯ ಅಭ್ಯಾಗತರಾಗಿ ಉಪಸ್ಥಿತರಿರುತ್ತಾರೆ. ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವದಲ್ಲಿ ಅಪರಾಹ್ನ 1.00ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ತಾಳಮದ್ದಲೆ ‘ಶ್ರೀರಂಗ ತುಲಾಭಾರ’ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು